More

    ಹನೆಹಳ್ಳಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ

    ಬ್ರಹ್ಮಾವರ: ಸರ್ಕಾರ ಮತ್ತು ಅಧಿಕಾರಿಗಳು ಅಕ್ರಮ ಗಣಿಗಾರಿಕೆ, ಮರಳುಗಾರಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕೆಲವೆಡೆ ಎಗ್ಗಿಲ್ಲದೆ ನಡೆಯುತ್ತದೆ. ಇದಕ್ಕೆ ಉದಾಹರಣೆ ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡೀಮಠದ ಶಿಲೆಕಲ್ಲು ಗಣಿಗಾರಿಕೆ.

    ಹನೆಹಳ್ಳಿ ಗ್ರಾಮದ ಸರ್ವೇ ನಂಬರ್ 197 ಮತ್ತು 139/1ಕ್ಕೆ ತಾಗಿಕೊಂಡಿದ್ದ ಜಾಗದಲ್ಲಿ ಪರವಾನಗಿ ಇಲ್ಲದೆ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು, ಇದರಿಂದ ಸುತ್ತಮುತ್ತಲಿನ ಜನ ಆತಂಕಗೊಂಡಿದ್ದಾರೆ. ಗಣಿಗಾರಿಕೆ ಸ್ಥಳದಿಂದ 30 ಮೀಟರ್ ಅಂತರದಲ್ಲಿ ಗ್ರಾಪಂ ಕುಡಿಯುವ ನೀರಿನ ಟ್ಯಾಂಕ್, ರಸ್ತೆ, ವಿದ್ಯಾರ್ಥಿನಿಲಯ, ನಾಗಬನವಿದೆ. ಗಣಿಗಾರಿಕೆಯಿಂದ ಇವೆಲ್ಲದರ ಮೇಲೂ ಅಪಾಯ ಸಂಭವಿಸುವ ಸಾಧ್ಯತೆಯಿದೆ.

    14 ವರ್ಷದ ಹಿಂದೆ ಬಂಡೀಮಠದಲ್ಲಿ ಕಲ್ಲು ಗಣಿಗಾರಿಕೆ ನಡೆದಿದ್ದು, ಗ್ರಾಮಸ್ಥರ ವಿರೋಧದ ಬಳಿಕ ಸ್ಥಳ ಪರಿಶೀಲಿಸಿದ ಅಂದಿನ ಜಿಲ್ಲಾಧಿಕಾರಿ ಗೌರವ್ ಗುಪ್ತಾ ಲಿಖಿತ ಆದೇಶ ನೀಡಿ ಗಣಿಗಾರಿಕೆ ಸ್ಥಗಿತಗೊಳಿಸಿದ್ದರು. ಈಗ ಮತ್ತೆ ಅದೇ ಜಾಗದ ಸಮೀಪ ಕಲ್ಲು ಸ್ಫೋಟದ ಸದ್ದು ಕೇಳಲಾರಂಭಿಸಿದೆ. ಗ್ರಾಮಸ್ಥರು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿ ಕಂದಾಯ ಇಲಾಖೆ ಮೂಲಕ ಅಕ್ರಮ ಗಣಿಗಾರಿಕೆ ಸ್ಥಳ ಪರಿಶೀಲಿಸಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಈ ಹಿಂದೆಯೂ ಬಂಡೀಮಠದಲ್ಲಿ ಶಿಲೆಕಲ್ಲು ಗಣಿಗಾರಿಕೆಯಿಂದ ಉಂಟಾದ ಅನಾಹುತಗಳಿಂದ ಗ್ರಾಮಸ್ಥರು ಒಟ್ಟಾಗಿ ಹೋರಾಟ ಮಾಡಿ ಸ್ಥಗಿತಗೊಳಿಸಿದ್ದೇವೆ. ಈಗ ಪುನಃ ಆರಂಭಗೊಂಡಿದೆ. ಗಣಿಗಾರಿಕೆ ನಿಲುಗಡೆ ಮಾಡುವಂತೆ ವಿನಂತಿಸಿದ್ದೇವೆ. ಆದರೂ ಮುಂದುವರಿದಿದೆ. ಗ್ರಾಮದ ಜನರೆಲ್ಲ ಒಟ್ಟಾಗಿ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
    – ಸುಬ್ಬ ನಾಯ್ಕ ಬಂಡೀಮಠ

    ಹನೆಹಳ್ಳಿ ಪಂಚಾಯಿತಿ ಅನುಮತಿಯಿಲ್ಲದೆ ಗಣಿಗಾರಿಕೆ ನಡೆಸುತ್ತಿದ್ದ ಬಗ್ಗೆ ಗ್ರಾಪಂ ಸಭೆಯಲ್ಲಿ ವಿಷಯ ಚರ್ಚೆಗೆ ಬಂದ ಕಾರಣ ಅನಧಿಕೃತ ಗಣಿಗಾರಿಕೆ ಸ್ಥಳವನ್ನು ಗ್ರಾಪಂ ಅಧಿಕಾರಿಗಳು ಪರಿಶೀಲಿಸಿ ಸ್ಥಗಿತಗೊಳಿಸಿದ್ದೇವೆ. ಈಗ ಪುನರಾರಂಭಗೊಂಡಿರುವುದರ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದು, ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.
    – ಉಮೇಶ್ ಕಲ್ಯಾಣಪುರ, ಹನೆಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts