More

    ಬರಿಗೈಯಲ್ಲಿ ಚರಂಡಿ ಸ್ವಚ್ಛತೆ; ಎಲ್ಲಿದೆ ಮಾನವೀಯತೆ?

    ಬೆಳಗಾವಿ: ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪೌರಕಾರ್ಮಿಕರು ಯಾವುದೇ ಸುರಕ್ಷತಾ ಸಾಧನವಿಲ್ಲದೆ ಚರಂಡಿ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪರಿಕರ ಒದಗಿಸಿ ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ತೋರದ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸ್ಮಾರ್ಟ್‌ಸಿಟಿ ಯೋಜನೆಯಡಿ ಕೋಟ್ಯಂತರ ರೂ. ವೆಚ್ಚದಲ್ಲಿ ನಗರದ ಹಳೇ ಪಿಬಿ ರಸ್ತೆಯಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಅಧಿಕಾರಿಗಳು, ಗುತ್ತಿಗೆದಾರರು ಚರಂಡಿ ಸ್ವಚ್ಛತೆಗೆ ಯಂತ್ರಗಳ ಬದಲಾಗಿ, ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದಾರೆ. ಕೈಗವಸು ಹಾಗೂ ಬೂಟ್ ಧರಿಸದೆ ಅಸುರಕ್ಷಿತ ಕ್ರಮದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

    ಜನರ ನಿರ್ಲಕ್ಷ್ಯ: ನಗರ ವಾಸಿಗಳು ಮನೆಯಲ್ಲಿ ಹಾಗೂ ಅಂಗಡಿ ಹಾಗೂ ಮಾಂಸಾಹಾರಿ ಹೋಟೆಲ್‌ಗಳಲ್ಲಿ ಬಳಸಿಬಿಟ್ಟ ಕೊಳಚೆ ನೀರನ್ನು ಈ ಚರಂಡಿಯಲ್ಲಿ ಹರಿಬಿಡಲಾಗುತ್ತದೆ. ಆದರೆ, ನಗರದ ಅನೇಕ ಭಾಗಗಳಲ್ಲಿ ಅಂಗಡಿ, ಮನೆಗಳ ತ್ಯಾಜ್ಯವನ್ನು ಕಸದ ಬುಟ್ಟಿಯಲ್ಲಿ ಸಂಗ್ರಹಿಸಿ, ಮನೆ ಬಾಗಿಲಿಗೆ ಬರುವ ಪಾಲಿಕೆಯ ಕಸದ ವಾಹನಗಳಿಗೆ ನೀಡದೆ ಚರಂಡಿಯಲ್ಲಿ ಎಸೆಯುತ್ತಿದ್ದಾರೆ.

    ಇದರಿಂದ ಚರಂಡಿ ನೀರು ಸರಾಗವಾಗಿ ಹರಿಯದೆ, ಅಲ್ಲಲ್ಲಿ ಮ್ಯಾನ್‌ಹೋಲ್ ಮೂಲಕ ಉಕ್ಕಿಹರಿದು ರಸ್ತೆಯ ಮೇಲೆ ಮಳೆ ನೀರಿನಂತೆ ಹರಿಯುತ್ತಿರುತ್ತದೆ. ಇಂತಹ ತುಂಬಿದ ಚರಂಡಿ ಸ್ವಚ್ಛತೆಗೆ ಪಾಲಿಕೆ ಅಧಿಕಾರಿಗಳು ಯಂತ್ರಗಳ ಬದಲಾಗಿ ಅಸುರಕ್ಷಿತ ಕ್ರಮದಲ್ಲಿ ಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಛತೆ ಮಾಡಿಸುತ್ತಿದ್ದಾರೆ.

    ಕ್ರಮಕ್ಕೆ ಆಗ್ರಹ: ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ವಿವಿಧ ಭಾಗಗಳಲ್ಲಿ 2, 5 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಕಾರ್ಮಿಕರಿಗೆ ಗ್ಲೌಸ್, ಮಾಸ್ಕ್, ಬೂಟ್ ಸೇರಿದಂತೆ ಅಗತ್ಯ ಸುರಕ್ಷತಾ ಸಾಮಗ್ರಿ ನೀಡದಿರುವುದು ಖಂಡನೀಯ. ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾದರೆ ಯಾರು ಜವಾಬ್ದಾರಿ? ಅವರೂ ನಮ್ಮಂತೆ ಮನುಷ್ಯರಲ್ಲವೇ? ಸರ್ಕಾರ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ಮಾರುತಿ ಬಿರಾದಾರ ಆಗ್ರಹಿಸಿದ್ದಾರೆ.

    ಸ್ವಚ್ಛತಾ ಕಾಮಗಾರಿಗಳಿಗೆ ಯಂತ್ರಗಳ ಬದಲಾಗಿ ಕಾರ್ಮಿಕರನ್ನು ಬಳಕೆ ಮಾಡಿಕೊಂಡಿರುವ ಸಂಗತಿ ಗಮನಕ್ಕೆ ಇಲ್ಲ. ಈ ಕುರಿತು ಮಾಹಿತಿ ಪಡೆದು ಕ್ರಮ ಜರುಗಿಸಲಾಗುವುದು.
    | ಶಶಿಧರ ಕುರೇರ ಸ್ಮಾರ್ಟ್‌ಸಿಟಿ ಎಂ.ಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts