More

    ಸಚಿವರಿಂದ ಸರ್ಕಾರಿ ಜಾಗ ಒತ್ತುವರಿ ಆಗಿದೆ ಎಂದ ನಗರಸಭೆ ಸದಸ್ಯ ಅಬ್ದುಲ್ ಖದೀರ್

    ಹೊಸಪೇಟೆ: ಸಚಿವ ಆನಂದ ಸಿಂಗ್ ಸರ್ಕಾರಿ ಜಮೀನು ಒತ್ತುವರಿ ಮಾಡಿಲ್ಲ ಎನ್ನುವುದಾದರೆ ಜಿಲ್ಲಾಧಿಕಾರಿಗಳು, ಸಚಿವರ ಹಾಗೂ ನಮ್ಮ ಸಮ್ಮುಖದಲ್ಲಿ ಸರ್ವೇ ನಡೆಯಲಿ. ನಮ್ಮ ಆರೋಪ ಸುಳ್ಳಾಗಿದ್ದರೆ, ನಗರಸಭೆ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುತ್ತೇನೆ. ಆರೋಪ ದೃಢಪಟ್ಟರೆ ಸಚಿವ ಆನಂದ ಸಿಂಗ್ ಸ್ಥಾನವನ್ನು ತ್ಯಜಿಸಲಿ ಎಂದು ನಗರಸಭೆ ಸದಸ್ಯ ಅಬ್ದುಲ್ ಖದೀರ ಪಂಥಾಹ್ವಾನ ನೀಡಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿರುವ ಸಚಿವರು ಆರ್‌ಟಿಐ ಕಾರ್ಯಕರ್ತ ಟಿ.ಶ್ರೀಧರ ದೂರು ಮತ್ತು ಅದಕ್ಕೆ ಲೋಕಾಯುಕ್ತರು ನೀಡಿರುವ ಕ್ಲಿನ್ ಚಿಟ್ ಉಲ್ಲೇಖಿಸಿರುವುದು ಸರಿ. ಆದರೆ, ಶ್ರೀಧರ್ ನೀಡಿರುವ ದೂರನ್ನೇ ನಾವು ಕಾಪಿ ಪೇಸ್ಟ್ ಮಾಡಿಲ್ಲ. ನಮ್ಮ ದೂರಿನಲ್ಲಿರುವ ಸರ್ವೇ ನಂಬರ್‌ಗಳು ಬೇರೆ. ಸಚಿವರು ನೀರಿನಲ್ಲಿ ಹಾಲು ಬೆರೆಸುವ ಪ್ರಯತ್ನ ನಡೆಸಿದ್ದಾರೆ ಎಂದು ತಿರುಗೇಟು ನೀಡಿದರು.

    ಸರ್ಕಾರದ ಸರ್ವೇನಂ. 73, 74, 75 ಗಳನ್ನು ಸುರಕ್ಷಾ ಎಂಟರ್‌ಪ್ರೈಸೆಸ್ ಕಬಳಿಕೆ ಮಾಡಿದೆ. ಸರ್ವೇನಂ. 67, 63 ಮೇಲೆ ಒಳಚರಂಡಿಯ 5 ಸೆಂಟ್ಸ್, 0.30 ಸೆಂಟ್ಸ್ ಸರ್ಕಾರಿ ಜಮೀನುಗಳನ್ನು ಒತ್ತುವರಿಯಾಗಿದೆ. ಸಚಿವರ ಬಂಗ್ಲೆ ಸುತ್ತಲಿನ ಕರ್ನಾಟಕ ಒಳಚರಂಡಿ ಮಂಡಳಿ, ಉದ್ಯಾನ, ರಸ್ತೆ ಹಾಗೂ ರಾಜಕಾಲುವೆ ಅತಿಕ್ರಮಿಸಿದ್ದಾರೆ ಎಂದು ಲೋಕಾಯುಕ್ತರಿಗೆ ದೂರು ನೀಡಿದ್ದೇವೆ. ನಮ್ಮ ಪ್ರಕರಣದಲ್ಲಿ ಸಚಿವರಿಗೆ ಲೋಕಾಯಕ್ತರಿಂದ ಕ್ಲೀನ್‌ಚಿಟ್ ನೀಡಿಲ್ಲ. ಸಚಿವರು ಸುಳ್ಳುಗಾರರ ಅಧ್ಯಕ್ಷ ಎಂದು ಲೇವಡಿ ಮಾಡಿದರು.

    ಸಚಿವರ ಸಂಬಂಧಿ ಸಂತೋಷ ಸಿಂಗ್ ಅವರು ನಗರಸಭೆಗೆ ಸೇರಿದ ಸರ್ವೇ ನಂ.81/ಬಿ1ನ 0.50 ಸೆಂಟ್ಸ್ ಜಾಗೆಯನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದರು. ನಾವು ಅದನ್ನು ಬಯಲಿಗೆಳೆದ ಬಳಿಕ ಸಂತೋಷ ಸಿಂಗ್ ನೋಂದಣಿಯನ್ನು ರದ್ದುಗೊಳಿಸಿದ್ದಾರೆ. ಸರ್ಕಾರಿ ಜಾಗೆಯನ್ನು ಪುನಃ ನಗರಸಭೆಗೆ ಬಿಟ್ಟುಕೊಟ್ಟಿದ್ದಾರೆ. ಆದರೆ, ಕಬಳಿಸಿದವರ ವಿರುದ್ಧ ಯಾವುದೇ ರೀತಿ ಕಾನೂನು ಕ್ರಮ ಜರುಗಿಸಿಲ್ಲ. ಪ್ರಭಾವಿಗಳಿಂದಾದರೆ ಅದು ಸಿವಿಲ್ ವ್ಯಾಜ್ಯ, ಇತರರಾದರೆ ಪೊಲೀಸರು ಕ್ರಿಮಿನಲ್ ನೆಲೆಗಟ್ಟಿನಲ್ಲಿ ನೋಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ತಮ್ಮ ಮೇಲೆ ದೂರು ನೀಡಿದ್ದೇವೆ ಎಂಬ ಕಾರಣಕ್ಕೆ ಸಚಿವರು ಅಲಿಬಾಬಾ ಔರ್ ಚಾಲೀಸ್ ಚೋರ್ ಪಟ್ಟಕಟ್ಟಿದ್ದಾರೆ. ಅಲಿಬಾಬಾ ಯಾರೆಂಬುದು ಸಚಿವರೇ ಉತ್ತರಿಸಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮತ್ತೋರ್ವ ದೂರುದಾರ ಎಂ.ಖಾಜಾ ಮೈನುದ್ದೀನ್ ಉಪಸ್ಥಿತರಿದ್ದರು.

    ಸಚಿವರ ಬಂಗ್ಲೆ ವಿಚಾರವಾಗಿ ಡಿ.ವೇಣುಗೋಪಾಲ, ನಾನು ಸೇರಿದಂತೆ ಐವರು ಲೋಕಾಯುಕ್ತರಿಗೆ ದೂರು ನೀಡಿದ್ದೇವೆ. ಇದರಲ್ಲಿ ಡಿ.ಪೋಲಪ್ಪ ಅವರ ಪಾತ್ರವಿಲ್ಲ. ಕೆಲವೊಮ್ಮೆ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಜೊತೆಗೆ ನಿಂತಿದ್ದರು ಅಷ್ಟೇ.
    | ಅಬ್ದುಲ್ ಖದೀರ್, ನಗರಸಭೆ ಸದಸ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts