More

    ಗಂಜಾಂನಲ್ಲಿ ಗುಂಡಿಗಳದ್ದೇ ದರ್ಬಾರು

    ಶ್ರೀರಂಗಪಟ್ಟಣ: ಪಾರಂಪರಿಕ ನಾಡಹಬ್ಬ ದಸರೆಗೆ ಮದುವಣಗಿತ್ತಿಯಂತೆ ಶ್ರೀರಂಗಪಟ್ಟಣ ಶೃಂಗಾರಗೊಂಡು ಮೆರುಗು ನೀಡುತ್ತಿದ್ದರೆ, ಮಗ್ಗುಲಲ್ಲಿರುವ ಗಂಜಾಂ ಗುಂಡಿಗಳು ತುಂಬಿದ ರಸ್ತೆಯಿಂದ ನರಳುತ್ತಿದೆ.

    ಐತಿಹಾಸಿಕ ಹಿನ್ನೆಲೆ, ಪಾರಂಪರಿಕ ಸ್ಮಾರಕಗಳು ಹಾಗೂ ಪೌರಾಣಿಕ ದೇವಾಲಯಗಳ ನೆಲೆಯೊಂದಿಗೆ ನೈಸರ್ಗಿಕ ಸಿರಿ ಸಂಪತ್ತನ್ನು ನೋಡಬಯಸುವ ಪ್ರವಾಸಿಗರು ಶ್ರೀರಂಗಪಟ್ಟಣದ ಬಳಿಕ ಗಂಜಾಂಗೆ ಭೇಟಿ ಕೊಡುವುದು ಕಡ್ಡಾಯ. ಆದರೆ ಈ ಗಂಜಾಂಗೆ ತೆರಳುವ ಎಲ್ಲ ಮಾರ್ಗಗಳು ಸಂಪೂರ್ಣ ಹಳ್ಳ-ಗುಂಡಿಯಿಂದಲೇ ಕೂಡಿರುವುದಕ್ಕೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ನಿತ್ಯ ಈ ರಸ್ತೆಯಲ್ಲಿ ಸಂಚರಿಸಿ ಒಂದಿಲ್ಲೊಂದು ಸಮಸ್ಯೆ ಅನುಭವಿಸುತ್ತಿರುವ ಗಂಜಾಂನ ಗ್ರಾಮಸ್ಥರು ತಮಗೆ ಒದಗಿಬಂದಿರುವ ದುಸ್ಥಿತಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಶ್ರೀರಂಗಪಟ್ಟಣದಿಂದ ಗಂಜಾಂಗೆ ತೆರಳುವ ರಸ್ತೆಯಲ್ಲಿ ಇತ್ತೀಚೆಗೆ ಕೇವಲ 330 ಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದು, ಇನ್ನುಳಿದ ರಸ್ತೆ ಯಥಾಸ್ಥಿತಿಯಲ್ಲಿದೆ. ಈ ರಸ್ತೆಯಲ್ಲಿ ತೆರಳಲು ಜನರು ಸೇರಿದಂತೆ ಪ್ರವಾಸಿಗರು ಯಮಯಾತನೆ ಅನುಭವಿಸುತ್ತಿದ್ದಾರೆ.

    ಪ್ರಮುಖ ಪ್ರವಾಸಿ ತಾಣ: ಶ್ರೀರಂಗಪಟ್ಟಣ ತನ್ನೊಳಗೆ ಅಡಕವಾಗಿರುವ ಐತಿಹಾಸಿಕತೆಯಿಂದ ವಿಶ್ವಾದ್ಯಂತ ಹೆಸರುಗಳಿಸಿದ್ದಾದರೂ ಇದರ ಜೀವಾಳವಾಗಿ ಗಂಜಾಂ ಸಂಪತ್ತು ಭರಿತ ಮಾಹಿತಿಗಳಿಂದಲೇ ಪ್ರಖ್ಯಾತಿ ಹೊಂದಿದೆ. ಗಂಜಾಂ ಪ್ರವೇಶದಲ್ಲಿ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ, ಗುಂಬಸ್, ದ್ವಿಮುಖಗೊಂಡು ಶ್ರೀರಂಗಪಟ್ಟಣವನ್ನು ಸುತ್ತುವರಿದು ದ್ವೀಪವನ್ನಾಗಿಸುವ ಕಾವೇರಿ ನದಿ ಲೋಕಪಾವನಿಯೊಂದಿಗೆ ಸಂಧಿಸುವ ಸುಂದರ ತಾಣ ತ್ರಿವೇಣಿ ಸಂಗಮ. ರಾಜ್ಯ, ಹೊರ ರಾಜ್ಯಗಳ ಲಕ್ಷಾಂತರ ಭಕ್ತರು ಆಗಮಿಸುವ ಶಕ್ತಿ ದೇವತಾ ಕೇಂದ್ರ ಶ್ರೀ ನಿಮಿಷಾಂಬ ದೇಗುಲ ಸೇರಿದಂತೆ ಪ್ರಕೃತಿ ತಾಣ ಗೋಸಾಯಿಘಾಟ್‌ಅನ್ನು ಒಳಗೊಂಡಿದ್ದು, ಇಲ್ಲಿಗೆ ವಾರಾಂತ್ಯದಲ್ಲಿ ಲಕ್ಷಾಂತರ ಹಾಗೂ ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ.

    ಬಹುತೇಕ ಎಲ್ಲ ಬೀದಿಗಳ ರಸ್ತೆಗಳೂ ಅಧ್ವಾನ: ಜಗತ್ತಿನ ಗಣಿ ಕಣಜವಾಗಿ ವ್ಯಾಪಾರ, ವಾಣಿಜ್ಯ, ಕಾರ್ಖಾನೆ ಸೇರಿದಂತೆ ಬಹು ಉದ್ದೇಶಗಳಿಂದ ಟಿಪ್ಪು ಸುಲ್ತಾನನಿಂದ ನಿರ್ಮಾಣಗೊಂಡ ಗಂಜಾಂನ ರಸ್ತೆಗಳು ಪ್ರಸ್ತುತ ಅಧ್ವಾನದ ಸ್ಥಿತಿಯಲ್ಲಿವೆ. ಗಂಜಾಂನ ಖುರಾದ್ ಬೀದಿ, ಪೇಟೆ ಬೀದಿ, ಶುಕ್ರವಾರ ಪೇಟೆ ಬೀದಿ, ಮಚ್ಚಿ ಬಜಾರ್, ಅಂಬೇಡ್ಕರ್ ಬೀದಿ, ಬೆಸ್ತಗೇರಿ, ಕೆಮ್ಮಣ್ಣು ಗುಂಡಿ ಬೀದಿ, ಹಳೇ ಪೊಲೀಸ್ ಸ್ಟೇಷನ್ ರಸ್ತೆ, ದನ ತಡೆಯೋ ಬೀದಿ, ಆರ್ಕಾಟ್ ಬೀದಿ, ಒಲೆ ಕುಯ್ಯುವ ಬೀದಿ, ಪಾಂಚಾಳರ ಬೀದಿ(ಗಾಡಿ ಕಾರ್ಖಾನೆ) ರಸ್ತೆ, ಗುಂಬಸ್ ರಸ್ತೆ, ಮಾರಿ ಗುಡಿ ಬೀದಿ, ನಿಮಿಷಾಂಬ ಹಾಗೂ ಗೋಸಾಯಿ ಘಾಟ್‌ಗೆ ತೆರಳುವ ರಸ್ತೆಗಳಲ್ಲಿ ಆಳುದ್ದ ಹಳ್ಳ ಬಿದ್ದು ತೀವ್ರ ಹಾಳಾಗಿ ಅಪಘಾತಗಳಿಗೆ ಬಾಯ್ತರೆದು ನಿಂತಿದ್ದು, ದ್ವಿಚಕ್ರ ಹಾಗೂ ಆಟೋಗಳಲ್ಲಿ ಸಂಚರಿಸುವ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.

    ರಾತ್ರಿ ವೇಳೆ ತೆರಳಲು ಭಯ: ಶ್ರೀರಂಗಪಟ್ಟಣದಿಂದ 2 ಕಿ.ಮೀ.ದೂರದ ಗಂಜಾಂಗೆ ರಾತ್ರಿ ವೇಳೆ ತೆರಳಲು ವಿದ್ಯುತ್ ಬೀದಿ ದೀಪದ ಕಂಬಗಳು ಇಲ್ಲದ ಕಾರಣ ಸಾಕಷ್ಟು ಜನರು ಭಯಪಡುವ ಪರಿಸ್ಥಿತಿ ಈಗಲೂ ಮುಂದುವರಿದಿದೆ. ಶ್ರೀರಂಗಪಟ್ಟಣದಿಂದ ತಾಲೂಕು ಸಾರ್ವಜನಿಕ ಆಸ್ಪತ್ರೆವರೆಗೆ ವಿದ್ಯುತ್ ಬೀದಿ ಸಾಲು ದೀಪಗಳು ಇದ್ದು, ಅಲ್ಲಿಂದ ಬೇಸಿಗೆ ಅರಮನೆ ಹಾಗೂ ಜೋಡಿ ರಸ್ತೆ ಮುಂಭಾಗ ಹೊರತುಪಡಿಸಿ ಉಳಿದೆಲ್ಲಾ ಸ್ಥಳಗಳಲ್ಲೂ ವಿದ್ಯುತ್ ಕಂಬದಲ್ಲಿ ದೀಪದ ವ್ಯವಸ್ಥೆ ಇಲ್ಲ. ಹೀಗಾಗಿ ಕೆಲಸ ಮುಗಿಸಿ ಮನೆಗೆ ಎಷ್ಟೋ ಮಹಿಳೆಯರು ಹಾಗೂ ಪಟ್ಟಣದಲ್ಲಿ ಶಿಕ್ಷಣ ಮುಗಿಸಿ ಮನೆಗೆ ಹಿಂದಿರುಗುವ ವಿದ್ಯಾರ್ಥಿನಿಯರು ಕತ್ತಲಿನಲ್ಲಿ ಸಂಚರಿಸಲು ಹಿಂದೇಟು ಹಾಕಿ ಭಯ ಬೀಳುತ್ತಾರೆ.

    10 ವರ್ಷಗಳಿಂದಲೂ ಗಂಜಾಂಗೆ ತೆರಳಲು ಜನರಿಗೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಬೇಸಿಗೆ ಅರಮನೆ ಮುಂಭಾಗ ಜೋಡಿ ರಸ್ತೆ ಹಾಗೂ ದಾಸಪ್ಪನ ಕೊಳ ಸಮೀಪದಲ್ಲಿ ಉಂಟಾಗಿರುವ ಗುಂಡಿಗಳನ್ನು ದುರಸ್ತಿಪಡಿಸದ ಹಿನ್ನೆಲೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ದುಸ್ಥಿತಿಯಲ್ಲಿದ್ದರೂ ಕ್ಷೇತ್ರದ ಶಾಸಕರು, ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಗಂಜಾಂನ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು.
    ಶಿವರಾಜ್ ಖಾಸಗಿ ಕಂಪನಿ ನೌಕರ, ಗಂಜಾಂನ ನಿವಾಸಿ

    ಈ ಹಿಂದೆ ಶಾಸಕರಾಗಿದ್ದ ರವೀಂದ್ರ ಶ್ರೀಕಂಠಯ್ಯ ಅವಧಿಯಲ್ಲಿ ಶ್ರೀರಂಗಪಟ್ಟಣದಿಂದ ಗಂಜಾಂನ ಜೋಡಿ ರಸ್ತೆವರೆಗೂ ಅಭಿವೃದ್ಧಿ ಪಡಿಸಲು ಅಂದಾಜುಪಟ್ಟಿ ತಯಾರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಈ ಮಧ್ಯೆ ವಿಧಾನಸಭಾ ಚುನಾವಣೆ ನಡೆದು ಸರ್ಕಾರ ಬದಲಾಗಿ ನಂತರ ನಡೆದ ಕಾಮಗಾರಿಯಲ್ಲಿ ಕೇವಲ 330 ಮೀಟರ್ ಮಾತ್ರ ಕಾಮಗಾರಿ ನಡೆಸಿ ಅಭಿವೃದ್ಧಿಪಡಿಸಿ ಉಳಿದ ರಸ್ತೆಯನ್ನು ಹಾಗೆ ಉಳಿಸಲಾಗಿದೆ. ಸರ್ಕಾರ ಯಾವುದೇ ಇರಲಿ ಜನರ ಅನುಕೂಲಕ್ಕಾಗಿ ಮೊದಲು ರಸ್ತೆಯನ್ನು ಅಭಿವೃದ್ಧಿಪಡಿಸಬೇಕು.
    ಗಂಜಾಂ ಕೃಷ್ಣಪ್ಪ ಸದಸ್ಯ, ಪುರಸಭೆ

    ನಗರೋತ್ಥಾನ ಯೋಜನೆಯಡಿ 330 ಮೀಟರ್ ಉದ್ದದ ಕಾಮಗಾರಿಗೆ 4 ಕೋಟಿ ರೂ.ಅನುದಾನ ಬಿಡುಗಡೆಯಾಗಿತ್ತು. ಲಭ್ಯವಿರುವ ಅನುದಾನದಲ್ಲಿ ಗುಣಮಟ್ಟದ ಕಾಮಗಾರಿ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಪುನಃ ಸಿಗುವ ಯೋಜನೆಗಳಲ್ಲಿ ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಿ ಸರ್ಕಾರದಿಂದ ಶೀಘ್ರ ಅನುದಾನ ತರುವುದಾಗಿ ಕ್ಷೇತ್ರದ ಶಾಸಕರು ಚಿಂತನೆ ನಡೆಸಿದ್ದು, ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಬೀದಿ ದೀಪದ ಕಂಬಗಳ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು.
    ರಾಣಿ ಮುಖ್ಯಾಧಿಕಾರಿ, ಪುರಸಭೆ, ಶ್ರೀರಂಗಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts