More

    ದಾಖಲೆ ಪರಿಶೀಲಿಸದೆ ಮನೆಗಳ ತೆರವು ಎಂದು ಆರೋಪಿಸಿದ ಹಳೇ ಅಮರಾವತಿ ನಿವಾಸಿ ಡಾ.ಬಿ. ವಿಜಯೇಂದ್ರ ಭಟ್

    ಹೊಸಪೇಟೆ: ಇಲ್ಲಿನ ಟಿಎಸ್‌ಪಿ ಸಮೀಪದ ರೈಲ್ವೆಗೇಟ್ ಮುಖ್ಯ ರಸ್ತೆಯಲ್ಲಿನ 39 ಮನೆಗಳು ಅನಧಿಕೃತವೆಂದು ಮೂರು ದಿನಗಳಲ್ಲಿ ತೆರವುಗೊಳಿಸುವಂತೆ ತಹಸೀಲ್ದಾರ್ ನೋಟಿಸ್ ನೀಡಿದ್ದಾರೆ. ಅವು ಖಾಸಗಿ ಆಸ್ತಿ ಎಂಬುದಕ್ಕೆ ಹತ್ತಾರು ದಾಖಲೆಗಳಿದ್ದರೂ, ಅಧಿಕಾರಿಗಳು ಪರಿಶೀಲಿಸದೆ ಏಕ ಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿರುವುದು ಸರಿಯಲ್ಲ ಎಂದು ಸ್ಥಳೀಯ ನಿವಾಸಿ ಡಾ.ಬಿ.ವಿಜಯೇಂದ್ರ ಭಟ್ ಕಿಡಿಕಾರಿದರು.

    ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಟಿ.ಬಿ.ಡ್ಯಾಂ ರಸ್ತೆಯ ಬಳಿ ಬಹುತೇಕ ಟಿಎಸ್‌ಪಿ ನೌಕರರು ವಾಸವಾಗಿದ್ದರು. 1984ರಲ್ಲಿ ಟಿಎಸ್‌ಪಿ ಸಮೀಪ ಸಂಭವಿಸಿದ ಅಗ್ನಿ ಅವಘಡದಲ್ಲಿ ಅನೇಕ ಗುಡಿಸಲುಗಳು ಸುಟ್ಟು ಹೋಗಿದ್ದವು. ಹೀಗಾಗಿ ಅಂದಿನ ಜಿಲ್ಲಾಧಿಕಾರಿ ಸ್ಥಳೀಯ ನಿವಾಸಿಗಳಿಗೆ 1986ರಲ್ಲಿ ಹಕ್ಕುಪತ್ರ ವಿತರಿಸಿದ್ದರು. ನಗರಸಭೆಯಿಂದ ಚರಂಡಿ, ಕುಡಿವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಿದೆ. ದಶಕಗಳಿಂದ ನಗರಸಭೆಗೆ ಆಸ್ತಿ ತೆರಿಗೆ ಪಾವತಿಸುತ್ತಿದ್ದೇವೆ. ಮನೆ ನಿರ್ಮಾಣಕ್ಕೆ ನಗರಾಡಳಿತ ಪರವಾನಗೆ ನೀಡಿದೆ. ಆದರೆ, ಇದೀಗ ಮನೆಗಳು ಸರ್ಕಾರಿ ಜಾಗೆಯನ್ನು ಅತಿಕ್ರಮಿಸಿದ್ದು, ತೆರವುಗೊಳಿಸುವಂತೆ ತಹಸೀಲ್ದಾರ್ ಆದೇಶ ಹೊರಡಿಸಿರುವುದು ಅವೈಜ್ಞಾನಿಕ ಎಂದು ದೂರಿದರು.

    ಕಳೆದ ಆಗಸ್ಟ್‌ನಲ್ಲಿ ಈ ಕುರಿತು ವಿಚಾರಣೆಗೆ ಕರೆದಾಗ ನಮ್ಮಲ್ಲಿರುವ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇವೆ. ಆ ಕ್ಷಣಕ್ಕೆ ಸರಿ ಎಂದಿದ್ದ ತಹಸೀಲ್ದಾರ್, ಈಗ ವಂಕೈ ಕ್ಯಾಂಪ್‌ನ 14, ಟಿಎಸ್‌ಪಿ ಮುಂಭಾಗದ 25 ಮನೆಗಳನ್ನು ತೆರವುಗೊಳಿಸುವುದಾಗಿ ನೋಟಿಸ್ ನೀಡಿದ್ದಾರೆ. ಇದರಿಂದ ಒಟ್ಟು 39 ಕುಟುಂಬಗಳು ಬೀದಿಗೆ ಬರುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.

    ಸೆ.16 ರಂದು ನೋಟಿಸ್ ಸಿದ್ಧವಾಗಿದ್ದರೂ, ನಮಗೆ ಎರಡು ದಿನಗಳ ಹಿಂದೆ ತಿಳಿಸಿದ್ದಾರೆ. ಕೆಲವರಿಗೆ ನೀಡಲಾದ ನೋಟಿಸ್‌ಗಳಿಗೆ ಅಧಿಕಾರಿಗಳ ಸಹಿ ಇಲ್ಲ. ದಶಕಗಳ ಹಿಂದಿನ ಮಾಲೀಕರ ಹೆಸರಲ್ಲೂ ನೋಟಿಸ್ ನೀಡಿದ್ದಾರೆ ಎಂದು ಆರೋಪಿಸಿದರು.

    ಮತ್ತೊಮ್ಮೆ ಆಸ್ತಿ ಪತ್ರಗಳನ್ನು ಪರಿಶೀಲಿಸುವಂತೆ ಕೋರಿದರೂ ಕಂದಾಯ ಅಧಿಕಾರಿಗಳು ಒಪ್ಪುತ್ತಿಲ್ಲ. ಬದಲಾಗಿ ಕೋರ್ಟ್‌ಗೆ ಹೋಗುವಂತೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಈ ಕುರಿತು ಸಚಿವರ ಗಮನಕ್ಕೆ ತರಲಾಗಿದ್ದು, ಅವರು ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ಈ ನಡುವೆ ಮಂಗಳವಾರ ಸಂಜೆ ಬಡಾವಣೆಗೆ ಭೇಟಿ ನೀಡಿದ್ದ ತಹಸೀಲ್ದಾರ್, ಎರಡು ದಿನಗಳಲ್ಲಿ ತೆರವುಗೊಳಿಸಬೇಕು ಎಂದು ಸೂಚಿಸಿದ್ದಾರೆ ಎಂದು ತಿಳಿಸಿದರು.

    ಕೆಲ ತಿಂಗಳ ಹಿಂದೆ ರಸ್ತೆ ವಿಸ್ತರಣೆಗಾಗಿ ಅಕ್ಕಪಕ್ಕದ ಮನೆಗಳನ್ನು 3- 4 ಅಡಿಗಳಷ್ಟು ತೆರವುಗೊಳಿಸಿದ್ದರು. ಈಗಾಗಲೇ ಚರಂಡಿ ನಿಮಾರ್ಣಗೊಂಡ ಬಳಿಕವೂ 25 ಅಡಿ ತೆರವಿಗೆ ಮುಂದಾಗಿದ್ದು, ಇದರಿಂದ ಅನೇಕ ಕುಟುಂಬಗಳು ಸೂರು ಕಳೆದುಕೊಳ್ಳಲಿವೆ ಎಂದರು. ದಶಕಗಳಿಂದ ಇದೇ ಜಾಗೆಯಲ್ಲಿ ಬದುಕು ಕಟ್ಟಿಕೊಂಡಿರುವ ನಮಗೆ ಇಲ್ಲೇ ವಾಸಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

    ಸುದ್ದಿಗೋಷ್ಠಿಯಲ್ಲಿ ಸುದರ್ಶನ ಗುಪ್ತಾ, ರಾಘವೇಂದ್ರ ಭಟ್, ಮೊಹ್ಮದ್ ಸಲೀಂ, ಶೆರೀನ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts