More

    ಏ.28ರಂದು ಸಾಣೇಹಳ್ಳಿಯಲ್ಲಿ ಲಿಂಗೈಕ್ಯ ಶಿವಕುಮಾರ ಜಯಂತ್ಯುತ್ಸವ

    ಹೊಸದುರ್ಗ: ಸಿರಿಗೆರೆಯ ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಜನ್ಮದಿನದ ಪ್ರಯುಕ್ತ ಏ.28 ರಂದು ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ಶನಿವಾರ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶಿವಕುಮಾರ ಸ್ವಾಮೀಜಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಗುರುವಂದನೆ ಮತ್ತು ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದ ಸಾನ್ನಿಧ್ಯವಹಿಸಿ ಮಾತನಾಡಿದರು.

    ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಸ್ಥಾಪಿಸಿದವರು ಶಿವಕುಮಾರ ಶ್ರೀಗಳು. ಈ ಹಿನ್ನೆಲೆಯಲ್ಲಿ ಸಾಣೇಹಳ್ಳಿಯಲ್ಲಿ ಅವರ ರಥೋತ್ಸವ ಪ್ರತಿವರ್ಷ ಏ.28 ರಂದು ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಗುರುವಂದನೆ ಸಹ ನಡೆಸಿಕೊಂಡು ಬರಲಾಗಿದೆ ಎಂದು ತಿಳಿಸಿದರು.

    ಹಿರಿಯ ವಿದ್ಯಾರ್ಥಿಗಳ ಸ್ನೇಹ ಮಿಲನ ಹಾಗೂ ಗುರುವಂದನೆ ಹೃದಯಸ್ಪರ್ಶಿ ಕಾರ್ಯಕ್ರಮಗಳು. ಇವು ಗುರು-ಶಿಷ್ಯರನ್ನು ಭಾವನಾತ್ಮಕವಾಗಿ ಬೆಳೆಸಿವೆ. ಒಳ್ಳೆಯ ಕಾರ್ಯಕ್ರಮ ಮಾಡಲು ಹಣ ಬೇಕಿಲ್ಲ, ಉತ್ತಮ ಮನಸಿರಬೇಕಷ್ಟೇ ಎಂದರು.

    ಇಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳೆಲ್ಲ ಸೇರಿ ಒಂದು ಸಂಘ ಸ್ಥಾಪಿಸಬೇಕು. ಆ ಮೂಲಕ ಆರ್ಥಿಕ ದೃಢತೆ ಸಾಧಿಸಿ ಸಾಣೇಹಳ್ಳಿಯ ಕನ್ನಡ ಮಾಧ್ಯಮ ಶಾಲೆಗೆ ಸೇರುವ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಶಿಕ್ಷಣ ಒದಗಿಸುವ ವ್ಯವಸ್ಥೆ ಮಾಡುವಂತಾಗಬೇಕು. ಹಿರಿಯ ವಿದ್ಯಾರ್ಥಿ ಸಂಘದ ಸ್ಥಾಪನೆಗೆ ಶ್ರೀಮಠದಿಂದ ಐವತ್ತು ಸಾವಿರ ರೂಪಾಯಿ ನೀಡುತ್ತೇವೆ ಎಂದರು.

    ಬಿಇಒ ಎಲ್. ಜಯಪ್ಪ ಮಾತನಾಡಿ, ಹಿರಿಯ ವಿದ್ಯಾರ್ಥಿ ಸಂಘಗಳು ರಚನಾತ್ಮಕವಾಗಿ ಕೆಲಸ ಮಾಡಬೇಕು. ಶಾಲೆಗೆ ಮೂಲ ಸೌಕರ್ಯ ಒದಗಿಸಬೇಕು. ಶ್ರೀಮಠದ ಜತೆಗೆ ಹಿರಿಯ ವಿದ್ಯಾರ್ಥಿಗಳು ಕೈಜೋಡಿಸಿದರೆ ಎಲ್ಲ ಆಧುನಿಕ ಸೌಲಭ್ಯಗಳನ್ನೂ ನೀಡಬಹುದು. ತುಮಕೂರಿನ ಸಿದ್ಧಗಂಗಾ ಮಠ ಅಚ್ಚುಕಟ್ಟಾಗಿ ನಡೆಯಲು ಅಲ್ಲಿ ಓದಿದ ಹಿರಿಯ ವಿದ್ಯಾರ್ಥಿ ಸಂಘಗಳೇ ಕಾರಣ. ಹೀಗೆ ಸಾಣೇಹಳ್ಳಿಯೂ ಪಂಡಿತಾರಾಧ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಒಂದು ಮಾದರಿ ಶಿಕ್ಷಣ ಸಂಸ್ಥೆ ಬೆಳೆಯುವಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

    ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶಿವಕುಮಾರ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ 80 ಶಿಕ್ಷಕರು ಮತ್ತು ನೌಕರರನ್ನು ಸನ್ಮಾನಿಸಲಾಯಿತು. ಜಿಲ್ಲಾ ವಿದ್ಯಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ, ಎ.ಸಿ. ಚಂದ್ರಪ್ಪ, ಡಿ.ವಿ. ಗಂಗಾಧರಪ್ಪ, ಡಾ. ಮಂಜುನಾಥ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts