More

    ಉಗುರೇ ಹೇಳುತ್ತೆ ಆರೋಗ್ಯದ ಗುಟ್ಟು! ಆ ಉಗುರಿನ ಆರೋಗ್ಯ ರಕ್ಷಣೆ ಹೇಗೆ?

    ಉಗುರೇ ಹೇಳುತ್ತೆ ಆರೋಗ್ಯದ ಗುಟ್ಟು! ಆ ಉಗುರಿನ ಆರೋಗ್ಯ ರಕ್ಷಣೆ ಹೇಗೆ?ವೈದ್ಯರು ರೋಗಿಯನ್ನು ಪರೀಕ್ಷಿಸುವಾಗ ಉಗುರುಗಳನ್ನು ಪರೀಕ್ಷಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಏಕೆಂದರೆ ಬಹಳಷ್ಟು ಬಾರಿ ಇಡೀ ದೇಹದ ಆರೋಗ್ಯವನ್ನು ಉಗುರುಗಳು ಹೇಳುತ್ತವೆ. ಉಗುರುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ದೇಹದ ಆರೋಗ್ಯಕ್ಕೆ ಅವಶ್ಯಕ. ಜೊತೆಗೆ ಸ್ವಸ್ಥ ಉಗುರುಗಳು ಸೌಂದರ್ಯದ ಭಾಗವೂ ಹೌದು. ಇಂದು ಉಗುರುಗಳ ಆರೋಗ್ಯ ಮತ್ತು ಸೌಂದರ್ಯದ ವರ್ಧನೆಗೆ ಅನುಸರಿಸಬೇಕಾದ ವಿಧಾನಗಳನ್ನು ತಿಳಿದುಕೊಳ್ಳೋಣ.

    ನಮ್ಮ ಉಗುರುಗಳು ಕೆರಟಿನ್ ಎಂಬ ಪ್ಟೀರೋನ್​ನಿಂದ ಆಗಿರುತ್ತವೆ. ಇವುಗಳು ಇರುವ ಆಹಾರವನ್ನು ಸೇವಿಸುವುದು ನಮ್ಮ ಕೂದಲು, ಚರ್ಮ ಮತ್ತು ಉಗುರುಗಳ ಆರೋಗ್ಯಕ್ಕೆ ಅವಶ್ಯಕ. ಹಾಗಾಗಿ, ಕೆರಟಿನ್ ಹೇರಳವಾಗಿರುವ ಈರುಳ್ಳಿ, ಕ್ಯಾರೆಟ್, ಗೆಣಸು, ಬೆಳ್ಳುಳ್ಳಿ, ಮಾವು, ಹಾಲು, ಮೊಸರು, ಸೂರ್ಯಕಾಂತಿ ಬೀಜಗಳನ್ನು ಹೆಚ್ಚಾಗಿ ಸೇವಿಸಬೇಕು. ವಾಲ್ನಟ್, ಬಾದಾಮಿಗಳಂತಹ ನಟ್​ಗಳ ಸೇವನೆ ಕೂಡಾ ಸಹಾಯಕ. ಕೆಲದಿನಗಳ ಕಾಲ ಒಮೆಗಾ 3 ಫ್ಯಾಟಿ ಆಸಿಡ್ ಪೋಷಕಾಂಶದ ಸೇವನೆ ಮಾಡುವುದು ಒಳಿತು. ಮೊಟ್ಟೆ ಮತ್ತು ಮಾಂಸಾಹಾರದಿಂದಲೂ ಕೆರಟಿನ್ ಸಿಗುತ್ತದೆ. ಇವುಗಳ ಜೊತೆಗೆ, ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಎಲ್ಲಾ ರೀತಿಯ ಹಣ್ಣುಗಳು (ವಿಶೇಷವಾಗಿ ವಿಟಮಿನ್ ಸಿ ಹೇರಳವಾಗಿರುವ ಹುಳಿ ಹಣ್ಣುಗಳು) ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಉಗುರಿನ ಆರೋಗ್ಯ ವೃದ್ಧಿಗೆ ಸಹಾಯವಾಗುತ್ತದೆ. ಆಯುರ್ವೆದ ಸಿದ್ಧಾಂತದ ಪ್ರಕಾರ ಉಗುರು ಅಸ್ಥಿ(ಮೂಳೆ) ಧಾತುವಿನ ಮಲ. ಹಾಗಾಗಿ ಮೂಳೆಯ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವುದರಿಂದ ಉಗುರಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳು ಮತ್ತು ಸಮತೋಲಿತ ಆಹಾರಗಳ ಸೇವನೆ ಅವಶ್ಯಕ.

    ಇನ್ನು ಉಗುರುಗಳನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಇಡೀ ದೇಹದ ಆರೋಗ್ಯಕ್ಕೆ ಅವಶ್ಯಕ. ಏಕೆಂದರೆ ನಾವು ಆಹಾರ ತಯಾರಿಸುವಾಗ ಮತ್ತು ಸೇವಿಸುವಾಗ ನಮ್ಮ ಕೈಗಳನ್ನೇ ಬಳಸುತ್ತೇವೆ. ಆದರೆ ಸೌಂದರ್ಯದ ಕಾರಣಕ್ಕಾಗಿ ಉಗುರುಗಳನ್ನು ಬೆಳೆಸಲೇಬೇಕೆಂದರೆ ಪ್ರತಿ ಬಾರಿ ಆಹಾರ ಸೇವಿಸುವಾಗ ಉಗುರಿನ ಬುಡದವರೆಗೆ ಸಣ್ಣ ಬ್ರಶ್ ನಿಂದ ಸ್ವಚ್ಛಮಾಡಿಕೊಳ್ಳುವುದು ಒಳಿತು. ಕೆಲವರಿಗೆ ಪದೇ ಪದೇ ಉಗುರಿನ ಅಕ್ಕಪಕ್ಕದಲ್ಲಿ ಗುಳ್ಳೆಗಳಾಗಿ ನೋವು ಬರುವುದು, ಕೀವು ತುಂಬಿಕೊಳ್ಳುವುದು ಆಗುತ್ತದೆ. ಹಾಗಾದಾಗ ಅದನ್ನು ಸೂಜಿಯಿಂದ ಒಡೆಯುವುದು ಸರಿಯಲ್ಲ. ಬದಲಿಗೆ ಬೇವಿನ ಸೊಪ್ಪು ಮತ್ತು ಅಗಸೆಬೀಜಗಳನ್ನು ಸೇರಿಸಿ ಅರೆದು ಪೇಸ್ಟ್ ಮಾಡಿ, ಬೆಚ್ಚಗೆ ಮಾಡಿ ಕಟ್ಟಿಕೊಳ್ಳಬೇಕು. ತಾನಾಗಿಯೇ ಒಡೆದ ನಂತರ ತ್ರಿಫಲಾ ಚೂರ್ಣವನ್ನು ನೀರಿನಲ್ಲಿ ಕುದಿಸಿ ಸೋಸಿದ ಕಷಾಯದಲ್ಲಿ ಅದನ್ನು ತೊಳೆಯಬೇಕು. ನಂತರ ಅದನ್ನು ಒರೆಸಿ, ಜಾತ್ಯಾದಿ ತೈಲವನ್ನು ಹಚ್ಚಬೇಕು. ಇವೆರಡೂ ಆಯುರ್ವೆದ ಔಷಧ ಅಂಗಡಿಗಳಲ್ಲಿ ಸಿಗುತ್ತವೆ.

    ಕೃಷಿಕರಿಗೆ, ಸದಾ ನೀರಿನಲ್ಲಿ ಮತ್ತು ಧೂಳಿನಲ್ಲಿ ಕೆಲಸ ಮಾಡುವುದರಿಂದ, ಗಾಯವಾದ ಕಾರಣದಿಂದ, ಉಗುರು ಕಡಿಯುವುದರಿಂದ ಉಗುರುಸುತ್ತಿನ ಸಮಸ್ಯೆ ಕೆಲವರಿಗೆ ಹಲವಾರು ವರ್ಷಗಳಿಂದ ಕಾಡುತ್ತಿರುತ್ತದೆ. ಅದರಿಂದ ಮುಜುಗರ ಅನುಭವಿಸುತ್ತಿರುತ್ತಾರೆ. ಇದಕ್ಕೆ ಕರವೀರ ಮರದ ಹಾಲನ್ನು ಹಾಕುವುದು ರಾಮಬಾಣದಂತೆ ಕೆಲಸ ಮಾಡುತ್ತದೆ. ಈ ಮರ ಹಳ್ಳಿ ಮತ್ತು ನಗರಗಳಲ್ಲಿ ಬೆಳೆದುಕೊಂಡಿರುತ್ತದೆ. ಹೂವನ್ನು ದೇವರಿಗೆ ಅರ್ಪಿಸುತ್ತಾರೆ. ಇದನ್ನು ತಿಳಿದವರ ಹತ್ತಿರ ಕೇಳಿಕೊಳ್ಳಬೇಕೆ ಹೊರತೂ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ. ಇದು ವಿಷ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಹಾಗಾಗಿ ರಾತ್ರಿ ಮಲಗುವಾಗ ಹಚ್ಚಿ ಬೆಳಿಗ್ಗೆ ಚೆನ್ನಾಗಿ ತೊಳೆದುಕೊಳ್ಳುವುದು ಒಳಿತು.

    ಉಗುರಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಇಚ್ಛೆ ಇರುವವರು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕ. ಶುದ್ಧವಾದ ಎಳ್ಳೆಣ್ಣೆ ಅಥವಾ ವರ್ಜಿನ್ ಕೊಬ್ಬರಿ ಎಣ್ಣೆಯಿಂದ ಉಗುರುಗಳು ಮತ್ತು ಅವುಗಳ ಸುತ್ತ ಮಸಾಜ್ ಮಾಡುವುದರಿಂದ ಅವು ನೈಸರ್ಗಿಕವಾಗಿ ಹೊಳೆಯುತ್ತವೆ. ನಂತರ ನಿಂಬೆಹಣ್ಣಿನ ರಸಕ್ಕೆ ನೀರು ಸೇರಿಸಿ ಅದರಲ್ಲಿ ಕೆಲ ನಿಮಿಷಗಳ ಕಾಲ ಕೈಯನ್ನು ಇಟ್ಟು ತೊಳೆದುಕೊಂಡು ಬಟ್ಟೆಯಲ್ಲಿ ಒರೆಸಿಕೊಳ್ಳಬೇಕು. ದಿನಕ್ಕೊಮ್ಮೆ ಈ ರೀತಿ ಮಾಡಿದರೆ ಉಗುರು ಸುಂದರವಾಗಿ ಕಾಣಲು ಸಹಾಯವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts