More

    ಸ್ಕೂಲ್ ಇಲ್ಲದಿದ್ದರೇನಂತೆ ಮನೇಲೇ ತಗೊಳ್ಳಿ ಕ್ಲಾಸ್!

    (ಲಾಕ್​ಡೌನ್​ನಿಂದಾಗಿ ಮತ್ತೆ ಶಾಲೆಗಳು ಬಾಗಿಲು ಮುಚ್ಚಿವೆ. ಮಕ್ಕಳಿಗೆ ಶಾಲೆ ಇಲ್ಲದಿದ್ದರೇನಾಯಿತು… ಮನೆಯೇ ಮೊದಲ ಪಾಠ ಶಾಲೆ ಅಲ್ಲವೇ? ಕೈಲಾಸಂ ಹಿಂದೆಯೇ ಕೇಳಿದ್ದಾರಲ್ಲ- ‘ಮಕ್ಕಳಿಸ್ಕೂಲು ಮನೇಲಲ್ವೇ’ ಅಂತ. ಮಕ್ಕಳು ಓದಲೇಬೇಕು ಎಂಬ ಆಶಯ ಹೊತ್ತ ಪಾಲಕರು ತಮ್ಮ ಮನೆಯನ್ನೇ ಪೂರ್ಣ ಪ್ರಮಾಣದ ಪಾಠ ಶಾಲೆಯನ್ನಾಗಿಸಿ ಮಕ್ಕಳಿಗೆ ಕ್ಲಾಸ್ ತೆಗೆದುಕೊಳ್ಳಬಹುದು. ತಮ್ಮದೇ ಗರಡಿಯಲ್ಲಿ ಪಳಗಿಸಿ, ಪಠ್ಯ-ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಬಹುದು.)

    • ಸ್ವರೂಪಾನಂದ ಕೊಟ್ಟೂರು

    ‘ಕರೊನಾ ಹಿನ್ನೆಲೆಯಲ್ಲಿ ಶಾಲೆಗಳು ಬಾಗಿಲು ಮುಚ್ಚಿಬಿಟ್ವು. ಮೊದಲೆಲ್ಲ ಮಕ್ಕಳು ಶಾಲೆ, ಟ್ಯೂಷನ್, ಆಟ, ಫ್ರೆಂಡ್ಸ್… ಅಂತಾ ಬಿಜಿ ಆಗಿಬಿಡುತ್ತಿದ್ವು. ಈಗ ಮನೆಯಲ್ಲೇ ಇರ್ತಾರೆ. ಅವರೂ ಎಷ್ಟೂಂತ ಮೊಬೈಲು, ಟಿವಿ ನೋಡ್ತಾರೆ? ವೃಥಾ ಕಾಲಹರಣ ಮಾಡೋಕೆ ಬಿಡದೆ ಒಂದೊಂದೇ ಕೆಲಸ ಹೇಳಿಕೊಡ್ತಿದೀನಿ. ಈಗ ಬಿಡುವಿದ್ದಾಗ ಮನೆ ಕೆಲಸಕ್ಕೆ ನೆರವಾಗ್ತಾರೆ. ನನಗೂ ಸ್ವಲ್ಪ ರಿಲ್ಯಾಕ್ಸ್ ಸಿಕ್ತಿದೆ…’

    ಇದು ಬಹಳಷ್ಟು ಪಾಲಕರ ಮನೆಯಲ್ಲಿ ಈಗ ಕೇಳಿಬರುತ್ತಿರುವ ಮಾತು. ಶಾಲೆಗಳ ಬಾಗಿಲು ತೆರೆಯದೆ ಮಕ್ಕಳಿಗೆ ಆಟವೇ ಲೋಕ ಆಗಿಬಿಟ್ಟಿದೆ. ಕಲಿತಿದ್ದನ್ನೆಲ್ಲ ಮರೆತಂತಿದ್ದಾರೆ. ಅದ್ಯಾವಾಗ ಶಾಲೆ ಶುರುವಾಗುತ್ತೋ… ಎಂದು ಕರೊನಾಗೆ ಹಿಡಿಶಾಪ ಹಾಕುತ್ತಾ ಮಕ್ಕಳಿಗೆ ಪೆಟ್ಟು ಕೊಟ್ಟು ಒಂದೆಡೆ ಕಟ್ಟಿ ಹಾಕುವ ಪಾಲಕರೇ ಹೆಚ್ಚು. ಆದರೆ ಈ ಪ್ರತಿಕೂಲ ಸಮಯವನ್ನೂ ಮಕ್ಕಳ ಅಭ್ಯುದಯಕ್ಕೆ ಪರಿವರ್ತಿಸಿಕೊಳ್ಳಲು ಸಾಧ್ಯವಿದೆ.

    ಈ ರಜೆ ಸಜೆಯಲ್ಲ, ಅವಕಾಶ!: ಶಾಲೆಗೆ ದೀರ್ಘ ರಜೆ ಇರುವ ಕಾರಣ ಬಹುತೇಕ ಮಕ್ಕಳಿಗೆ ಖುಷಿ. ಆದರೆ ನಮಗೆ ಮಾತ್ರ ತಲೆ ಬಿಸಿ ಎಂಬ ಮನಸ್ಥಿತಿಯಿಂದ ಪಾಲಕರು ಹೊರಬರಬೇಕು. ಮಕ್ಕಳಿಗೆ ಸರಿ-ತಪ್ಪುಗಳ ಬಗ್ಗೆ ಚಿಂತಿಸುವುದನ್ನು ಹೇಳಿಕೊಡಬೇಕು. ಅವರ ತಿಳಿವಳಿಕೆ ಹೆಚ್ಚಿಸಲು ನೆರವಾಗಬೇಕು. ಸಮಾಜದಲ್ಲಿ ಇತರರಿಗಿಂತ ಭಿನ್ನ ಹಾಗೂ ವಿಶೇಷವಾಗಿ ರೂಪುಗೊಳ್ಳುವಂತಾಗಲು, ಅವರಲ್ಲಿನ ಕೌಶಲ ಗುರುತಿಸಿ ಬೆಳೆಸಲು ತಮ್ಮ ಅನುಭವ, ವೃತ್ತಿ, ಪ್ರವೃತ್ತಿಯನ್ನು ಪಾಲಕರು ಪರಿಚಯಿಸಬೇಕು.

    ಚಿಕ್ಕಚಿಕ್ಕ ಶಿಸ್ತಿನ ಅಭ್ಯಾಸದಿಂದ ಆರಂಭಿಸಿ…

    ರಾತ್ರಿ ಬೇಗ ಮಲಗಿ, ಮುಂಜಾನೆ ಬೇಗ ಏಳುವ, ಸಮಯಕ್ಕೆ ಸರಿಯಾಗಿ ತಿಂಡಿ-ಊಟ ಮಾಡುವ, ವೈಯಕ್ತಿಕ ಸ್ವಚ್ಛತೆ, ಶಿಸ್ತು ಕಾಪಾಡಿಕೊಳ್ಳುವ, ಪುಸ್ತಕ ಜೋಡಿಸಿಟ್ಟುಕೊಳ್ಳುವ, ಪ್ರತಿದಿನ ಆನ್​ಲೈನ್ ಕ್ಲಾಸ್​ನಲ್ಲಿ ಹೇಳಿಕೊಟ್ಟ ವಿಷಯ, ಹೋಂವರ್ಕ್ ಅನ್ನು ಅಂದೇ ಮಾಡಿ ಮುಗಿಸುವ, ವಾರಕ್ಕೊಮ್ಮೆ ವಿಷಯ ಪುನರಾವರ್ತನೆ ಮಾಡುವ, ರೀಡಿಂಗ್ ರೂಂ ಸ್ವಚ್ಛವಾಗಿಡುವ ಕೆಲಸಗಳನ್ನು ಸಮಾಧಾನಚಿತ್ತರಾಗಿ ಹೇಳಿಕೊಡಿ. ಆ ರೀತಿ ಮಕ್ಕಳನ್ನು ಸಶಕ್ತಗೊಳಿಸಿ. ಯೋಗಾಭ್ಯಾಸ, ಧ್ಯಾನ, ಪ್ರಾಣಾಯಾಮ, ಸಂಗೀತ, ಚಿತ್ರಕಲೆ… ಇತ್ಯಾದಿಗಳ ರುಚಿ ಹತ್ತಿಸಿ.

    ನಿಮ್ಮ ಭಾರ ಕಡಿಮೆ

    ‘ಮಕ್ಕಳೇನ್ರಿ, ಏನ್ ಕೆಲಸ ಹೇಳಿದ್ರೂ ನನಗೆ ಬರಲ್ಲ.. ನಾ ಮಾಡಲ್ಲ..’ ಅಂತಾರೆ ಎಂಬ ಗೊಣಗಾಟಕ್ಕೆ ಇತಿಶ್ರೀ ಹಾಡಿ. ಎಳವೆಯಲ್ಲೇ ಸಂಸ್ಕಾರ ನೀಡಿ, ಸನ್ಮಾರ್ಗದಲ್ಲಿ ಬೆಳೆಸುವುದು ಪೋಷಕರ ಹೊಣೆಗಾರಿಕೆ. ನೆಂಟರು ಮನೆಗೆ ಬಂದರೆ ಒಳಗೆ ಕರೆಯುವ, ನಗುಮೊಗದಲ್ಲಿ ಮಾತನಾಡಿಸುತ್ತ ಉಪಚರಿಸುವ, ಮನೆಯನ್ನು ಸ್ವಚ್ಛವಾಗಿಡುವ, ಬಟ್ಟೆ-ಪಾತ್ರೆ ತೊಳೆಯುವ… ಹೀಗೆ ಸಣ್ಣ-ಸಣ್ಣ ಮತ್ತು ಅಷ್ಟೇ ಮಹತ್ವದ ಕೆಲಸಗಳನ್ನು ಕಲಿಸಿ. ಅಡುಗೆಗೆ ಸಹಕರಿಸುವುದು, ಅಂಗಡಿಯಲ್ಲಿ ದಿನಸಿ, ತರಕಾರಿ ತರುವ ಕೆಲಸ ಮಾಡಿಸಿ. ಹೀಗೆ ಪ್ರಾಪಂಚಿಕ, ವ್ಯವಹಾರಿಕ ಜ್ಞಾನ ನೀಡಿ.

    ಮಕ್ಕಳು ಕಲಿಯಲಿ ಜೀವನದ ಪಾಠ

    ಮೌಲಿಕ, ಗುಣಾತ್ಮಕ, ನೈತಿಕ ಶಿಕ್ಷಣ ಸಿಗುತ್ತಿಲ್ಲ ಎಂಬ ಕೂಗು ಕೆಲವು ವರ್ಷಗಳಿಂದ ಎಲ್ಲೆಡೆ ಕೇಳಿ ಬರುತ್ತಿದೆ. ದುಡಿಯುವ ತಂದೆ-ತಾಯಿಗೆ ಮಕ್ಕಳ ಬಗ್ಗೆ ಗಮನ ಹರಿಸಲು ಪುರುಸೊತ್ತಿಲ್ಲ ಎಂಬ ಕಾರಣವನ್ನೂ ಮುಂದೊಡ್ಡಲಾಗುತ್ತಿದೆ. ಆದರೆ ಈಗ ನಿಮ್ಮ ಮಕ್ಕಳು ಮನೆಯಲ್ಲಿ ನಿಮ್ಮೊಂದಿಗೇ ಇದ್ದಾರೆ. ಅವರಲ್ಲಿ ಅಕ್ಷರ ಜ್ಞಾನದ ಜತೆಗೆ ಬದುಕಿನ ಮೌಲ್ಯಗಳ ಕುರಿತು ಜ್ಞಾನ ತುಂಬುವುದಕ್ಕೆ ಇದು ಸಕಾಲ. ಮೊದಲು ಮಕ್ಕಳಿಗೆ ಸಂಸ್ಕಾರ ನೀಡಿ. ಒಳ್ಳೆಯ ಮಕ್ಕಳನ್ನಾಗಿ ಬೆಳೆಸಿ. ಮುಂದೆ ಪರಿಪೂರ್ಣ ಮತ್ತು ಮಾದರಿ ವ್ಯಕ್ತಿಯಾಗಿ ರೂಪುಗೊಳ್ಳುವಲ್ಲಿ ಇಂದು ನೀವು ಹಾಕುವ ಅಡಿಪಾಯ ಮುಖ್ಯ.

    ಮಕ್ಕಳ ಮೇಲೆ ಒತ್ತಡ ಹಾಕುವುದು ಸರಿಯಲ್ಲ. ಮುದ್ದಿಸುತ್ತಾ, ಪ್ರೋತ್ಸಾಹಿಸುತ್ತಲೇ ಅವರ ಮನಸ್ಸು ಪರಿವರ್ತಿಸಿ. ಹಂತಹಂತವಾಗಿ ಜವಾಬ್ದಾರಿ ಬಗ್ಗೆ ತಿಳಿಹೇಳಿ. ಅವರ ನಡೆ-ನುಡಿಯನ್ನು ಗಮನಿಸಿ ತಿದ್ದಿತೀಡಿ. ಇದು ಸವಾಲಿನ ಕೆಲಸವಾದರೂ ಮಕ್ಕಳ ಮನಸ್ಥಿತಿ ಅರಿತರೆ ಸುಲಭ. ಅವರಲ್ಲಿನ ಆಸಕ್ತಿ ಗುರುತಿಸಿ, ಒಳ್ಳೆಯ ಹವ್ಯಾಸಗಳಿಗೆ ಇಂಬು ಕೊಡಿ. ಕಷ್ಟಗಳನ್ನೂ ಪರಿಚಯಿಸಿನೋವು-ನಲಿವು, ಬದುಕಿನ ಹೋರಾಟ, ಕುಟುಂಬದ ವಾಸ್ತವ ಸ್ಥಿತಿ, ಸುತ್ತಲಿನ ಪರಿಸರದ ನೈಜ ದರ್ಶನವಾದಷ್ಟೂ ಒಳ್ಳೆಯದು. ಕಷ್ಟ-ಸುಖಗಳ ಸಮಾನ ಪರಿಚಯವಾದಲ್ಲಿ ಗಟ್ಟಿತನ, ದೃಢತೆ, ನಿಶ್ಚಲ ಮನಸ್ಥಿತಿ ಬೆಳೆಯುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts