More

    ವಿಧಾನಸೌಧದ ಗುಂಬಸ್ ತೆರವುಗೊಳಿಸಿ, ಸಂಸದ ಪ್ರತಾಪ ಸಿಂಹಗೆ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ ಸವಾಲು

    ಹೊಸಪೇಟೆ: ಮೈಸೂರಿನಲ್ಲಿ ಗುಂಬಸ್ ಮಾದರಿಯಲ್ಲಿ ನಿರ್ಮಿಸಿರುವ ಸಿಟಿ ಬಸ್ ನಿಲ್ದಾಣಗಳನ್ನು ತೆರವುಗೊಳಿಸುವ ಮುನ್ನ ಗುಂಬಸ್ ಮಾದರಿಯಲ್ಲಿರುವ ವಿಧಾನಸೌಧ ಮತ್ತು ಸಂಸತ್ತು ಭವನಗಳನ್ನೂ ತೆರವುಗೊಳಿಸಲಿ ಎಂದು ಸಂಸದ ಪ್ರತಾಸ್ ಸಿಂಹಗೆ ಮಾಜಿ ಸಚಿವೆ ಹಾಗೂ ಜನತಾ ಪಾರ್ಟಿ ರಾಜ್ಯಾಧ್ಯಕ್ಷೆ ಬಿ.ಟಿ.ಲಲಿತಾ ನಾಯಕ್ ಸವಾಲು ಹಾಕಿದರು.

    ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚೆಗೆ ಕೆಲ ಸಿಟಿ ಬಸ್ ನಿಲ್ದಾಣಗಳ ಛಾವಣಿಯನ್ನು ಗೋಳಾಕಾರದಲ್ಲಿ ನಿರ್ಮಿಸಲಾಗಿದೆ. ಅದು ಭೂಮಿಯ ಸಂಕೇತವಾಗಿದೆ. ಆದರೆ, ಸಂಸದ ಪ್ರತಾಪ್ ಸಿಂಹ ಅವರು ಆ ಆಕೃತಿಗಳನ್ನು ಮಸೀದಿಗಳಿಗೆ ಹೋಲಿಸಿ, ತೆರವುಗೊಳಿಸುವುದಾಗಿ ಬೆದರಿಕೆ ಹಾಕಿರುವುದು ಸರಿಯಲ್ಲ. ಅಷ್ಟಕ್ಕೂ ಅವುಗಳನ್ನು ಅವರ ಅಪ್ಪ, ಅಮ್ಮ ಕಟ್ಟಿಸಿದ್ದರೆ ತೆರವುಗೊಳಿಸಲಿ. ಜನರ ತೆರಿಗೆ ಹಣದಲ್ಲಿ ನಿರ್ಮಿಸಿದ ಕಟ್ಟಡಗಳ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನಿಡಿದರು.

    ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರದ ನೇಮಕಾತಿ, ಕಾಮಗಾರಿಗಳಲ್ಲಿ ಶೇ.40, 45 ಕಮಿಷನ್ ವ್ಯವಹಾರ ನಡೆಯುತ್ತಿದೆ. ಗೋಮಾಳಗಳನ್ನು ಸೃಷ್ಟಿಸಿದೇ, ಗೋಮಾಂಸ ರಫ್ತು ರದ್ದುಗೊಳಿಸದೇ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿರುವುದು ಹಾಸ್ಯಾಸ್ಪದ. ಸ್ವಾಮಿ ವಿವೇಕಾನಂದ ಅವರು ಕೇಸರಿ ಬಣ್ಣದ ಬಟ್ಟೆ ಧರಿಸುತ್ತಿದ್ದರು ಎಂದು ವಿವೇಕ ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದು ಸರಿಯಲ್ಲ. ಬಿಜೆಪಿ ಸರ್ಕಾರ ಆರ್‌ಎಸ್‌ಎಸ್ ಕೈಗೊಂಬೆಯಾಗಿದೆ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಹಿಂದುಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದರು.

    ಸಮಸ್ಯೆಗಳನ್ನು ಮೊದಲು ಪರಿಹರಿಸಲಿ: ತಮ್ಮ ಬಂಗಲೆಯ ಅಕ್ಕಪಕ್ಕದಲ್ಲಿ ಗುಡಿಸಲುಗಳನ್ನು ಒಕ್ಕಲೆಬ್ಬಿಸಿರುವ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ರಾಜಕಾಲುವೆ ಮೇಲೆ ಭವ್ಯ ಬಂಗಲೆ ನಿರ್ಮಿಸಿಕೊಂಡು ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಮತ್ತೊಂದೆಡೆ ನಗರದ ಬಹುತೇಕ ವಾರ್ಡ್‌ಗಳಲ್ಲಿ ಚರಂಡಿಗಳು ತುಂಬಿ ತುಳುಕುತ್ತಿವೆ. ಕುಡಿಯುವ ನೀರು ಇಲ್ಲದೇ ಜನ ಪರದಾಡುತ್ತಿದ್ದಾರೆ. ಗೌರವಯುತ ಬದುಕಿಗೆ ಆಶ್ರಯ ಮನಗೆಳಿಗಾಗಿ ಅಲೆದಾಡುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಪರಿಹರಿಸಿದ್ದಲ್ಲಿ ಜನರು ತಮ್ಮ ಮನೆಗಳಲ್ಲಿ ಆನಂದ ಸಿಂಗ್ ಫೋಟೋ ಹಾಕಿಕೊಳ್ಳುತ್ತಾರೆ. ಪ್ರಚಾರಕ್ಕಾಗಿ ಸ್ಮಾರಕಗಳ ನಿರ್ಮಾಣ, ಫ್ಲೆಕ್ಸ್‌ಗಳ ಅಳವಡಿಕೆ ಅಗತ್ಯವಿಲ್ಲ ಎಂದರು. ಜಿಲ್ಲಾ ಕ್ರೀಡಾಂಗಣದ ಮಧ್ಯ ಭಾಗದಲ್ಲಿ 450 ಅಡಿ ಎತ್ತರದ ಧ್ವಜ ಸ್ತಂಭ ನಿರ್ಮಿಸಿದ್ದರಿಂದ ಕ್ರೀಡಾಕೂಟಗಳಿಗೆ ಅಡ್ಡಿಯಾಗುತ್ತಿದೆ. ಅದನ್ನು ಸ್ಥಳಾಂತರಿಸಬೇಕು. ರಾಜಕಾಲುವೆ ಮೇಲೆ ನಿರ್ಮಾಣಗೊಂಡಿರುವ ಸಚಿವರ ಬಂಗ್ಲೆಯ ಕಾಂಪೌಂಡ್ ಗೋಡೆ ತೆರವುಗೊಳಿಸಬೇಕು. ಮರಿಯಮ್ಮನಹಳ್ಳಿಗೆ ಕುಡಿಯು ನೀರು ಒದಗಿಸಬೇಕು ಎಂದು ಒತಾಯಿಸಿ ಡಿಸೆಂಬರ್‌ನಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜನತಾ ಪಾರ್ಟಿ ರಾಜ್ಯಾಧ್ಯಕ್ಷೆ ಬಿ.ಟಿ.ಲಲಿತಾ ನಾಯಕ್ ತಿಳಿಸಿದರು.

    ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ, ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಅಬ್ದುಲ್ ಬಷೀರ್, ಜಿಲ್ಲಾಧ್ಯಕ್ಷ ಡಿ.ಲಾಲ್ಯನಾಯ್ಕ, ಜಿಲ್ಲಾ ಉಪಾಧ್ಯಕ್ಷ ಕೆ.ರಾಜಾಸಾಬ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ತಾರಾ ಹಿರೇಮಠ, ಹೊಸಪೇಟೆ ತಾಲೂಕು ಮಹಿಳಾ ಅಧ್ಯಕ್ಷೆ ಸುಜಾತಾ ಹಿರೇಮಠ ಇದ್ದರು.

    ಪಾರದರ್ಶಕ, ಬಡವರ ಪರ ಆಡಳಿತ ನೀಡುವ ಉದ್ದೇಶದಿಂದ ಈ ಬಾರಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಜನತಾ ಪಾರ್ಟಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಿಂದ ಜನ ರೋಸಿ ಹೋಗಿದ್ದು, ಬದಲಾವಣೆ ಬಯಸುತ್ತಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಜನತಾ ಪಾರ್ಟಿಯನ್ನು ಅಧಿಕಾರಕ್ಕೆ ತರಲು ನಾಡಿನ ಜನರು ಕೈಜೋಡಿಸಬೇಕು.
    | ಬಿ.ಟಿ.ಲಲಿತಾ ನಾಯ್ಕ, ಜನತಾ ಪಾರ್ಟಿ ರಾಜ್ಯಾಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts