More

    ಆರನೇ ವೇತನ ಆಯೋಗ ಜಾರಿಗಾಗಿ ಸಿಎಂ ಜತೆ ಚರ್ಚೆ

    ಚಿತ್ರದುರ್ಗ: ಕೆಎಸ್‌ಆರ್‌ಟಿಸಿ ನೌಕರರು ಆರನೇ ವೇತನ ಆಯೋಗ ಜಾರಿ ಮಾಡುವಂತೆ ಬಹುದಿನಗಳಿಂದಲೂ ಬೇಡಿಕೆ ಇಟ್ಟಿದ್ದು, ಕೂಡಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೊಳಲ್ಕೆರೆ ಶಾಸಕ, ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಭರವಸೆ ನೀಡಿದರು.

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದಿಂದ ನಿಗಮದ ಡಿಪೋ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನೌಕರರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಮೂಲಕ ಅನುಕೂಲ ಮಾಡಿಕೊಡಲಾಗುವುದು ಎಂದರು.

    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಿಸುವ ಸಂಬಂಧ ಸಿಎಂ ಈಗಾಗಲೇ ಘೋಷಣೆ ಮಾಡಿದ್ದಾರೆ. ಸರ್ಕಾರ ಹಲವು ಸಮುದಾಯಗಳ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಉಚಿತ ಬಸ್‌ ಪಾಸ್‌ ಸೌಲಭ್ಯ ಕಲ್ಪಿಸಿದೆ. ಜತೆಗೆ ಅಂತಿಮ ಸೆಮಿಷ್ಟರ್‌ ಪರೀಕ್ಷೆ ಎಂಬ ಕಾರಣಕ್ಕೆ ಅವಧಿ ವಿಸ್ತರಿಸುವ ಮೂಲಕ ಅನುಕೂಲ ಮಾಡಿಕೊಟ್ಟಿದೆ. ನಿಗಮಕ್ಕೆ ಕೆಲ ವಸ್ತುಗಳ ಖರೀದಿಯಿಂದ ಉಂಟಾಗುತ್ತಿದ್ದ ನಷ್ಟವನ್ನು ತಪ್ಪಿಸಲಾಗಿದೆ ಎಂದು ಹೇಳಿದರು.

    ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಇಲ್ಲದಿದ್ದರೆ, ಇಂದು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಲು ದುಪ್ಪಟ್ಟು ಹಣ ತೆತ್ತು ಸಂಚರಿಸುವ ಪರಿಸ್ಥಿತಿ ಎದುರಾಗುತ್ತಿತ್ತು. ಸಂಸ್ಥೆಯಿಂದಾಗಿ ಇದು ಕೂಡ ತಪ್ಪಿದೆ. ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿಯೂ ಸಂಸ್ಥೆ ಶ್ರಮಿಸುತ್ತಿದೆ ಎಂದ ಅವರು, ಮಹರ್ಷಿ ವಾಲ್ಮೀಕಿ ಈ ದೇಶದ ಮಹಾನ್‌ ಸಂತ. ಅವರ ಆಶೀರ್ವಾದದೊಂದಿಗೆ ಇನ್ನಷ್ಟು ಉತ್ತಮ ಕೆಲಸ ಮಾಡುತ್ತೇನೆ. ಅಧಿಕಾರಿ ಇರಲಿ, ಇಲ್ಲದಿರಲಿ ಜನಸೇವೆಗೆ ಸಿದ್ಧ ಎಂದು ಭರವಸೆ ನೀಡಿದರು.

    ಕಾದಂಬರಿಕಾರ ಬಿ.ಎಲ್.ವೇಣು ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿತ ರಾಮಾಯಣದಲ್ಲಿ ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ, ಆಂಜನೇಯ ಒಳಗೊಂಡು ಬರುವಂಥ ಅನೇಕ ಪಾತ್ರಗಳು ಸನ್ಮಾರ್ಗದಲ್ಲಿ ನಡೆಯಲು ಇಂದಿಗೂ ದಾರಿದೀಪವಾಗಿವೆ. ಆದರ್ಶಮಯ ಬದುಕು ನಡೆಸಲು ಇದೊಂದು ಉತ್ತಮ ಗ್ರಂಥವಿದ್ದಂತೆ ಎಂದು ಬಣ್ಣಿಸಿದರು.

    ವಾಲ್ಮೀಕಿ ಅವರು ಇಡೀ ಸಮಾಜವನ್ನು ಉತ್ತಮ ದಿಕ್ಕಿನೆಡೆಗೆ ಕೊಂಡೊಯ್ಯಲು ಪ್ರಯತ್ನಿಸಿದ ಮಹನೀಯರಲ್ಲಿ ಒಬ್ಬರು. ಅವರ ಪ್ರತಿ ಕಾವ್ಯವೂ ಒಳಿತನ್ನೇ ಬಯಸಿದೆ. ಹೀಗಾಗಿ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಮಹಾಪುರುಷರೆಲ್ಲರೂ ಮಾನವ ಕುಲ ಒಗ್ಗೂಡಿಸುವ, ಸಮಾನರಾಗಿ ಬದುಕುವ ತತ್ವ ಬೋಧಿಸಿದ್ದು, ಅದನ್ನು ಅಳವಡಿಸಿಕೊಂಡರೆ ಸರ್ವರೂ ಪ್ರೀತಿ, ವಿಶ್ವಾಸದಿಂದ ಬಾಳಬಹುದು ಎಂದು ಸಲಹೆ ನೀಡಿದರು.

    ಪ್ರಾಧ್ಯಾಪಕ ಕರಿಯಪ್ಪ ಮಾಳಿಗೆ ಮಾತನಾಡಿ, ವಾಲ್ಮೀಕಿ ಅವರ ಕುರಿತು ಸಾಕಷ್ಟು ಕಟ್ಟುಕತೆಗಳಿದ್ದು, ಅವೆಲ್ಲವನ್ನೂ ತಿಳಿಗೊಳಿಸಲಾಗಿದೆ. ಇವರ ತತ್ವಾದರ್ಶ ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಅದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸುವ ಕೆಲಸಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

    ಇದೇ ವೇಳೆ ಚಂದ್ರಪ್ಪ, ವೇಣು ಸೇರಿ ಗಣ್ಯರನ್ನು ಸನ್ಮಾನಿಸಲಾಯಿತು. ವಿಭಾಗೀಯ ಪ್ರಭಾರ ನಿಯಂತ್ರಣಾಧಿಕಾರಿ ಬಿ.ಜಿ.ಮಂಜುನಾಥ್‌, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜು, ಕಲಬುರ್ಗಿ ನಿಗಮದ ಕಾರ್ಮಿಕ ಕಲ್ಯಾಣ ಅಧಿಕಾರಿ ಸಿ.ಇ.ಶ್ರೀನಿವಾಸಮೂರ್ತಿ, ಚಿತ್ರದುರ್ಗ ವಿಭಾಗೀಯ ಯಾಂತ್ರಿಕ ಅಭಿಯಂತರ ಟಿ.ಎಂ.ಅಯಾಜ್‌, ಕಾರ್ಮಿಕ ಕಲ್ಯಾಣಾಧಿಕಾರಿ ಎಸ್‌.ಎಸ್.ನಿರಂಜನಮೂರ್ತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ಎಚ್.ನಾಗರಾಜ್‌, ಸಹಾಯಕ ಆಡಳಿತಾಧಿಕಾರಿ ಎಸ್.ಗುರುಶಾಂತ್, ಸಹಾಯಕ ಲೆಕ್ಕಾಧಿಕಾರಿ ಎಲ್.ಚೇತನ, ಸಹಾಯಕ ಉಗ್ರಾಣಾಧಿಕಾರಿ ಎಂ.ಮಂಜುನಾಥ್‌, ಸಹಾಯಕ ಕಾನೂನು ಅಧಿಕಾರಿ ವೀಣಾಕುಮಾರಿ, ಭದ್ರತಾ ಅಧೀಕ್ಷಕ ಎಸ್.ಎಫ್‌.ತಳವಾರ್‌, ಅಧಿಕಾರಿಗಳಾದ ಚಂದ್ರಶೇಖರ್‌, ಎಂ.ಎಂ.ಹುಸೇನ್‌, ದೇವೇಂದ್ರಪ್ಪ, ಕೆ.ಸಿದ್ದೇಶ್‌, ಮಮತಾ ಇತರರಿದ್ದರು.

    ಕೋಟ್
    ಸತ್ಕಾರ್ಯದಲ್ಲಿ ತೊಡಗುವವರಿಗೆ ಜಯ, ಕೆಡಕು ಮಾಡುವವರಿಗೆ ಉಳಿಗಾಲವಿಲ್ಲ ಎಂಬುದು ವಾಲ್ಮೀಕಿ ಅವರ ರಾಮಾಯಣದಿಂದ ನಾವೆಲ್ಲರೂ ತಿಳಿದಿದ್ದೇವೆ. ಆದ್ದರಿಂದ ಸಾಧ್ಯವಾದಷ್ಟು ದೇಶ ಮತ್ತು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಸಜ್ಜನರಾಗಿ ಬಾಳೋಣ.‌
    ಕರಿಯಪ್ಪ ಮಾಳಿಗೆ, ಪ್ರಾಧ್ಯಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts