More

    ಮದ್ಯ ಅಕ್ರಮ ಮಾರಾಟಕ್ಕಿಲ್ಲ ತಡೆ ; ಹಳ್ಳಿಗಳಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ದಂಧೆ

    ತುಮಕೂರು : ಗ್ರಾಮೀಣ ಪ್ರದೇಶದಲ್ಲಿ ಕರೊನಾ ಲಾಕ್‌ಡೌನ್ ವೇಳೆ ಎಗ್ಗಿಲ್ಲದೆ ಸಾಗಿದ್ದ ಮದ್ಯ ಅಕ್ರಮ ಮಾರಾಟ ನಿರಂತರವಾಗಿ ಮುಂದುವರಿದಿದೆ. ರಾಜಕೀಯ ಮುಖಂಡರ ಕುಮ್ಮಕ್ಕಿನಿಂದ ನಡೆಯುತ್ತಿರುವ ಅಕ್ರಮಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳ ಅಂಕುಶ ಇಲ್ಲದಾಗಿದೆ.

    ಜಿಲ್ಲೆಯಲ್ಲಿ ಅವ್ಯಾಹತವಾಗಿ ಮುಂದುವರಿದಿರುವ ಜೂಜಾಟ ಹಾಗೂ ಅಕ್ರಮ ಮದ್ಯ ಮಾರಾಟ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ಕೈಚೆಲ್ಲಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಮದ್ಯದ ಘಾಟು ಮೂಗಿಗೆ ಬಡಿಯುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಮೂಗುಮುಚ್ಚಿ ಕುಳಿತಿದ್ದಾರೆ.

    ರಾಜಕೀಯ ಕುಮ್ಮಕ್ಕು: ಮದ್ಯ ಅಕ್ರಮ ಮಾರಾಟಕ್ಕೆ ರಾಜಕೀಯ ನಾಯಕರ ಕುಮ್ಮಕ್ಕಿದ್ದು ಸಣ್ಣಪುಟ್ಟ ಗೂಡಂಗಡಿಗಳಲ್ಲಿ ಮದ್ಯ ಮಾರಾಟವನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಪುಡಾರಿ ಮನೆಗಳಲ್ಲೇ ಮದ್ಯ ಮಾರಾಟ ನಡೆಯುತ್ತಿದೆ. ಅಂಗಡಿ, ಮನೆಗಳಲ್ಲಿ ಸಂಗ್ರಹಿಸಿಡದೆ ಪ್ರತಿನಿತ್ಯ ಸಮೀಪದ ವೈನ್ಸ್ ಶಾಪ್‌ಗಳಲ್ಲಿ ಎಂಆರ್‌ಪಿ ಬೆಲೆಗೆ ವಿವಿಧ ಮದ್ಯಗಳನ್ನು ತಂದು ಪ್ರತಿ ಬಾಟಲಿಗೆ 20 ರಿಂದ 40ರೂ., ಹೆಚ್ಚುವರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ದಿನಸಿ ಅಂಗಡಿಗಳಲ್ಲಿ ಎಲ್ಲ ರೀತಿಯ ಕಡಿಮೆ ದರದ ಮದ್ಯಗಳು ದೊರೆಯಲಿವೆ. ಈ ಮದ್ಯಗಳನ್ನು ಹೆಚ್ಚುವರಿ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಮದ್ಯಕ್ಕಾಗಿ ಹತ್ತಾರು ಕಿ.ಮೀ. ಹೋಗುವಂತಿಲ್ಲ. ಹಳ್ಳಿಗಳಲ್ಲೇ ಮದ್ಯ ಸಿಗುವುದರಿಂದ ಪುಂಡಾಟಿಕೆ, ಗಲಾಟೆ ಹೆಚ್ಚಳಕ್ಕೂ ಕಾರಣವಾಗಿದೆ.

    ಪರವಾನಗಿ ಪಡೆಯದೆ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ಸಾಕ್ಷೃ ಸಮೇತ ಪೊಲೀಸ್, ಅಬಕಾರಿ ಇಲಾಖೆ ಗಮನಕ್ಕೆ ತಂದರೂ ಜನರ ಕಣ್ಣೊರೆಸಲು ದಾಳಿ ನಾಟಕ ಮಾಡಲಾಗುತ್ತದೆ. ದಾಳಿ ಮಾಡಿ ಅಕ್ರಮ ಮದ್ಯ ಮಾರಾಟ ದಂಧೆ ಪತ್ತೆ ಹಚ್ಚಿದ್ದರೂ ರಾಜಕೀಯ ಪ್ರಭಾವದಿಂದಾಗಿ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೇ ಇರುವುದು ಅನುಮಾನಗಳನ್ನು ಹುಟ್ಟುಹಾಕಿದೆ.

    ತೆಂಗಿನಮಟ್ಟೆಗಳಲ್ಲೂ ಬಚ್ಚಿಡುತ್ತಾರೆ : ಮನೆಯ ದೇವರ ಕೋಣೆ, ಸ್ನಾನದ ಕೋಣೆ, ತೆಂಗಿನ ಮಟ್ಟೆಗಳಲ್ಲಿ ಮದ್ಯ ಸಂಗ್ರಹಿಸಿಟ್ಟು ಮಾರಾಟ ಮಾಡಲಾಗುತ್ತದೆ. ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಆಪ್ತರೇ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದು ಇದಕ್ಕೆ ಪೊಲೀಸರು, ಅಬಕಾರಿ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಲು ಹಿಂದೇಟು ಹಾಕುವಂತಾಗಿದೆ.

    18 ವಾಹನ ವಶ : ಕಳೆದ ಒಂದೂವರೆ ತಿಂಗಳಲ್ಲಿ ತುಮಕೂರು ತಾಲೂಕಿನಲ್ಲಿ ಮದ್ಯ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ 32 ಮೊಕದ್ದಮೆ ಹೂಡಲಾಗಿದೆ. ಅಲ್ಲದೆ, ಅಕ್ರಮ ಮದ್ಯ ಮಾರಾಟ ಸಾಗಿಸುತ್ತಿದ್ದ 18 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

    ಒಬ್ಬ ವ್ಯಕ್ತಿ 2.3 ಲೀಟರ್ ಮದ್ಯ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಅದಕ್ಕಿಂತ ಹೆಚ್ಚು ಮದ್ಯ ಸಂಗ್ರಹಿಸಿದ್ದು ಕಂಡುಬಂದಲ್ಲಿ ಅಂಥವರ ವಿರುದ್ಧ ದೂರು ದಾಖಲಿಸಿ, ದಂಡ ವಿಧಿಸಲಾಗುವುದು. ಹಳ್ಳಿಗಳ ಗೂಡಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವ ದೂರುಗಳು ಬಂದ ಕಡೆ ದಾಳಿ ಮಾಡಿ ಕ್ರಮವಹಿಸಲಾಗಿದೆ.
    ಶೈಲಜಾಕೋಟೆ. ಜಿಲ್ಲಾ ಅಬಕಾರಿ ಆಯುಕ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts