More

    ನನ್ನ ವಿರುದ್ಧದ ಆರೋಪದಲ್ಲಿಲ್ಲ ಹುರುಳು, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಸ್ಪಷ್ಟನೆ

    ಹೊಸಪೇಟೆ: ನನ್ನ ವಿರುದ್ಧ ಮಾಡಿರುವ ಸರ್ಕಾರಿ ಭೂಮಿ ಒತ್ತುವರಿ ಆರೋಪದಲ್ಲಿ ಹುರುಳಿಲ್ಲ’ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಸ್ಪಷ್ಟಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ದಾಖಲೆಗಳ ಸಮೇತ ಸ್ಪಷ್ಟೀಕರಣ ನೀಡಿದರು. ಇದೇ ವಿಚಾರಕ್ಕೆ 2019-20ರಲ್ಲೇ ಲೋಕಾಯುಕ್ತ ಕ್ಲೀನ್‌ಚಿಟ್ ನೀಡಿದೆ. ಆದರೂ ಅಪಪ್ರಚಾರಕ್ಕಾಗಿ ಅಲಿಬಾಬಾ ಔರ್ ಚಾಲೀಸ್ ಚೋರರು ನಡೆಸಿದ ಷಡ್ಯಂತ್ರದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮತ್ತು ಪೋಲಪ್ಪ ಹರಕೆಯ ಕುರಿಗಳಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭೂ ಅತಿಕ್ರಮಣದ ಬಗ್ಗೆ ನನ್ನ ವಿರುದ್ಧ ಕೆಲವರು ಆರೋಪಗಳನ್ನು ಮಾಡಿದ್ದರು. ಲೋಕಾಯುಕ್ತರಿಗೆ ದೂರು ನೀಡಿದ್ದಾಗಿ ಹೇಳಿಕೊಂಡಿದ್ದರು. ಆದರೆ, ಈ ಬಗ್ಗೆ 2019-20ರಲ್ಲೇ ಲೋಕಾಯುಕ್ತರಿಗೆ ಸಲ್ಲಿಕೆಯಾಗಿದ್ದ ದೂರು ಮತ್ತೊಮ್ಮೆ ಪುನರಾವರ್ತನೆಯಾಗಿದೆ ಎಂದರು.

    2019-20ರಲ್ಲಿ ಆರ್‌ಟಿಐ ಕಾರ್ಯಕರ್ತ ಟಿ.ಶ್ರೀಧರ ಸರ್ವೇ ನಂಬರ್ 82/1, 82/3 ದ 0.88 ಎಕರೆ ಮತ್ತು ಸ.ನಂ. 63 ರ ವಿಸ್ತೀರ್ಣ, 0.30 ವಿಸ್ತೀರ್ಣ ಮತ್ತು ಸ. ನಂ.83/ 2 ಹಾಗೂ 62/2 ಂ ಕಾಲುವೆ ಹೊಂದಿಕೊಂಡಿರುವ ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರುದಾರರ ಸಮ್ಮುಖದಲ್ಲಿ ಸ್ಥಳ ಸರ್ವೇ ನಡೆಸಿ, ವರದಿ ನೀಡುವಂತೆ ಕಂದಾಯ, ಪೌರಾಯುಕ್ತರು ಹಾಗೂ ಹುಡಾ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರನ್ವಯ ಆಗಲೇ ಸಮೀಕ್ಷೆ ನಡೆದಿದೆ. ದೂರುದಾರರು ಸಮೀಕ್ಷಾ ವರದಿಗೆ ಸಹಿ ಹಾಕದೆಯೆ ಪಲಾಯನ ಮಾಡಿದ್ದಾರೆ. ಆಯಾ ಸವೇ ನಂಬರ್‌ಗಳಲ್ಲಿ ಯಾವುದೇ ಒತ್ತವರಿಯಾಗಿಲ್ಲ ಎಂದು ಸ್ಪಷ್ಟವಾಗಿ ವರದಿಯಲ್ಲಿ ಉಲ್ಲೇಖವಿದೆ ಎಂದರು.

    ನಗರದಲ್ಲಿ ಇತ್ತೀಚೆಗೆ ಭೂಗಳ್ಳರು ಹೆಚ್ಚಿದ್ದಾರೆ. ನಗರಸಭೆ ಮಾಜಿ ಸದಸ್ಯ ವೇಣುಗೋಪಾಲ ಮತ್ತು ಚಾಲೀಸ್ ಚೋರ್‌ಗಳು ಹಲವೆಡೆ ಸರ್ಕಾರಿ ಭೂಮಿಗಳನ್ನು ಅತಿಕ್ರಮಿಸಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ. ಅವರು ತಲೆ ಮರಿಸಿಕೊಂಡಿದ್ದಾರೆ. ನಗರಸಭೆ ಸಿಬ್ಬಂದಿ ಅಮಾನತುಗೊಂಡಿರುವುದು ಎಲ್ಲರಿಗೂ ಗೊತ್ತಿದೆ. ತಮ್ಮ ಕೃತ್ಯಗಳಿಗೆ ನಾನು ಅಡ್ಡಿಯಾಗಬಾರದು ಮತ್ತು ರಾಜಕೀಯವಾಗಿ ನನ್ನನ್ನು ಹತ್ತಿಕ್ಕಲು ಹಳೆಯ ಅರ್ಜಿಯನ್ನೇ ಕಾಪಿ ಪೇಸ್ಟ್ ಮಾಡಿ, ದೂರು ದಾಖಲಿಸಿದ್ದಾರೆ ಎಂದರು.

    ಹಂಪಿ ರಸ್ತೆಯಲ್ಲಿರುವ ಮಲ್ಲಿಕಾರ್ಜುನ ಮಠದ ಜಾಗ ಈಗ ಕೋಟ್ಯಂತರ ರೂ. ಬೆಲೆ ಬಾಳುತ್ತದೆ. ಅದನ್ನು ಲಪಟಾಯಿಸಲು ಈ ಹಿಂದೆಯೇ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ಮಡಿವಾಳ ಸಮಾಜದ ಆಸ್ತಿಯನ್ನು ಪೋಲಪ್ಪ ಅವರ ಮಾವ ಜ್ಞಾನೇಶ್ವರ ನೋಡಿಕೊಳ್ಳುತ್ತಿದ್ದಾರೆ. ಆದರೆ, ಆಸ್ತಿಯನ್ನು ಲಪಟಾಯಿಸಲು ಹಲವು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಮಡಿವಾಳ ಸಮಾಜದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ವಿರಕ್ತಮದ ಟ್ರಸ್ಟ್ ಅಸ್ತಿತ್ವ್ವದಲ್ಲಿದ್ದರೂ, ಭೂ ಗಳ್ಳರು ಮಲ್ಲಿಕಾರ್ಜುನ ಸ್ವಾಮಿ ಜೀರ್ಣೋದ್ಧಾರ ಸಂಘ ಕಟ್ಟಿಕೊಂಡಿದ್ದರು. ಮಠಕ್ಕೆ ಸಂಬಂಧವೇ ಇದರ ವೇಣುಗೋಪಾಲ ಅಧ್ಯಕ್ಷ, ಪೋಲಪ್ಪ ಗೌರಾವಾಧ್ಯಕ್ಷರಾಗಿದ್ದರು. ಶ್ರೀ ಮಠದ ಆಸ್ತಿಯನ್ನು ಜ್ಞಾನೇಶ್ವರ ಹೆಸರಲ್ಲಿ ವಿಲ್ ಸೃಷ್ಟಿಸಿ, ಜ್ಞಾನೇಶ್ವರ ಸ್ವಾಮಿ ಎಂದು ದಾಖಲೆಗಳಲ್ಲಿ ಬರೆಯುತ್ತಾರೆ. ಅದನ್ನು ಕಬಳಿಸಲು ಯತ್ನಿಸಿದಾಗ ಮಡಿವಾಳ ಸಮಾಜದವರು ಅಡ್ಡಿಯಾಗುತ್ತಿದ್ದಂತೆ ಕೋರ್ಟ್ ಮೊರೆ ಹೋಗಿದ್ದರು. ಈ ಮೂಲಕ ಪ್ರಕರಣದಲ್ಲಿ ಅಧಿಕಾರಿಗಳ ಮಧ್ಯ ಪ್ರವೇಶವನ್ನು ತಡೆಯುವುದು ಇದರ ಹಿಂದಿನ ಉದ್ದೇಶ. ಸಮಾಜದವರು ಮೌನವಾಗುತ್ತಿದ್ದಂತೆ ಕೇಸ್ ವಾಪಸ್ ಪಡೆದು, ತಮ್ಮದೇ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದರು. ಈ ಬಗ್ಗೆ ಮಡಿವಾಳ ಸಮಾಜದವರು ನನ್ನ ಗಮನಕ್ಕೆ ತಂದಿದ್ದರಿಂದ ಮಾತುಕತೆಗಾಗಿ ಪೋಲಪ್ಪ ಮನೆಗೆ ತೆರಳಿದ್ದೆ. ಆಸ್ತಿ ಕೈತಪ್ಪುತ್ತದೆ ಎಂಬ ಆತಂಕದಿಂದ ನನ್ನ ವಿರುದ್ಧ ಜಾತಿ ನಿಂದನೆ ದೂರು ನೀಡಿದ್ದಾರೆ ಎಂದರು.

    ಕ್ಷಮೆಗೆ ಆಗ್ರಹಿಸುವಷ್ಟು ದೊಡ್ಡವನಲ್ಲ
    ನನ್ನ ವಿರುದ್ಧ ಸುದ್ದಿಗೋಷ್ಠಿ ನಡೆಸಿ ತೇಜೋವಧೆಗೆ ಯತ್ನಿಸಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪಗೂ ಈ ದಾಖಲೆಗಳನ್ನು ಕಳುಹಿಸುತ್ತೇನೆ. ಇನ್ನು ಮುಂದಾದರೂ, ಯಾರೋ ನೀಡಿದ ದೂರುಗಳನ್ನು ಪೂರ್ವಾಪರ ವಿಚಾರಿಸದೇ ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಎಂದು ಅವರಲ್ಲಿ ಕೇಳಿಕೊಳ್ಳುತ್ತೇನೆ. ಕ್ಷಮೆಗೆ ಆಗ್ರಹಿಸುವಷ್ಟು ದೊಡ್ಡವ ನಾನಲ್ಲ ಎಂದರು.

    ಇತ್ತೀಚೆಗೆ ವೇಣುಗೋಪಾಲ ಮತ್ತಿತರರು ನಡೆಸಿರುವ ಅಕ್ರಮ ಭೂವ್ಯವಹಾರ, ಸರ್ಕಾರಿ ಆಸ್ತಿ ಕಬಳಿಕೆಗೆ ಸಂಬಂಧಿಸಿ ಜನರಿಂದ ದೂರುಗಳು ಕೇಳಿ ಬರುತ್ತಿವೆ. ಅವುಗಳನ್ನು ಕ್ರೋಡೀಕರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ನೀಡುತ್ತೇನೆ. ಅಲ್ಲದೇ, ರಾಜ್ಯಾದ್ಯಂತ ಇಂತಹ ಅನೇಕ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕ್ಕೆ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ಪತ್ರ ಬರೆಯುತ್ತೇನೆ.
    | ಆನಂದ ಸಿಂಗ್, ಪ್ರವಾಸೋದ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts