More

    ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸಿ

    ಚಿಟಗುಪ್ಪ: ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸುವ ಮೂಲಕ ವಿನಾಕಾರಣ ಅಲೆದಾಡಿಸುವುದನ್ನು ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ಸೂಚಿಸಿದರು.

    ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಜನರ ಕೆಲಸ ತಕ್ಷಣ ಮಾಡಿಕೊಡಬೇಕು. ತಿರಸ್ಕರಿಸಿದ್ದಲ್ಲಿ ಸಂಬಂಧಿತ ಅಧಿಕಾರಿಗಳು ಸೂಕ್ತ ಕಾರಣ ತಿಳಿಸಬೇಕು. ಇದರಿಂದ ನಿಜ ಸ್ಥಿತಿ ಅರಿತು ಕಚೇರಿ ಅಡ್ಡಾಡುವುದನ್ನು ತಪ್ಪಿಸಬಹುದು ಎಂದರು.

    ಪಟ್ಟಣದ ಮಾರ್ಕಂಡೇಶ್ವರ ಎದುರಿನ ರಸ್ತೆ ಅಗಲೀಕರಣ, ನೂತನ ರಸ್ತೆಯಲ್ಲಿ ಹಂಪ್ ನಿರ್ಮಿಸುವುದು, ಮುಖ್ಯ ರಸ್ತೆ ರಿಪೇರಿ, ಚರಂಡಿ ವ್ಯವಸ್ಥೆ ಸರಿಪಡಿಸುವುದು ಸೇರಿ ಮೂಲಸೌಕರ್ಯ ಒದಗಿಸುವಂತೆ ಸಾರ್ವಜನಿಕರು ಮನವಿ ಮಾಡಿದರು.

    ಪುರಸಭೆಯಿಂದ ಶಾಪಿಂಗ್ ಕಾಂಪ್ಲೆಕ್ಸ್, ಸಮುದಾಯ ಭವನ ನಿರ್ಮಾಣ ಹಾಗೂ ಪುರಸಭೆ ಒಡೆತನದ ಅಂಗಡಿಗಳ ಹರಾಜು ಪ್ರಕ್ರಿಯೆ ನಡೆಸುವಂತೆ ಸದಸ್ಯ ಮುಜಾಫರ್ ಪಟೇಲ್ ಇತರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ವಳಖಿಂಡಿ ಗ್ರಾಮದಲ್ಲಿ ಹೊಲ ಮತ್ತು ಮನೆಗಳ ದಾರಿ ಒತ್ತುವರಿಯಾಗಿದ್ದು, ತೆರವುಗೊಳಿಸಲು ಕೋರಲಾಯಿತು.

    ಅಂಗವಿಕಲ ಹಾಗೂ ವೃದ್ಧಾಪ್ಯ ವೇತನ, ಜಾತಿ ಪ್ರಮಾಣಪತ್ರ ವಿತರಣೆ, ಜಮೀನು, ಅರಣ್ಯ ಭೂಮಿ ವಿವಾದ ಇತರ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಕೋರಿದರು.

    ತಾಪಂ ಅಧಿಕಾರಿಗಳು ಗ್ರಾಮೀಣ ಜನರ ಸಮಸ್ಯೆ ಶೀಘ್ರ ಬಗೆಹರಿಸುವಂತೆ ಜಿಪಂ ಸಿಇಒ ಶಿಲ್ಪಾ ಸೂಚಿಸಿದರು. ತಹಸೀಲ್ದಾರ್ ರವೀಂದ್ರ ದಾಮಾ, ಗ್ರೇಡ್-೨ ತಹಸೀಲ್ದಾರ್ ಜಯಶ್ರೀ, ತಾಪಂ ಇಒ ಅಕ್ರಂ ಪಾಶಾ, ಸಿಪಿಐ ಮಹೇಶಗೌಡ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಹುಸಾಮುದ್ದೀನ್ ಇತರರಿದ್ದರು. ಸಾರ್ಜನಿಕರಿಂದ ೨೪ ಅರ್ಜಿ ಬಂದಿದ್ದು, ಎಂಟು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಯಿತು.

    ಚಿಟಗುಪ್ಪ ಪಟ್ಟಣ ಸೇರಿ ಇತರೆಡೆ ಭೂಪರಿವರ್ತನೆ ಮಾಡದೆ ಅಕ್ರಮವಾಗಿ ಜನವಸತಿ ಬಡಾವಣೆ ನಿರ್ಮಾಣವಾಗುತ್ತಿರುವ ದೂರು ಕೇಳಿಬರುತ್ತಿದೆ. ಅಂತಹ ಬಡಾವಣೆಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು.
    | ಗೋವಿಂದರಡ್ಡಿ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts