More

    ಮಕ್ಕಳಾಗದಿದ್ದರೆ ಚಿಂತೆ ಬೇಡ; ವೈದ್ಯ ವಿಜ್ಞಾನದಲ್ಲಿದೆ ಪರಿಹಾರ…

    ಕಾರಣಾಂತರದಿಂದ ಮಕ್ಕಳಾಗಿರದ ದಂಪತಿಗಳಿಗೆ ಈ ಕೊರತೆಯನ್ನು ನೀಗಿಸಲು ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಹಲವು ಚಿಕಿತ್ಸೆಗಳಿವೆ. ಕೃತಕ ಗರ್ಭಧಾರಣೆಯಂಥ ಸುಧಾರಿತ ವೈದ್ಯಕೀಯ ತಂತ್ರಜ್ಞಾನ ಆಧಾರಿತ ಸೌಲಭ್ಯಗಳಿವೆ. ಆದರೆ, ಎಷ್ಟೋ ಜನರಿಗೆ ಇವುಗಳ ಸರಿಯಾದ ಮಾಹಿತಿ ಇರುವುದಿಲ್ಲ. ಈ ನಿಟ್ಟಿನಲ್ಲಿ ನೇರವಾಗಿ ತಜ್ಞ ವೈದ್ಯರೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಳ್ಳಲು ಅನುವು ಮಾಡಿಕೊಡುವ ಸದುದ್ದೇಶದಿಂದ ವಿಶ್ವ ಪ್ರನಾಳ ಶಿಶು (ಐವಿಎಫ್) ದಿನದ ನಿಮಿತ್ತ ಶನಿವಾರ ‘ವಿಜಯವಾಣಿ’ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮ ಜರುಗಿತು. ತಜ್ಞ ವೈದ್ಯರಾದ ಧಾರವಾಡದ ಸವೋದಯ ಫರ್ಟಿಲಿಟಿ ಆಂಡ್ ಐವಿಎಫ್ ಸೆಂಟರ್​ನ ಡಾ. ಗೀತಾ ಭರತ್ (ಉತ್ತೂರ) ಹಾಗೂ ಡಾ. ಗಾಯತ್ರಿ ಅ. ಉದಗಟ್ಟಿ (ಉತ್ತೂರ) ಅವರು ಕೇಳುಗರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಪರಿಹಾರ ಒದಗಿಸಿದರು. ವಿದೇಶ, ಹೊರರಾಜ್ಯ ಹಾಗೂ ರಾಜ್ಯಾದ್ಯಂತ ಅಪಾರ ಸಂಖ್ಯೆಯಲ್ಲಿ ಜನರು ಕರೆ ಮಾಡಿ ತಮ್ಮ ಸಮಸ್ಯೆಗಳ ಬಗೆಗೆ ಮುಕ್ತವಾಗಿ ರ್ಚಚಿಸಿದ್ದು ವಿಶೇಷವಾಗಿತ್ತು.

    ಸರ್ವೋದಯ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಗೀತಾ ಭರತ್ (ಉತ್ತೂರ), ಡಾ. ಗಾಯತ್ರಿ ಉದಗಟ್ಟಿ (ಉತ್ತೂರ) ಅಭಯ

    ಹುಬ್ಬಳ್ಳಿ: ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಯಾವ ದಂಪತಿಯೂ ನಿರಾಸೆಯಾಗಬೇಕಿಲ್ಲ. ಸುಧಾರಿತ ವೈದ್ಯಕೀಯ ತಂತ್ರಜ್ಞಾನಗಳು ಪ್ರನಾಳ ಶಿಶುವಿನಂಥ ವಿಧಾನದ ಮೂಲಕ ಮಕ್ಕಳನ್ನು ಹೊಂದಿ ಬದುಕಿನ ಸಮೃದ್ಧಿಯನ್ನು ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿವೆ. ಸಕಾಲದಲ್ಲಿ ಚಿಕಿತ್ಸೆ ಮಾಡಿಸಿಕೊಂಡು ಈಗಾಗಲೇ ಅನೇಕ ದಂಪತಿಗಳು ಮುದ್ದಾದ ಮಗುವನ್ನು ಪಡೆದಿದ್ದಾರೆ…

    ಜು. ೨೫ರಂದು ಆಚರಿಸಲಾಗುವ ವಿಶ್ವ ಪ್ರನಾಳ ಶಿಶು (ಐವಿಎಫ್) ದಿನದ ನಿಮಿತ್ತ ‘ವಿಜಯವಾಣಿ’ ಹುಬ್ಬಳ್ಳಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಧಾರವಾಡ ಗಿರಿನಗರದಲ್ಲಿರುವ ಸರ್ವೋದಯ ಆಸ್ಪತ್ರೆಯ ಪ್ರಸೂತಿ, ಸ್ತ್ರೀರೋಗ ಮತ್ತು ಐವಿಎಫ್ ತಜ್ಞೆ ಡಾ. ಗೀತಾ ಭರತ್ (ಉತ್ತೂರ) ಹಾಗೂ ಪರಿಣತ ಭ್ರೂಣ ತಜ್ಞೆ ಡಾ. ಗಾಯತ್ರಿ ಅ. ಉದಗಟ್ಟಿ (ಉತ್ತೂರ) ಅವರು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುತ್ತ ಅಭಯ ನೀಡಿದರು.

    ಒಂದು ಗಂಟೆ ನಿಗದಿಯಾಗಿದ್ದ ಫೋನ್ ಇನ್ ಕಾರ್ಯಕ್ರಮದ ಅವಧಿ ಮುಗಿದ ನಂತರವೂ ರಾಜ್ಯದ ನಾನಾ ಕಡೆಗಳಿಂದ ಕರೆಗಳು ಬರುತ್ತಲೇ ಇದ್ದವು. ಹೀಗಾಗಿ, ಹೆಚ್ಚುವರಿ ೪೫ ನಿಮಿಷ ಕರೆಗಳನ್ನು ಸಮಾಧಾನದಿಂದ ಸ್ವೀಕರಿಸಿದ ಅವರು, ಹಲವು ದಂಪತಿಗಳ ಶಂಕೆಯನ್ನು ನಿವಾರಿಸಿ ವಿಶ್ವಾಸ ಹೆಚ್ಚಿಸಿದರು. ಹೊರರಾಜ್ಯ ಮತ್ತು ಹೊರ ದೇಶಗಳಿದಿಂದಲೂ ಕರೆ ಮಾಡಿ ಚರ್ಚಿಸಿದ್ದು ವಿಶೇಷವಾಗಿತ್ತು. ಫೋನ್- ಇನ್ ಕಾರ್ಯಕ್ರಮದಲ್ಲಿ ವೈದ್ಯ ಸೋದರಿಯರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಉತ್ತರ ನೀಡಿದರು. ಅನೇಕರಿಗೆ ಪರಿಹಾರವನ್ನೂ ಸೂಚಿಸಿದರು. ಅದರ ವಿವರಗಳು ಇಲ್ಲಿವೆ.

    ಬಾಡಿಗೆ ತಾಯಿ- ಅಪೂರ್ವ ಅವಕಾಶ

    ‘ಬಾಡಿಗೆ ತಾಯಿ ಮೂಲಕ ಮಗು ಪಡೆಯುವುದು ಹೇಗೆ’ ಎಂದು ಕೊಪ್ಪದ ನಾಗರತ್ನಾ ಅವರು ಪ್ರಶ್ನಿಸಿದರು. ಬಾಡಿಗೆ ತಾಯಿ (ಸರೋಗೇಟ್ ಮದರ್) ವ್ಯವಸ್ಥೆ ಮೂಲಕ ಮಗು ಪಡೆಯುವುದು ಒಂದು ವೈದ್ಯಕೀಯ ವಿಜ್ಞಾನದ ಅಪೂರ್ವ ಅವಕಾಶವಾಗಿದೆ. ಇದರಿಂದ ನಾನಾ ಕಾರಣಗಳಿಂದ ಮಹಿಳೆ ಗರ್ಭ ಧರಿಸಲು ಸಾಧ್ಯವಾಗದ ಸಂದರ್ಭದಲ್ಲಿ ಆನುವಂಶಿಕವಾಗಿ ತಮ್ಮದೇ ಮಗುವನ್ನು ಹೊಂದಬಹುದಾಗಿದೆ. ದಂಪತಿಯ ವೀರ್ಯಾಣು ಮತ್ತು ಅಂಡಾಣುವಿನಿಂದ ಐವಿಎ್ ಮುಖಾಂತರ ಸೃಷ್ಟಿಯಾದ ಭ್ರೂಣವನ್ನು ಇನ್ನೊಬ್ಬ ಮಹಿಳೆಯ ಗರ್ಭಕೋಶಕ್ಕೆ ವರ್ಗಾಯಿಸಿ ೯ ತಿಂಗಳು ಆಕೆಯ ಗರ್ಭದಲ್ಲಿ ಬೆಳೆಸಿ ಹೆರಿಗೆಯ ನಂತರ ಮಗುವನ್ನು ಅದರ ತಂದೆ- ತಾಯಿಗೆ ಒಪ್ಪಿಸಲಾಗುತ್ತದೆ. ಇಲ್ಲಿ ಬಾಡಿಗೆ ತಾಯಿ ಹಾಗೂ ದಂಪತಿ ನಡುವೆ ಒಪ್ಪಂದವಾಗಿರುತ್ತದೆ. ಬಾಡಿಗೆ ತಾಯಿಯರ ಸೇವೆಯನ್ನು ಒದಗಿಸಲು ನಿರ್ದಿಷ್ಟ ಏಜೆನ್ಸಿಗಳಿವೆ. ಅವುಗಳ ಮೂಲಕ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಮಹಿಳೆಯರಲ್ಲಿ ಹುಟ್ಟಿನಿಂದ ಗರ್ಭಕೋಶ ಇಲ್ಲದಿದ್ದಲ್ಲಿ ಅಥವಾ ಬೆಳವಣಿಗೆ ಸರಿಯಾಗಿ ಆಗದಿದ್ದರೆ, (ಟಿ ಶ್‌ಡೇ) ಅತಿ ಸಣ್ಣ ಗರ್ಭಕೋಶವಿದ್ದರೆ, ವಿವಿಧ ಕಾರಣಗಳಿಂದ ಗರ್ಭಕೋಶ ತೆಗೆಸಿಕೊಂಡವರು, ಗರ್ಭಕೋಶದ ಕಾರಣದಿಂದ ಪುನರಾವರ್ತಿತ ಗರ್ಭಪಾತಗಳಾಗುತ್ತಿದ್ದರೆ, ಅನೇಕ ಬಾರಿ ಐವಿಎ್ ಚಿಕಿತ್ಸೆ ವಿಲಗೊಂಡು, ಭ್ರೂಣವು ಗರ್ಭಕೋಶಕ್ಕೆ ಅಂಟಿಕೊಳ್ಳದಿದ್ದಲ್ಲಿ ಅಂಥ ದಂಪತಿ ಬಾಡಿಗೆ ತಾಯಿಯ ಮುಖಾಂತರ ಮಗುವನ್ನು ಹೊಂದಬಹುದು ಎಂದು ಡಾ. ಗೀತಾ ವಿವರಿಸಿದರು.

    ವಿಮೆ ವ್ಯಾಪ್ತಿಗೆ ಬರಬೇಕು

    ಐವಿಎಫ್ ಚಿಕಿತ್ಸೆಯು ದುಬಾರಿ ಎಂಬ ಅಭಿಪ್ರಾಯವಿದೆ. ಬಡವರಿಗೆ ಇದು ಸಿಗುವುದಿಲ್ಲವೆಂದು ಹೇಳಲಾಗುತ್ತಿದೆ ಎಂದು ಧಾರವಾಡದ ಜಯಶ್ರೀ ಪ್ರಶ್ನಿಸಿದರು. ಸಂತಾನ ಹೀನತೆಗೆ ಸಂಬಂಧಪಟ್ಟ ಚಿಕಿತ್ಸೆಯನ್ನು ಇಲ್ಲಿಯವರೆಗೂ ರೋಗವೆಂದು ಪರಿಗಣಿಸಲ್ಪಟ್ಟಿಲ್ಲ. ಇದನ್ನು ರೋಗವೆಂದು ಪರಿಗಣಿಸಲು ಕೇಂದ್ರ ಸರ್ಕಾರ ಕಾನೂನು ರೂಪಿಸಿದರೆ ಚಿಕಿತ್ಸೆಯು ವಿಮೆ ವ್ಯಾಪ್ತಿಗೆ ಒಳಪಡಲು ಸಾಧ್ಯ. ವಿಮೆ ವ್ಯಾಪ್ತಿಗೆ ಒಳಪಟ್ಟರೆ ಬಡವರಿಗೆ ಅನುಕೂಲವಾಗಲಿದೆ. ಸರ್ವೋದಯ ಐವಿಎಫ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುವ ಬಡವರಿಗೆ ೧ರಿಂದ ೧.೫ ಲಕ್ಷ ರೂಪಾಯಿನಷ್ಟು ಬಡ್ಡಿರಹಿತ ಸಾಲ ನೀಡುವ ವ್ಯವಸ್ಥೆ ಇದೆ. ಮಾಸಿಕ ಕಂತಿನ ರೂಪದಲ್ಲಿ ೧೦ ಸಾವಿರ ರೂಪಾಯಿ ಪಾವತಿಸುವ ಸಾಮರ್ಥ್ಯವುಳ್ಳವರಿಗೆ ಈ ಸೌಲಭ್ಯ ನೀಡಲಾಗುತ್ತಿದೆ ಎಂದು ಡಾ. ಗೀತಾ ಹೇಳಿದರು.

    ಮಕ್ಕಳಾಗದಿದ್ದರೆ ಚಿಂತೆ ಬೇಡ; ವೈದ್ಯ ವಿಜ್ಞಾನದಲ್ಲಿದೆ ಪರಿಹಾರ...

    ಅಂಡಾಣು ದಾನವು ರಕ್ತದಾನದಂತೆ

    ‘ಯಾವ ವಯಸ್ಸಿನಲ್ಲಿ ಮಹಿಳೆ ಅಂಡಾಣು ದಾನ ಮಾಡಬಹುದು’ ಎಂದು ಜಮಖಂಡಿಯ ಪೂರ್ಣಿಮಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ. ಗೀತಾ ಭರತ್ ಅವರು, ಅಂಡಾಣು ದಾನವು ರಕ್ತದಾನದಂತೆ ಪುಣ್ಯದ ಕೆಲಸ. ಒಬ್ಬ ಆರೋಗ್ಯವಂತ ಮಹಿಳೆಯು (ದಾನಿ) ತನ್ನ ಅಂಡಾಣುಗಳನ್ನು ಇನ್ನೊಬ್ಬ ಮಹಿಳೆಗೆ ದಾನವಾಗಿ ಕೊಟ್ಟು, ಐವಿಎಫ್​ ಮುಖಾಂತರ ಆ ಮಹಿಳೆ ತಾಯಿಯಾಗುವ ಕನಸನ್ನು ನನಸು ಮಾಡಲು ಸಾಧ್ಯ ಎಂದು ಹೇಳಿದರು. ಈಗಾಗಲೇ ೧-೨ ಮಕ್ಕಳಾಗಿರುವ ೨೧ರಿಂದ ೩೦ ವರ್ಷದೊಳಗಿನ ಮಹಿಳೆ ಅಂಡಾಣು ದಾನ ಮಾಡಿದರೆ ಉತ್ತಮ ಪರಿಣಾಮ ಇರುತ್ತದೆ. ೩೪-೩೫ ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಅಂಡಾಣುಗಳ ಗುಣಮಟ್ಟ ಹಾಗೂ ಸಂಖ್ಯೆ ತೀರ ಕಡಿಮೆ ಇರುತ್ತದೆ. ಅಂಥವರು ಸಂತಾನ ಹೀನತೆಯಿಂದ ಬಳಲುತ್ತಿದ್ದರೆ ಅಂಡಾಣುಗಳನ್ನು ದಾನ ರೂಪದಲ್ಲಿ ಪಡೆಯುವುದು ಉತ್ತಮ. ಯಾವ ಮಹಿಳೆಗೆ ತನ್ನ ಸ್ವಂತ ಅಂಡಾಣುಗಳಿಂದ ಗರ್ಭ ಧರಿಸಲು ಸಾಧ್ಯವಿಲ್ಲವೋ, ಉದಾಹರಣೆಗೆ ಅಂಡಾಶಯಗಳ ಬೆಳವಣಿಗೆ ಇಲ್ಲದಿರುವುದು, ಋತುಬಂಧದ ಅಥವಾ ಅವಧಿಪೂರ್ಣ ಋತುಬಂಧದಿಂದ ತೊಂದರೆಗೆ ಈಡಾದವರು, ಆನುವಂಶಿಕ ರೋಗ ಪತ್ತೆಯಾಗಿ, ತಮ್ಮ ಮಕ್ಕಳಿಗೆ ಅದು ಬರದಂತೆ ತಡೆಯಬೇಕೆನ್ನುವವರು ಅಂಡಾಣು ದಾನ ಸ್ವೀಕರಿಸಲು ಅರ್ಹರು ಎಂದು ತಿಳಿಸಿದರು.

    ಮಕ್ಕಳಾಗದಿದ್ದರೆ ಚಿಂತೆ ಬೇಡ; ವೈದ್ಯ ವಿಜ್ಞಾನದಲ್ಲಿದೆ ಪರಿಹಾರ...
    ವಿಶ್ವ ಪ್ರನಾಳ ಶಿಶು (ಐವಿಎಫ್) ದಿನದ ನಿಮಿತ್ತ ಶನಿವಾರ ‘ವಿಜಯವಾಣಿ’ ಕಚೇರಿಯಲ್ಲಿ ಆಯೋಜಿಸಿದ್ದ ಫೋನ್- ​ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಧಾರವಾಡದ ಸವೋದಯ ಫರ್ಟಿಲಿಟಿ ಆ್ಯಂಡ್​ ಐವಿಎಫ್ ಸೆಂಟರ್​ನ ಡಾ. ಗೀತಾ ಭರತ್ (ಉತ್ತೂರ) ಅವರನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು ಸ್ವಾಗತಿಸಿದರು. ಡಾ. ಗಾಯತ್ರಿ ಅ. ಉದಗಟ್ಟಿ (ಉತ್ತೂರ) ಇದ್ದರು.

    ಕ್ಯಾನ್ಸರ್‌ಪೀಡಿತರಿಗೆ ವರದಾನ 

    ಕ್ಯಾನ್ಸರ್‌ಪೀಡಿತರು ಮಗು ಪಡೆಯಲು ಸಾಧ್ಯವೇ? ಎಂದು ಚಿತ್ರದುರ್ಗದ ನಂದಿನಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ. ಗಾಯಿತ್ರಿ ಉದಗಟ್ಟಿ, ಐವಿಎಫ್ ಚಿಕಿತ್ಸೆಯು ಕ್ಯಾನ್ಸರ್‌ಪೀಡಿತರಿಗೆ ವರದಾನವಾಗಿದೆ. ಚಿಕ್ಕ ವಯಸ್ಸಿನಲ್ಲಿ ಕ್ಯಾನ್ಸರ್‌ಗೆ ತುತ್ತಾಗುವ ಪುರುಷ-ಮಹಿಳೆಯರು ರೇಡಿಯೋಥೆರಪಿ ಹಾಗೂ ಕೀಮೋಥೆರಪಿಗೆ ಒಳಗಾದರೆ ಅದು ಮಗುವನ್ನು ಹೊಂದುವ ಸಾಮರ್ಥ್ಯವನ್ನು ಕಸಿದುಕೊಳ್ಳುತ್ತದೆ. ಇಂಥವರು ಚಿಕಿತ್ಸೆಗೆ ಒಳಪಡುವ ಮುನ್ನ ತಮ್ಮ ವೀರ್ಯಾಣು- ಅಂಡಾಣು ಅಥವಾ ಭ್ರೂಣವನ್ನು ಶೀತಲೀಕರಿಸಿ ಇಡುವ ಮೂಲಕ ಭವಿಷ್ಯದಲ್ಲಿ ಕ್ಯಾನ್ಸರ್‌ನಿಂದ ಗುಣಮುಖರಾದ ಮೇಲೆ ತಮ್ಮದೇ ಮಗುವನ್ನು ಹೊಂದಬಹುದು. ಸರ್ವೋದಯ ಐವಿಎ್ ಕೇಂದ್ರದಲ್ಲಿ ಕ್ಯಾನ್ಸರ್ ರೋಗಿಗಳ ಲವತ್ತತೆಯ ಸಂರಕ್ಷಣೆಯನ್ನು ಸೇವೆ ಎಂದು ಪರಿಗಣಿಸಿ ಸಂಪೂರ್ಣ ಉಚಿತವಾಗಿ ಮಾಡಲಾಗುವುದು ಎಂದು ತಿಳಿಸಿದರು.

    ಆಹಾರ ಪದ್ಧತಿ ಕಾರಣ 

    ಪುರುಷರು ಮತ್ತು ಮಹಿಳೆಯರಲ್ಲಿ ಸಂತಾನಹೀನತೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಲು ಕಾರಣವೇನು ಎಂದು ಬೆಂಗಳೂರಿನಿಂದ ಗುರುಪ್ರಸಾದ ಎಂಬುವವರು ಕೇಳಿದ ಪ್ರಶ್ನೆಗೆ, ಬದಲಾದ ಆಹಾರ ಪದ್ಧತಿ ಹಾಗೂ ಜೀವನ ಶೈಲಿ ಸಂತಾನಹೀನತೆಗೆ ಕಾರಣ. ತಂಬಾಕು, ಮದ್ಯಪಾನ, ಒತ್ತಡದ ಜೀವನ, ಆಹಾರದಲ್ಲಿ ಮೈದಾ, ಸಕ್ಕರೆ ಬಳಕೆಯು ಮಹಿಳೆಯರಲ್ಲಿ ಅಂಡಾಣುಗಳ ಉತ್ಪತ್ತಿ, ಬೆಳವಣಿಗೆ ಹಾಗೂ ಪುರುಷರಲ್ಲಿ ವಿರ್ಯಾಣು ಸಂಖ್ಯೆ ಚಲನವಲನದ ಮೇಲೆ ಪರಿಣಾಮ ಬೀರುತ್ತದೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಪುರುಷರಲ್ಲಿ ವಿರ್ಯಾಣು ಸಂಖ್ಯೆ ಕಡಿಮೆ ಇರುತ್ತದೆ. ಯೋಗ, ವ್ಯಾಯಾಮ, ಧ್ಯಾನ, ದೈಹಿಕ ಶ್ರಮ ಹಾಗೂ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು ಡಾ. ಗೀತಾ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts