More

    ಹಂದಿಗಳಿಗೆ ಭಾರಿ ಬೇಡಿಕೆ, ದೊಡ್ಡದಾಗುವ ಮೊದಲೇ ಮರಿಗಳು ಮಾರಾಟ, ಮಾಂಸಕ್ಕೆ ಕೆ.ಜಿ.ಗೆ 100 ರೂ.ಏರಿಕೆ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ತಿಂಗಳ ಹಿಂದೆ ಏರಿದ ಹಂದಿ ಮಾಂಸದ ಬೆಲೆ ಕೆಳಗೆ ಇಳಿಯಲೇ ಇಲ್ಲ. ಕೆ.ಜಿ.ಗೆ 250 ರೂ.ಇದ್ದ ಮಾಂಸದ ಬೆಲೆ 350 ರೂ. ತಲುಪಿದೆ. ಅಧಿಕ ಹಣ ತೆತ್ತಾದರೂ ದೊಡ್ಡ ಹಂದಿ ತರೋಣ ಎಂದರೆ ಸಾಕುವವರಲ್ಲೇ ಲಭ್ಯವಿಲ್ಲ. ಮಾರಾಟ ಮಾಡಿ ಒಳ್ಳೆಯ ಆದಾಯ ಮಾಡಿಕೊಳ್ಳೋಣ ಅಂದರೆ ಸಾಕುವವರಲ್ಲೇ ಅಗತ್ಯಕ್ಕೆ ತಕ್ಕಷ್ಟು ಹಂದಿಗಳಿಲ್ಲ.

    ಹಂದಿ ಸಾಕಣೆದಾರರ ಅಭ್ಯುದಯಕ್ಕಾಗಿಯೇ ಇತ್ತೀಚೆಗೆ ಸ್ಥಾಪನೆಯಾದ ಕರಾವಳಿ ಹಂದಿ ಸಾಕಣೆ ರೈತ ಉತ್ಪಾದಕರ ಕಂಪನಿಗೆ ಕೂಡ ಅಗತ್ಯ ಪ್ರಮಾಣದಲ್ಲಿ ಹಂದಿಗಳು ಪೂರೈಕೆಯಾಗುತ್ತಿಲ್ಲ. ಗ್ರಾಹಕರ ಬೇಡಿಕೆ ತಕ್ಕಂತೆ ಪೂರೈಕೆಗೆ ಕಂಪನಿ ನಿರ್ವಾಹಕರು ಪರ್ಯಾಯ ಮೂಲ ಹುಡುಕಾಟದಲ್ಲಿದ್ದಾರೆ. ಕಂಪನಿಯಲ್ಲಿ 488 ಮಂದಿ ಸದಸ್ಯರಿದ್ದಾರೆ.

    ಮಂಗಳೂರು ತಾಲೂಕು ಪಡುಪೆರಾರ ಗ್ರಾಮದ ಒಂದು ಖಾಸಗಿ ಫಾರ್ಮ್‌ನಲ್ಲಿ ಹಂದಿಜ್ವರ ಪತ್ತೆಯಾಗುವ ಮೊದಲೇ ಜಿಲ್ಲೆಯ ಕೆಲವೆಡೆ ಈ ರೋಗಬಾಧೆ ಖಚಿತವಾಗಿತ್ತು. ಕೆಲವು ಸಾಕಣೆದಾರರು ವಿಷಯ ಗೌಪ್ಯವಾಗಿಟ್ಟು ವ್ಯಾಪಾರ ಮಾಡಿರುವ ಮಾಹಿತಿಯೂ ಇದೆ.

    ಆಫ್ರಿಕನ್ ಹಂದಿ ಜ್ವರ ಸಾಂಕ್ರಾಮಿಕ ವೈರಾಣುವಿನಿಂದ ಸುಲಭವಾಗಿ ಹರಡುತ್ತದೆ. ಈ ಕಾಯಿಲೆಯಿಂದ ಮರಣ ಪ್ರಮಾಣ ಶೇ.100 ತಲುಪುತ್ತದೆ. ಈ ಹಿನ್ನೆಲೆಯಲ್ಲಿ ಪಶುವೈದ್ಯಾಧಿಕಾರಿಗಳ ಸಲಹೆಯಂತೆ ಹೆಚ್ಚಿನವರು ಸಾಕುವ ಹಂದಿಗಳ ಸಂಖ್ಯೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸಿದ್ದಾರೆ.

    ದೊಡ್ಡ ಹಂದಿಗಳ ಕೊರತೆ ತೀವ್ರ ಪ್ರಮಾಣದಲ್ಲಿ ಇರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಂದಿಯ ಸಣ್ಣ ಮರಿಗಳಿಗೆ ಹೆಚ್ಚಿನ ಬೇಡಿಕೆ ಕುದುರಿದೆ. ಎರಡು ತಿಂಗಳು ಪ್ರಾಯದ ಒಂದು ಹಂದಿ ಮರಿ 6 ಸಾವಿರ ರೂ.ನಲ್ಲಿ ಮಾರಾಟವಾಗುತ್ತಿದೆ. ಈ ಹಿಂದೆ ಈ ವಯಸ್ಸಿನ ಮರಿ 2,500 ರೂ.ನಿಂದ 3 ಸಾವಿರ ರೂ. ತನಕ ಮಾರಾಟವಾಗುತ್ತಿತ್ತು.

    —————————-

    ಪ್ರಸ್ತುತ ಆಫ್ರಿಕನ್ ಹಂದಿ ಜ್ವರದ ಆತಂಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಲ್ಲ. ಅದರೂ ಸ್ವಲ್ಪ ಸಮಯ ದೊಡ್ಡ ಪ್ರಮಾಣದಲ್ಲಿ ಸಾಕಣೆ ಮಾಡುವ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಸಾಕಣೆದಾರರಿಗೆ ಸಲಹೆ ನೀಡಿದ್ದೇವೆ. ಸಾಮಾನ್ಯವಾಗಿ ಸಾಗಾಟ ಸಂದರ್ಭ ರೋಗ ಸುಲಭವಾಗಿ ಹರಡುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ನಡುವೆ ಹಂದಿ ಸಾಗಾಟ ನಿರ್ಬಂಧಿಸಿದೆ.

    ಡಾ.ವಸಂತ ಶೆಟ್ಟಿ, ಪ್ರಾದೇಶಿಕ ಸಂಶೋಧನಾ ಅಧಿಕಾರಿ

    ಪಶುರೋಗ ತಪಾಸಣಾ ಕೇಂದ್ರ, ಮಂಗಳೂರು

    —————————-

    ಹಂದಿ ಜ್ವರ ಹರಡುವ ಭೀತಿ ಹಾಗೂ ಸಣ್ಣ ಮರಿಗಳಿಗೆ ಒಳ್ಳೆಯ ದರ ಇರುವ ಕಾರಣ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಹೆಚ್ಚಿನ ಸಾಕಣೆದಾರರು ಹಂದಿ ಮರಿಗಳ ಮಾರಾಟಕ್ಕೆ ಆದ್ಯತೆ ನೀಡುತ್ತಿದ್ದಾರೆ. ಮಾಂಸಕ್ಕೆ ದೊಡ್ಡ ಹಂದಿಗಳ ಕೊರತೆ ಉಂಟಾಗಲು ಇದು ಕೂಡ ಕಾರಣ.

    ಸತೀಶ್, ಐಸಿಸಿಒಎ ಸಂಯೋಜಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts