ಖಾಸಗಿ ಶಾಲೆಗಳಿಲ್ಲಿ ಪ್ರವೇಶ ಶುಲ್ಕದ ಶೇ.50 ಕಡಿತಕ್ಕೆ ಸಮ್ಮತಿಸಿವೆ

Mizo schools
Published on

ಬೆಂಗಳೂರು: ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಆರಂಭಕ್ಕೆ ಸಿದ್ಧತೆಗಳು ಆರಂಭವಾಗಿವೆ. ಪ್ರಥಮ ಪಿಯು ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಜೂನ್​ ಮೊದಲ ವಾರದಲ್ಲಿ ದ್ವಿತೀಯ ಪಿಯು ಇಂಗ್ಲಿಷ್​ ಪರೀಕ್ಷೆ ನಡೆಯುವ ಸಾಧ್ಯತೆ ಇದ್ದರೆ, ಎರಡನೇ ವಾರದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ನಡೆಸಲು ಚಿಂತನೆ ನಡೆದಿದೆ.

ಅತ್ತ, ಮಹಾರಾಷ್ಟ್ರದಲ್ಲಿ ವಿವಿಧ ತರಗತಿಗಳ ಯತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಅವಕಾಶ ನೀಡಲಾಗಿದ್ದು, ಶಿಕ್ಷಕರು ಈ ಉದ್ದೇಶಕ್ಕಾಗಿ ಪ್ರಯಾಣ ಕೈಗೊಳ್ಳಲು ನಿರ್ಬಂಧ ಸಡಿಲಿಸಲಾಗಿದೆ.

ಇನ್ನೊಂದೆಡೆ, ಮಿಜೋರಾಂನಲ್ಲಿ ಖಾಸಗಿ ಶಾಲಾ- ಕಾಲೇಜುಗಳು ಪಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿವೆ. ಶಾಲಾ ಶುಲ್ಕವನ್ನು ಶೇ.50 ಕಡಿಮೆ ಮಾಡಲು ಒಪ್ಪಿಕೊಂಡಿವೆ.

ಈ ಹಿಂದೆ ರಾಜ್ಯದ ಶಿಕ್ಷಣ ಸಚಿವ ಲಾಲ್​ಚಂದ್ಮಾ ರಾಲ್ಟೆ ಶುಲ್ಕ ವಿನಾಯ್ತಿಯನ್ನು ನೀಡುವಂತೆ ಖಾಸಗಿ ಶಾಲೆಗಳ ಒಕ್ಕೂಟವಾದ ಮಿಜೋರಾಂ ಇಂಡಿಪೆಂಡೆಂಟ್​ ಸ್ಕೂಲ್ಸ್​ ಅಸೋಸಿಯೇಷನ್​ಗೆ (ಮೀಸಾ) ಕೋರಿದ್ದರು. ಆದರೆ, ಸಿಬ್ಬಂದಿಗೆ ಸಂಬಳ ನೀಡಬೇಕಾದ ಕಾರಣ ಶುಲ್ಕ ಕಡಿತಕ್ಕೆ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ.

ಖಾಸಗಿ ಶಾಲೆಗಳ ನಡೆಗೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಶುಲ್ಕ ಕಡಿಮೆ ಮಾಡುವುದಾಗಿ ತಿಳಿಸಿವೆ. ಆದರೆ, ಇದು ಲಾಕ್​ಡೌನ್​ ಅವಧಿಗೆ ಮಾತ್ರ ಅನ್ವಯಿಸಲಿದೆ. ವಿದ್ಯಾರ್ಥಿಗಳು ಈಗಾಗಲೇ ಶುಲ್ಕ ಪಾವತಿಸಿದ್ದರೆ, ಮುಂದಿನ ತಿಂಗಳ ಶುಲ್ಕ ಪಾವತಿಸಬೇಕಿಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟ ತಿಳಿಸಿದೆ.

ರಾಜ್ಯದಲ್ಲಿ ಇನ್ನೇನು ಪ್ರವೇಶಾತಿ ಪ್ರಕ್ರಿಯೆ ಆರಂಭಚಾಗಬೇಕಿದೆ. ಮಕ್ಕಳ ಶುಲ್ಕದಲ್ಲಿ ಕೊಂಚವಾದರೂ ವಿನಾಯ್ತಿ ನೀಡುತ್ತವೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ ಪಾಲಕರು.

In Mizoram Private schools to charge only 50 per cent fees during lockdown
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net