More

    ಸೈನಸೈಟಿಸ್ ಗುಣಪಡಿಸಿಕೊಳ್ಳುವುದು ಹೇಗೆ?

    ಸೈನಸೈಟಿಸ್ ಗುಣಪಡಿಸಿಕೊಳ್ಳುವುದು ಹೇಗೆ?ನಮ್ಮ ತಲೆಬುರುಡೆಯನ್ನು ಹಗುರವಾಗಿಡಲು, ಧ್ವನಿ ಸರಿಯಾಗಿರುವಂತೆ ನೋಡಿಕೊಳ್ಳಲು, ಮೂಗಿನ ಒಳಪದರವನ್ನು ತೇವವಾಗಿಟ್ಟು ಧೂಳು, ವೈರಸ್-ಬ್ಯಾಕ್ಟೀರಿಯಾ ಮುಂತಾದ ಸೂಕ್ಷ್ಮಜೀವಿಗಳು ಮತ್ತು ಇನ್ನುಳಿದ ಯಾವುದೇ ರೀತಿಯ ಕೊಳಕು ಮೂಗಿನ ಮೂಲಕ ದೇಹ ಪ್ರವೇಶಿಸದಂತೆ ತಡೆಯಲು ದೇವರು ನಮಗೆ ಸೈನಸ್​ಗಳು ಎಂಬ ಖಾಲಿ ಜಾಗಗಳನ್ನು ಕೊಟ್ಟಿದ್ದಾನೆ. ಮುಖ್ಯ ವಾಗಿ ನಮ್ಮ ಮೂಗಿನ ಎರಡೂ ಕಡೆ ನಾಲ್ಕು ಜೋಡಿ ಸೈನಸ್​ಗಳಿವೆ.

    ಸೈನಸ್​ಗಳು ಇಷ್ಟೆಲ್ಲ ಉಪಕಾರಿಗಳಾದರೂ ಅವು ಕೋಪಿಸಿಕೊಂಡಾಗ ಮಾತ್ರ ಪ್ರಾಣ ಹಿಂಡುತ್ತವೆ. ಧೂಳು, ಸೂಕ್ಷ್ಮಜೀವಿಗಳು, ಕೆಲವು ಗಿಡಗಳ ಪರಾಗಪುಷ್ಪಗಳು, ಹೊಗೆ ಮುಂತಾದ ಹಲವು ರೀತಿಯ ಕಿರಿಕಿರಿ ಉಂಟುಮಾಡುವಂಥ ವಸ್ತುಗಳ ಕಾರಣದಿಂದ ಮೂಗಿನ ಮತ್ತು ಸೈನಸ್​ಗಳ ಒಳಪದರಗಳಲ್ಲಿ ಅತಿಯಾಗಿ ದ್ರವದ ಸ್ರವಿಸುವಿಕೆ, ಊದಿಕೊಳ್ಳುವುದು ಮುಂತಾದ ಬದಲಾವಣೆಗಳಾಗುತ್ತವೆ. ಇದಕ್ಕೆ ಸೈನಸ್​ಗಳ ಉರಿಯೂತ ಅಥವಾ ಸೈನಸೈಟಿಸ್ ಎನ್ನುತ್ತೇವೆ. ತಲೆಭಾರ, ತಲೆನೋವು, ಹಲ್ಲುನೋವು, ಮೂಗಿನಲ್ಲಿ ನೀರು ಇಳಿಯುವುದು, ಕೆಮ್ಮು, ಜ್ವರ, ಮೂಗು ಕಟ್ಟುವುದು, ಮುಖದಲ್ಲಿ ನೋವು, ಕಣ್ಣುಗಳಲ್ಲಿ ನೋವು, ವಾಸನೆ ಗ್ರಹಿಸಲು ಆಗದೆ ಇರುವುದು ಮುಂತಾದ ಲಕ್ಷಣಗಳು ಸಾಮಾನ್ಯವಾಗಿರುತ್ತವೆ.

    ಸೈನಸೈಟಿಸ್​ನಲ್ಲಿ ಹಲವು ವಿಧಗಳಿವೆ. ಕೆಲವೊಮ್ಮೆ ಯಾವುದೋ ಕಾರಣಕ್ಕೆ ಸೈನಸ್​ಗಳಲ್ಲಿ ಉರಿಯೂತವಾಗಿ ಕೆಲವು ದಿನಗಳ ಕಾಲ ಇಂತಹ ಲಕ್ಷಣಗಳಿದ್ದು ನಂತರ ವಾಸಿಯಾಗುತ್ತದೆ. ಆದರೆ ಹಲವು ಜನರಲ್ಲಿ ದೀರ್ಘಾವಧಿಯ ಸೈನಸೈಟಿಸ್ ಕಾಡುತ್ತದೆ. ಇದು ಚಿಕ್ಕಪುಟ್ಟ ಕಾರಣಗಳಿಗೂ ತೊಂದರೆ ಕೊಟ್ಟು ದಿನನಿತ್ಯದ ಕೆಲಸಗಳನ್ನೂ ಸುಲಭವಾಗಿ ಮಾಡಲು ತಡೆಯಾಗುತ್ತದೆ. ಇಲ್ಲಿ ಯೋಚಿಸಬೇಕಾದ ವಿಷಯವೇನೆಂದರೆ – ಧೂಳು, ಹೊಗೆ ಎಲ್ಲ ಕಡೆ ಇದ್ದರೂ ಕೆಲವರಿಗೆ ಮಾತ್ರ ಏಕೆ ಕಾಡುತ್ತದೆ? ನಮ್ಮ ದೇಹದ ಪ್ರಕೃತಿ, ಆಹಾರ-ದಿನಚರಿಗಳ ವಿಷಯದಲ್ಲಿ ನಾವು ಮಾಡುವ ತಪ್ಪುಗಳಿಂದಾಗಿ ಚಿಕ್ಕಪುಟ್ಟ ಕಾರಣಗಳಿಗೂ ಸೈನಸ್ ಅತಿರೇಕವಾಗಿ ಪ್ರತಿಕ್ರಿಯಿಸುತ್ತದೆ. ಹಾಗಾಗಿ ಅತಿಯಾಗಿ ಧೂಳಿಗೆ, ಚಳಿಗೆ ಒಡ್ಡಿಕೊಳ್ಳುವುದು, ಅತಿಯಾಗಿ ತಂಪುಪಾನೀಯಗಳು ಮತ್ತು ಕರಿದ ಪದಾರ್ಥಗಳನ್ನು ಸೇವಿಸುವುದು, ಧೂಮಪಾನ, ಹಗಲುನಿದ್ದೆ, ಬೀದಿಬದಿಯ ರಾಸಾಯನಿಕಯುಕ್ತ ಆಹಾರಗಳನ್ನು ಸೇವಿಸುವುದು – ಇವೆಲ್ಲ ಬಹುತೇಕ ಜನರಲ್ಲಿ ಸೈನಸೈಟಿಸ್ ಉಂಟುಮಾಡುವ ಸಾಮಾನ್ಯ ಕಾರಣಗಳು.

    ಯಾವುದೇ ರೀತಿಯ ಸೈನಸೈಟಿಸ್ ಆಗಿದ್ದರೂ ಸರಿಯಾದ ಚಿಕಿತ್ಸೆ ಮತ್ತು ಜೀವನಶೈಲಿ ಇದ್ದರೆ ಸಂಪೂರ್ಣವಾಗಿ ಗುಣಮಾಡಿಕೊಳ್ಳಬಹುದು. ನಿಯತವಾಗಿ ಜಲನೇತಿ, ಸೂತ್ರನೇತಿಗಳನ್ನು ಅಭ್ಯಾಸ ಮಾಡುವುದು ಅತ್ಯಂತ ಲಾಭದಾಯಕ. ಜತೆಗೆ ಯೋಗಾಸನಗಳು, ಪ್ರಾಣಾಯಾಮ, ಮುದ್ರೆಗಳ ಮೂಲಕ ಔಷಧವಿಲ್ಲದೆ ಸೈನಸೈಟಿಸ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಹತ್ತು ನಿಮಿಷ ಸೂರ್ಯಸ್ನಾನ ಮಾಡುವುದು ಹಿತಕಾರಿ. ನಿತ್ಯವೂ ಇವುಗಳನ್ನು ಪಾಲಿಸಿದರೆ ಸೈನಸ್​ನ ಸಮಸ್ಯೆ ಮತ್ತೆ ಎಂದಿಗೂ ಬರದಂತೆ ನೋಡಿಕೊಳ್ಳಬಹುದು. ಪಂಚಕರ್ಮ ಚಿಕಿತ್ಸೆಗಳಲ್ಲಿ ಒಂದಾದ ನಸ್ಯ ಚಿಕಿತ್ಸೆಯು ಸೈನಸ್ ಸಮಸ್ಯೆಯಲ್ಲಿ ರಾಮಬಾಣದ ಹಾಗೆ ಕೆಲಸ ಮಾಡುತ್ತದೆ.

    ಕೊತ್ತಂಬರಿ, ಶುಂಠಿ, ಜೀರಿಗೆ, ಕಾಳುಮೆಣಸು, ಚಕ್ಕೆ ಮುಂತಾದ ಸಾಂಬಾರಪದಾರ್ಥಗಳ ಕಷಾಯವನ್ನು ನಿತ್ಯವೂ ಕುಡಿಯುವುದು ಅತ್ಯಂತ ಲಾಭದಾಯಕ. ಕಷಾಯ ತಯಾರಿಸುವಾಗ ಸ್ವಲ್ಪ ಪ್ರಮಾಣದಲ್ಲಿ ಅಮೃತಬಳ್ಳಿ ಮತ್ತು ಜ್ಯೇಷ್ಠಮಧುವನ್ನು ಸೇರಿಸಬಹುದು. ಶುಂಠಿ, ಕಾಳುಮೆಣಸು ಮತ್ತು ಹಿಪ್ಪಲಿಗಳ ಪುಡಿಗಳನ್ನು ಸಮಪ್ರಮಾಣದಲ್ಲಿ ಸೇರಿಸಿಟ್ಟುಕೊಂಡು ದಿನಕ್ಕೆರಡು ಬಾರಿ ಆಹಾರದ ಮೊದಲು ಜೇನುತುಪ್ಪದಲ್ಲಿ ನಾಲ್ಕು ಚಿಟಿಕೆ ಸೇವಿಸುವುದು ಒಳ್ಳೆಯದು. ನೀರಿಗೆ ಸ್ವಲ್ಪ ತುಳಸಿ ಮತ್ತು ಅರಿಶಿಣ ಹಾಕಿ ಉಗಿ ತೆಗೆದುಕೊಳ್ಳುವುದು ಸಹಕಾರಿ. ಜಜ್ಜಿದ ಬೆಳ್ಳುಳ್ಳಿ ಒಂದು ಚಮಚ, ಒಂದು ಚಮಚ ಅರಿಶಿಣ ಪುಡಿ ಮತ್ತು ಎರಡು ಚಮಚ ಜೇನುತುಪ್ಪ ಹಾಕಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸುವುದರಿಂದ ಸೈನಸೈಟಿಸ್ ಹತೋಟಿಗೆ ಬರುತ್ತದೆ. ಸುಲಭವಾಗಿ ಜೀರ್ಣವಾಗುವ ಲಘು ಆಹಾರ, ಬಿಸಿಯಾದ ಅಥವಾ ಬೆಚ್ಚಗಿನ ನೀರು, ಸೈಂಧವ ಲವಣ, ಎಲ್ಲ ರೀತಿಯ ಸಾಂಬಾರ ಪದಾರ್ಥಗಳು, ಸೂಪ್​ಗಳು, ನೆಲ್ಲಿಕಾಯಿ, ಚುರುಮುರಿ (ಮಂಡಕ್ಕಿ) ಮುಂತಾದ ಆಹಾರಗಳನ್ನು ಸೇವಿಸುವುದು ಒಳ್ಳೆಯದು. ಜೀರ್ಣಕ್ಕೆ ಕಷ್ಟವಾದ ಅಂದರೆ ಕರಿದ ಪದಾರ್ಥಗಳು, ಉದ್ದು, ಮೈದಾ ಬಳಸಿ ತಯಾರಿಸಿದ ಪದಾರ್ಥಗಳ ಸೇವನೆ ಒಳ್ಳೆಯದಲ್ಲ. ಸಂಸ್ಕರಿಸಿದ ಆಹಾರಗಳು, ತಂಪುಪಾನೀಯಗಳು, ಮಾಂಸಾಹಾರ, ಮೊಸರು, ಬಾಳೆಹಣ್ಣು, ರಾತ್ರಿ ಊಟದಲ್ಲಿ ಹಾಲು ಮತ್ತು ತುಪ್ಪಗಳ ಬಳಕೆ ಹಿತಕರವಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts