More

    ಆಧಾರ್‌ಕಾರ್ಡ್ ಮಾದರಿಯಲ್ಲಿ ಜಾನುವಾರುಗಳಿಗೂ ಬರಲಿದೆ ಐಡಿ ಕಾರ್ಡ್

    ತುಮಕೂರು: ಆಧಾರ್‌ಕಾರ್ಡ್ ಮಾದರಿಯಲ್ಲಿ ಇನ್ನು ಮುಂದೆ ಜಾನುವಾರುಗಳಿಗೂ ಐಡೆಂಟಿಫಿಕೇಷನ್ ನಂಬರ್ ಬರಲಿದೆ. ಜಿಲ್ಲೆಯಲ್ಲಿರುವ 7.80ಲಕ್ಷ ರಾಸುಗಳಿಗೆ ನಂಬರ್ ನೀಡುವ ಕಾರ್ಯಕ್ಕೆ ಪಶುಪಾಲನಾ ಇಲಾಖೆ ಮುಂದಾಗಿದ್ದು, ಜಾನುವಾರುಗಳ ಆರೋಗ್ಯ, ತಳಿ ಹಾಗೂ ಪಶು ಇಲಾಖೆಯಿಂದ ಕಾಲಕಾಲಕ್ಕೆ ನೀಡುವ ಚುಚುಮದ್ದು, ವಿಮೆ ಸೇರಿ ಎಲ್ಲ ಕಾರ್ಯಕ್ರಮಗಳಿಗೂ ಅನುಕೂಲವಾಗುವಂತೆ ಶಾಶ್ವತ ನಂಬರ್, ಜಾನುವಾರುಗಳ ಕಿವಿಗೆ ಟ್ಯಾಗ್ ಮಾಡಲಾಗುತ್ತಿದೆ.

    ಪಶುಪಲನಾ ಇಲಾಖೆ ಎಲ್ಲ ಹಸು, ಎಮ್ಮೆಗಳ ಕಿವಿಗೆ ಓಲೆ ಅಳವಡಿಸುವ ಕೆಲಸವನ್ನು ಉಚಿತವಾಗಿ ಆರಂಭಿಸಿದ್ದು, ಜಿಲ್ಲೆಯಲ್ಲಿ ಶೇ.70ರಾಸುಗಳ ಕಿವಿಗೆ ಐಡಿ ನಂಬರ್ ಇರುವ ಶಾಶ್ವತ ಹಳದಿ ಓಲೆ ಹಾಕಿದೆ. ಸರ್ಕಾರದಿಂದ ವರ್ಷದಲ್ಲಿ ಎರಡು ಸಲ ಲಸಿಕೆ ಹಾಕುವ ಕೆಲಸವಾಗಲಿದ್ದು, ಆ ಸಂದರ್ಭದಲ್ಲಿ ಈ ಐಡಿ ಸಂಖ್ಯೆ ಇದ್ದ ಜಾನುವಾರುಗಳಿಗೆ ಮಾತ್ರ ಲಸಿಕೆ ಸಿಗಲಿದೆ. ಇಲ್ಲದಿದ್ದರೆ ಆಗಲಾದರೂ ಓಲೆ ಹಾಕಿಸಿಕೊಂಡು ಲಸಿಕೆ ಪಡೆಯಬೇಕಿದೆ.

    ಮಾಲೀಕರ ಆಧಾರ್ ಸಂಖ್ಯೆಯ ಜತೆಗೆ ಆತ ಸಾಕಿರುವ ಜಾನುವಾರುಗಳ ಸಂಖ್ಯೆ ಜಾತಿ, ವಯಸ್ಸು, ಅದರ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಶು ಪಲನಾ ಇಲಾಖೆ ಸಂಗ್ರಹಿಸುತ್ತಿದ್ದು, ಎಲ್ಲವೂ ಗಣಕೀಕೃತವಾಗಲಿದೆ. ದೇಶದಲ್ಲಿ ಕಳೆದೊಂದು ವರ್ಷದಿಂದ ಓಲೆ ಅಳವಡಿಕೆ ಕಾರ್ಯ ಆರಂಭವಾಗಿದ್ದು ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕುರಿ ಹಾಗೂ ಮೇಕೆಗಳಿಗೂ ಓಲೆ ಅಳವಡಿಸುವ ಕಾರ್ಯ ನಡೆಯಲಿದೆ.

    ವಿಮೆಗೂ ಇದೇ ನಂಬರ್!: ಓಲೆ ಅಳವಡಿಸುವ ಕಾರ್ಯದಲ್ಲಿ ಕೆಎಂಎಫ್ ಜತೆಗೂ ಪಶು ಇಲಾಖೆ ಸಂವಹನ ಸಾಧಿಸಿದ್ದು, ರೈತರು ಜಾನುವಾರುಗಳಿಗೆ ವಿಮೆ ಮಾಡಿಸುವಾಗ ಇದೇ ಐಡಿ ನಂಬರ್‌ಗೆ ಮಾಡಲಾಗುತ್ತದೆ. ಎಮ್ಮೆ ಅಥವಾ ಹಸುಗಳ ಕಿವಿಗೆ ಮತ್ತೆ ಓಲೆ ಹಾಕದೆ ಈಗ ಹಾಕಿರುವ ಓಲೆಯ ಐಡಿ ನಂಬರ್‌ಗೆ ಆ ಜಾನುವಾರಿಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳು ನಡೆಯಲಿದೆ. ಪಶು ಆಸ್ಪತ್ರೆಯಲ್ಲಿ ಪಡೆಯುವ ಔಷಧ ಕೂಡ ಯಾವ ಜಾನುವಾರಿಗೆ ಹಾಕಲಾಗಿದೆ ಎಂಬ ಮಾಹಿತಿ ಭವಿಷ್ಯದಲ್ಲಿ ಲಭ್ಯವಾಗಲಿದೆ.

    ತಿಂಗಳಿನಿಂದ ಜಾನುವಾರುಗಳ ಕಿವಿಗೆ ಓಲೆ ಅಳವಡಿಸುವ ಕಾರ್ಯ ನಡೆಯುತ್ತಿದೆ. ಜಿಲ್ಲೆಯ ಎಲ್ಲ ಜಾನುವಾರುಗಳ ಮಾಹಿತಿ ಕಂಪ್ಯೂಟರ್‌ನಲ್ಲಿ ನಮೂದಾಗಲಿದ್ದು, ಈ ಐಡಿ ಸಂಖ್ಯೆಯೇ ಆಧಾರವಾಗಿರಲಿದೆ. ಜಿಲ್ಲೆಯಲ್ಲಿ ಶೇ.70 ನೋಂದಣಿಯಾಗಿದೆ.
    ಡಾ.ಕೆ.ಜಿ.ನಂದೀಶ್ ಉಪ ನಿರ್ದೇಶಕ, ಪಶುಪಾಲನಾ ಇಲಾಖೆ

    ಜಾನುವಾರು ಗಳಿಗೂ ಶಾಶ್ವತ ಐಡಿ ಸಂಖ್ಯೆ ನೀಡಿರುವುದು ಖುಷಿಯಾಗಿದೆ. ಮತ ಚಲಾಯಿಸುವ ಹಕ್ಕು ಹೊಂದಿರುವ ಜನರ ಬಗ್ಗೆ ಮಾತ್ರ ಚಿಂತಿಸುವ ಸರ್ಕಾರಗಳು ಜಾನುವಾರುಗಳಿಗೂ ಒಂದು ಐಡೆಂಟಿಟಿ ನೀಡಿದ್ದು ಒಳ್ಳೆಯ ಬೆಳವಣಿಗೆ.
    ಎಂ.ನಾರಾಯಣ್ ರೈತ, ಕುಣಿಗಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts