More

    ಮೀಸಲು ಅರಣ್ಯದಲ್ಲಿ 33 ಕ್ವಾರಿಗಳು ; ಕಲ್ಲು ಗಣಿಗಾರಿಕೆ ಅಕ್ರಮದಲ್ಲಿ ಅರಣ್ಯಾಧಿಕಾರಿಗಳು ಶಾಮೀಲು

    ತುಮಕೂರು : ಕಲ್ಪತರು ನಾಡಿನ ಕಲ್ಲು ಗಣಿಗಾರಿಕೆಯಲ್ಲಿ ಬಗೆದಷ್ಟೂ ಅಕ್ರಮದ ಧೂಳು ಏಳುತ್ತಿದೆ. 49ಕ್ಕೂ ಹೆಚ್ಚು ಅಧಿಕೃತ ಪರವಾನಗಿ ಪಡೆದ ಕ್ರಷರ್‌ಗಳು ಜಿಲ್ಲೆಯಲ್ಲಿ ಇವೆಯಾದರೂ ಮೀಸಲು ಅರಣ್ಯದಲ್ಲಿ 33 ಕ್ವಾರಿಗಳಿವೆ. ಈ ಕ್ವಾರಿಗಳಿಗೆ ಅರಣ್ಯ ಇಲಾಖೆಯೇ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿರುವುದು ಆಘಾತಕಾರಿ ಎನಿಸಿದೆ.

    ಕ್ರಷರ್‌ಗಳು ಹಾಗೂ ಕ್ವಾರಿಗಳಿಗೆ ಪರವಾನಗಿ ಪಡೆಯುವಾಗ ಕಂದಾಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜತೆಗೆ ಅರಣ್ಯ ಇಲಾಖೆಯ ಎನ್‌ಒಸಿ ಮುಖ್ಯ. 2014ರಲ್ಲಿ ಕಲ್ಲು ಗಣಿಗಾರಿಕೆ ಕಾಯ್ದೆ ಜಾರಿಗೆ ತರಲಾಗಿದ್ದು, ಮೀಸಲು ಅರಣ್ಯ ಪ್ರದೇಶದಲ್ಲಿ ಕ್ವಾರಿಗಳಿಗೆ ಅನುಮತಿ ಕೊಡುವಂತಿಲ್ಲ. ಈ ಕಾಯ್ದೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಯಾವುದೇ ಹೊಸ ಕ್ವಾರಿಗಳಿಗೆ ಅನುಮತಿ ನೀಡಿಲ್ಲ. ಆದರೆ, ಕಲ್ಲುಗಣಿಗಾರಿಕೆ ಪರವಾನಗಿ ನವೀಕರಣ ಸಂದರ್ಭದಲ್ಲಿ ಈ ಕಾಯ್ದೆ ಉಲ್ಲಂಘಿಸಿರುವುದು ಜಿಲ್ಲೆಯಲ್ಲಿ ಪತ್ತೆಯಾಗಿದ್ದು ಅರಣ್ಯಾಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ.

    ಇದನ್ನೂ ಓದಿ: 9 ಹಾಗೂ ಪ್ರಥಮ ಪಿಯುಗೆ ಫೆ. 1ರಂದೇ ಪೂರ್ಣಾವಧಿ ತರಗತಿ ಆರಂಭ; ಸಚಿವ ಎಸ್​. ಸುರೇಶ್​ ಕುಮಾರ್ ಮಾಹಿತಿ

    ಮೀಸಲು ಅರಣ್ಯದಲ್ಲಿ 33 ಕ್ವಾರಿ: ಜಿಲ್ಲೆಯಲ್ಲಿ 70 ಕ್ರಷರ್‌ಗಳಿದ್ದು ಸದ್ಯ 49 ಚಾಲ್ತಿಯಲ್ಲಿವೆ. ಇದರಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ 33 ಕ್ವಾರಿಗಳಿರುವುದು ಆಘಾತಕಾರಿ ಅಂಶವೆನಿಸಿದೆ. ತುಮಕೂರು ತಾಲೂಕು ಒಂದರಲ್ಲೇ 24 ಕ್ವಾರಿಗಳು ಮೀಸಲು ಅರಣ್ಯ ಪ್ರದೇಶದಲ್ಲಿವೆ.

    ಅಜ್ಜಪ್ಪನಹಳ್ಳಿ, ಕೌತಮಾರನಹಳ್ಳಿ, ಹಾಲುಗೊಂಡನಹಳ್ಳಿಯಲ್ಲಿ ಒಟ್ಟು 64 ಎಕರೆ ಮೀಸಲು ಅರಣ್ಯಪ್ರದೇಶವಿದ್ದು, ಇದರಲ್ಲಿ 24 ಕ್ವಾರಿಗಳಿಗೆ ಅನುಮತಿ ನೀಡಲಾಗಿದೆ. ಇದರ ಪರಿಣಾಮ ವನ್ಯಜೀವಿಗಳು ಕ್ವಾರಿ ಸುತ್ತಮುತ್ತಲಿನ ಗ್ರಾಮಗಳಿಗೆ ಅಲ್ಲದೆ ನಗರಕ್ಕೂ ನುಗ್ಗಿ ಪ್ರಾಣಿ, ಮಾನವ ಸಂಘರ್ಷಕ್ಕೆ ಕಾರಣವಾಗಿದೆ.

    ಕೊರಟಗೆರೆಯಲ್ಲಿ 5 ಕ್ವಾರಿಗಳು, ಮಧುಗಿರಿಯಲ್ಲಿ 4 ಕ್ವಾರಿಗಳು ಮೀಸಲು ಅರಣ್ಯಪ್ರದೇಶದಲ್ಲಿವೆ. ಕೊರಟಗೆರೆ ತಾಲೂಕಿನ ಜಗನ್ನಾಥಪುರ, ಹೊಲತಾಳು ಮೀಸಲು ಅರಣ್ಯ ಪ್ರದೇಶದಲ್ಲಿ 25. 25 ಎಕರೆ ಪ್ರದೇಶದಲ್ಲಿ 5 ಕ್ವಾರಿಗಳಿಗೆ ಕಲ್ಲುಗಣಿಗಾರಿಕೆಗೆ ಅರಣ್ಯಾಧಿಕಾರಿಗಳೇ ಎನ್‌ಒಸಿ ನೀಡಿದ್ದಾರೆ. ಅದೇ ರೀತಿ ಮಧುಗಿರಿಯ ಗುಟ್ಟೆ ಹಾಗೂ ಬ್ಯಾಲ್ಯದಲ್ಲಿ 12 ಎಕರೆ ಮೀಸಲು ಅರಣ್ಯ ಪ್ರದೇಶದಲ್ಲಿ 4ಕ್ವಾರಿಗಳಿವೆ.  ಅರಣ್ಯ ಪ್ರದೇಶದಲ್ಲಿನ ಕ್ವಾರಿಗಳ ಪರವಾನಗಿ ನವೀಕರಿಸುವ ಮೂಲಕ ಅರಣ್ಯಾಧಿಕಾರಿಗಳೇ ಕಾಯ್ದೆ ಉಲ್ಲಂಘಿಸಿರುವುರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.

    2018ರ ನಂತರವೂ ಎನ್‌ಒಸಿ : 2014ರಲ್ಲಿ ಕಲ್ಲುಗಣಿಗಾರಿಕೆ ಕಾಯ್ದೆ ಜಾರಿಯಾದ ಬಳಿಕ ಮೀಸಲು ಅರಣ್ಯ ಪ್ರದೇಶದಲ್ಲಿ ಕ್ವಾರಿಗೆ ಅನುಮತಿ ನೀಡದಿರಲು ಕ್ರಮವಹಿಸಲಾಗಿದೆ. ಆದರೆ, ಈ ಕಾಯ್ದೆ ಜಾರಿಗೆ ಬರುವ ಮುನ್ನ ಕಲ್ಲುಗಣಿಗಾರಿಕೆಗೆ ಲೀಸ್‌ನಲ್ಲಿ ಅನುಮತಿ ನೀಡಲಾಗಿತ್ತು. ಕೆಲವು ಕ್ವಾರಿಗಳ ಪರವಾನಗಿ ನವೀಕರಣಕ್ಕೆ ಬಂದಿದ್ದು 2018ರ ನಂತರವೂ ಅರಣ್ಯ ಇಲಾಖೆ ಎನ್‌ಒಸಿ ನೀಡಿರುವುದು ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯೇ ಎನ್‌ಒಸಿ ನೀಡಿರುವುದರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪರವಾನಗಿ ನವೀಕರಿಸಿದೆ.

    ತಿಮ್ಲಾಪುರ ಕರಡಿಧಾಮ : ಕೊರಟಗೆರೆ ತಾಲೂಕಿನಲ್ಲಿ ತಿಮ್ಲಾಪುರ ಕರಡಿಧಾಮ ಘೋಷಣೆ ಆದ ಬಳಿಕ 2 ಕಿ.ಮೀ., ವ್ಯಾಪ್ತಿಯ ಪೆಮ್ಮದೇವರಹಳ್ಳಿ ಹಾಗೂ ದಾಸರಹಳ್ಳಿ ಪ್ರದೇಶದ 6 ಕ್ವಾರಿ ಮತ್ತು ಇದಕ್ಕೆ ಹೊಂದಿಕೊಂಡಿದ್ದ 3 ಕ್ರಷರ್‌ಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸ್ಥಗಿತಗೊಳಿಸಿದೆ.

    ಮೀಸಲು ಅರಣ್ಯ ಪ್ರದೇಶದಲ್ಲಿ ಕ್ವಾರಿಗಳಿಗೆ 2018ರ ನಂತರವೂ ಅರಣ್ಯ ಇಲಾಖೆ ಎನ್‌ಒಸಿ ನೀಡಿದ್ದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಪರವಾನಗಿ ನವೀಕರಿಸಿದೆ. ಈಗ ಎಚ್ಚೆತ್ತುಕೊಂಡಿರುವ ಅರಣ್ಯಾಧಿಕಾರಿಗಳು ಕ್ವಾರಿಗಳಲ್ಲಿ ಕಲ್ಲು ಗಣಿಗಾರಿಕೆೆ ಸ್ಥಗಿತಗೊಳಿಸಲು ಶಿಫಾರಸು ಮಾಡಿದ್ದಾರೆ. ಆದರೆ, ಪಟ್ಟಾ ಜಮೀನಿನಲ್ಲಿ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಕ್ರಷರ್‌ಗಳನ್ನು ಆರಂಭಿಸಿರುವವರು ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
    ಮಹೇಶ್, ಉಪನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತುಮಕೂರು

    ಸುರಕ್ಷತಾ ವಲಯ ಗುರುತಿಸಿ  ಕಲ್ಲು ಗಣಿಗಾರಿಕೆ ಗೆ ಅನುಮತಿ ನೀಡಲಾಗಿದೆ. ಗಣಿಗಾರಿಕೆಗೆ ಸ್ಥಗಿತಗೊಳಿಸಿದ್ದೇ ಆದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತುಹೋಗಲಿವೆ. ಕಾನೂನು ಉಲ್ಲಂಘಿಸಿ, ಅಕ್ರಮವಾಗಿ ನಡೆಯುವ ಕ್ರಷರ್‌ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ನೂರಕ್ಕೆ ನೂರು ಎಲ್ಲವೂ ಸರಿ ಇದೆ ಎನ್ನಲು ಆಗುವುದಿಲ್ಲ.
    ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

    ಜಿಲ್ಲೆಯಲ್ಲಿ ಚಿರತೆಗಳ ಹಾವಳಿಗೆ ಮೂಲ ಕಾರಣ ಕಲ್ಲುಗಣಿಗಾರಿಕೆ. ಬೆಟ್ಟ-ಗುಡ್ಡಗಳು, ಕುರುಚಲುಗಿಡ ಚಿರತೆಗಳ ಆವಾಸ ಸ್ಥಾನವಾಗಿದೆ. ಬಂಡೆ ಸ್ಫೋಟಿಸುವುದರಿಂದ ಪ್ರಾಣಿಗಳ ನೆಮ್ಮದಿ ಹಾಳಾಗಲಿದೆ. ಇದರಿಂದ ಅವುಗಳ ನಡವಳಿಕೆಯೇ ಬದಲಾಗಿದೆ. ಹೆಣ್ಣು ಚಿರತೆ ಜತೆ ಒಮ್ಮೆ ಕೂಡುತ್ತಿದ್ದ ಗಂಡು ಚಿರತೆ ಹೆಚ್ಚು ಬಾರಿ ಕೂಡಿ ಸಂತತಿ ಹೆಚ್ಚಾಗಲು ಕಾರಣವಾಗಲಿದೆ. ಇದರಿಂದ ಚಿರತೆ ದಾಳಿ ಹೆಚ್ಚುತ್ತಿದ್ದು ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಕಲ್ಲುಗಣಿಗಾರಿಕೆಗೆ ಕಡಿವಾಣ ಹಾಕದಿದ್ದರೆ ಜನರ ಪ್ರಾಣದ ಜತೆ ಚೆಲ್ಲಾಟವಾಡಿದಂತಾಗಲಿದೆ.
    ಟಿವಿಎನ್ ಮೂರ್ತಿ, ವನ್ಯಜೀವಿ ಜಾಗೃತಿ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts