More

    ಸಂವಿಧಾನಕ್ಕೆ ಕೈ ಹಾಕಿದರೆ ಕೋಮುವಾದಿಗಳು ಬುಡಮೇಲು

    ಮೈಸೂರು: ಸಂವಿಧಾನಕ್ಕೆ ಕೈ ಹಾಕಿದರೆ ಕೋಮುವಾದಿಗಳು ಬುಡಮೇಲಾಗುತ್ತಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷೆ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಗುಡುಗಿದರು.


    ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸ್ಮರಣಾರ್ಥ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


    ಲೋಕಸಭಾ ಚುನಾವಣೆಯಲ್ಲಿ 400 ಸೀಟ್ ಬರಲಿದೆ ಎಂದು ಕೋಮುವಾದಿ ಪಕ್ಷ ಹೇಳುತ್ತಿದೆ. ಸಂವಿಧಾನ ಬದಲಿಸಲು ಅವರು ಹೆಚ್ಚಿನ ಸೀಟ್ ಪಡೆಯಬೇಕೆಂದು ಹೇಳುತ್ತಿದ್ದಾರೆ. ಅದು ಸಾಧ್ಯವಿಲ್ಲ ಎಂದರು.


    ಮುಸ್ಲಿಮರು ಭಯೋತ್ಪಾದಕರು, ಕೈಸ್ತರು ಮತಾಂತರ ಮಾಡುವವರು, ಲೈಂಗಿಕ ಅಲ್ಪಸಂಖ್ಯಾತರು ಮಕ್ಕಳ ಅಪಹರಣಕಾರರೆಂದು ಪಟ್ಟ ಕಟ್ಟುವ ದುರ್ದೈವದ ದಿನಗಳಲ್ಲಿ ನಾವಿದ್ದೇವೆ. ಇದು ವಸಾಹತುಶಾಹಿ ಮನಸ್ಥಿತಿಯಾಗಿದೆ. ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರು ವಸಾಹತುಶಾಹಿ ವಿರುದ್ಧ ಹೋರಾಟ ಮಾಡಿದ್ದರು. ಅವರ ಹತ್ಯೆ ಏಕೆ ಆಯಿತು ಎಂಬುದಕ್ಕೆ ನಿಜವಾದ ಉತ್ತರ ಬೇಕಿದೆ ಎಂದರು.


    ರಾಜೀವ್ ಗಾಂಧಿ ಅವರು ಭಾರತದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ ನಾಯಕ. ಆದರೀಗ ಕೆಲವರು ರಾಜೀವ್ ಗಾಂಧಿ ಅವರ ಸಾಧನೆಯನ್ನು ತಮ್ಮದೆಂದು ಬಿಂಬಿಸಿಕೊಳ್ಳುತ್ತಿರುವುದು ಕಳವಳಕಾರಿ ಎಂದರು.


    ಪಂಡಿತ್ ಜವಾಹರ್ ಲಾಲ್ ನೆಹರೂ ಎಲ್ಲ ಜಾತಿ, ಧರ್ಮದ ಜನರ ಬದುಕು ಕಟ್ಟಿದರು. ಇಂದಿರಾ ಗಾಂಧಿ ಬಡವರ ಕಲ್ಯಾಣಕ್ಕಾಗಿ ಕಾರ್ಯಕ್ರಮ ರೂಪಿಸಿದರು. ರಾಜೀವ್ ಗಾಂಧಿ ಯುವಕರಿಗೆ ಮತದಾನ, ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕೊಟ್ಟರು. ಇದು ಕ್ರಾಂತಿಕಾರಕವಾದ ನಿರ್ಧಾರ ಎಂದು ಹೇಳಿದರು.


    ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ನಾಡಿನ ಜನತೆ ನೆಮ್ಮದಿಯಾಗಿದ್ದಾರೆ. 12ನೇ ಶತಮಾನದ ಗತವೈಭವ ಮರುಕಳಿಸಿದೆ. ಆದರೆ, ಕೆಲವರು ಬಸವಣ್ಣ, ಗಾಂಧಿ, ಅಂಬೇಡ್ಕರ್ ಅವರನ್ನು ಬಿಟ್ಟು ತಾವೇ ವಿಶ್ವಗುರುವೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
    ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿ, ರಾಜೀವ್ ಗಾಂಧಿ ಅವರು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತಂದರು. ಈ ಕಾರಣದಿಂದ ಮಹಿಳೆಯರು ರಾಜಕಾರಣದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದರು.


    ಪಕ್ಷದ ಜಿಲ್ಲಾಧ್ಯಕ್ಷ ಡಾ. ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಮುಖಂಡರಾದ ಎಚ್.ವಿ.ರಾಜೀವ್, ದ್ಯಾವಪ್ಪ ನಾಯಕ, ಎಂ.ಶಿವಣ್ಣ, ಈಶ್ವರ್ ಚಕ್ಕಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts