More

    ಮನೆ ಮನೆ ಸುತ್ತುವ ಹೂವಿನ ಕೋಲು – ನವರಾತ್ರಿ ಕಾಲದ ವಿಶೇಷ ಕಲಾಪ್ರಕಾರ

    -ಶಿವರಾಮ ಆಚಾರ್ಯ ಬಂಡಿಮಠ

    ಬ್ರಹ್ಮಾವರ : ನವರಾತ್ರಿಯ ಸಮಯದಲ್ಲಿ ಆಯ್ದ ಕೆಲವು ಕಲಾಸಕ್ತರ ಮನೆಗಳಿಗೆ ಬಂದು ಹರಸುವ ಬಾಲಕರಿಂದ ನಡೆಯುವ ಹೂವಿನ ಕೋಲು ಎನ್ನುವ ಯಕ್ಷಗಾನ ಪರಂಪರೆಯ ಒಂದು ಕಲಾಪ್ರಕಾರವನ್ನು ನಡು ಬಡಗುತಿಟ್ಟಿನ ಯಕ್ಷಗಾನ ಪ್ರದೇಶವೆಂದು ಗುರುತಿಸಿಕೊಂಡ ಬಾರಕೂರಿನಲ್ಲಿ ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ.

    ಬಡಗುತಿಟ್ಟಿನ ಯಕ್ಷಗಾನದಲ್ಲಿ ನಡೆಯುವ ಈ ಒಂದು ಕಲೆಗೆ ನೂರಾರು ವರ್ಷಗಳ ಇತಿಹಾಸ, ಪರಂಪರೆ ಇದೆ. ನವರಾತ್ರಿಯ ಸಂದರ್ಭದಲ್ಲಿ ನಡೆಯುವ ಈ ಕಲೆಯು ಯಕ್ಷಗಾನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಹಾರಾಡಿ ರಾಮಗಾಣಿಗ, ಗುರುವೀರಭದ್ರ ನಾಯಕರ ಊರಾದ ಬ್ರಹ್ಮಾವರ, ಬಾರಕೂರು, ಕೋಟ, ಕುಂದಾಪುರ, ಬೈಂದೂರು ಭಾಗದಲ್ಲಿ ಮಾತ್ರ ಹಲವಾರು ತಂಡಗಳು ಪ್ರಚಲಿತದಲ್ಲಿದ್ದು ಸದ್ಯ ಮರೆಯಾಗಿವೆ. ಬಾರಕೂರಿನ ವೆಂಕಟ್ರಮಣ ಆಚಾರ್ಯರು 75 ವರ್ಷದಿಂದ ಹೂವಿನ ಕೋಲು ಎನ್ನುವ ಕಲೆಯನ್ನು ಮುನ್ನಡೆಸಿಕೊಂಡು ಬಂದು ಅವರ ನಿಧನದ ಬಳಿಕ ಅವರ ಸೋದರಳಿಯ ಸುರೇಶ್ ಆಚಾರ್ಯ ಈ ಕಲಾಸೇವೆಯನ್ನು ಮುಂದುವರಿಸುತ್ತಿದ್ದಾರೆ.

    ವಿದ್ಯಾರ್ಥಿಗಳು, ಯುವಕಕರಿಗೆ ಪೌರಾಣಿಕದ ಆಯ್ದ ಯಕ್ಷಗಾನ ಪ್ರಸಂಗದಲ್ಲಿ 2 ಪಾತ್ರಗಳು ಬರುವ ಕಥೆಯನ್ನು ಹೆಣೆದು, ತಾಳಮದ್ದಳೆಯ ಮಾದರಿಯಲ್ಲಿ ಯಕ್ಷಗಾನದ ನವರಸ ಕಲೆಗಳನ್ನು ಅಭಿವ್ಯಕ್ತ ಪಡಿಸುವ ಹೂವಿನ ಕೋಲು, ನವರಾತ್ರಿಯ ಪ್ರಥಮ ದಿನದಂದು ಬಾರಕೂರು ಶ್ರೀ ಕಾಳಿಕಾಂಬಾ ದೇವಳದಲ್ಲಿ ಪ್ರಥಮ ಸೇವೆ ಮಾಡಿ ಮುಂದುವರಿಯುವುದು ತಂಡದ ವಾಡಿಕೆ.

    ಹೂವಿನ ಕೋಲು ಕಲಾ ಪ್ರಕಾರ ನವರಾತ್ರಿಯ ದಿನಗಳಲ್ಲಿ ಮಾತ್ರ ಮಾಡಲಾಗುವ ಈ ಕಲೆ. ಹೆಚ್ಚಾಗಿ ಯಕ್ಷಗಾನ ಮೇಳದ ಕಲಾವಿದರು ಭಾಗವತರಾಗಿ ಮತ್ತು ಮದ್ದಳೆಗಾರರಾಗಿ ಇದ್ದು ನವರಾತ್ರಿಗೆ ಶಾಲಾ ರಜೆ ಇರುವ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಿ ಹೂವಿನ ಕೋಲಿನ ತರಬೇತಿ ನೀಡುವ ಇಂತಃ ಕಲಾಪ್ರಕಾರಗಳು ಉಳಿಯಲು ಸರ್ಕಾರಗಳ ಮತ್ತು ಕಲಾಸಕ್ತರ ಪ್ರೋತ್ಸಾಹ ಬೇಕಾಗಿದೆ.

    ಹೂವಿನಕೋಲು ಪ್ರದರ್ಶನ ಹೇಗೆ?
    ಕಲಾಭಿಮಾನಿಗಳ ಮನೆಯಲ್ಲಿ ಸಮವಸ್ತ್ರ ದಾರಿಯಾದ ಇಬ್ಬರು ಎದುರು ಬದುರಾಗಿ ಕುಳಿತು 15 ಇಂಚು ಎತ್ತರದ ಹೂವಿನಿಂದ ಅಲಂಕೃತಗೊಂಡ ಕೋಲನ್ನು ಹಿಡಿದುಕೊಂಡು ನಾರಾಯಣ ದೇವರನ್ನು ಸ್ತುತಿ ಮಾಡಿ ನಾರಾಯಣಾಯನಮಃ ನಾರಾಯಣಾಯಃ ಎನ್ನುವುದರೊಂದಿಗೆ ಆರಂಭಗೊಂಡು ಮನೆಯವರನ್ನು ಹರಸಿದ ಬಳಿಕ 20 ನಿಮಿಷದಲ್ಲಿ ಅಂತ್ಯಗೊಳ್ಳುವ ಯಕ್ಷಗಾನದ ಕಥೆ ನಡೆಯುತ್ತದೆ. ಮೇಳದ ಕಲಾವಿದರಾದ ಭಾಗವತ ಸುರೇಶ್‌ಗೆ ಮದ್ದಳೆಗಾರರಾಗಿ ಚಗ್ರಿಬೆಟ್ಟು ಸುರೇಶ್ ಆಚಾರ್ಯ ಮತ್ತು ಬಾಲಕರಾಗಿ ಬಾರಕೂರಿನ ಶಾಲಾ ವಿದ್ಯಾರ್ಥಿಗಳಾದ ಪೃಥ್ವಿಕ್ ಮತ್ತು ಪ್ರೀತಮ್ ಈ ವರ್ಷದ ತಂಡದಲ್ಲಿದ್ದಾರೆ. 4 ಮಂದಿಯ ಇವರ ತಂಡ ಪ್ರತೀ ದಿನ 15 ಮನೆಗಳಿಗೆ ಸಂಚರಿಸುತ್ತಾರೆ.

    ಅಳಿಯುತ್ತಿರುವ ಹೂವಿನ ಕೋಲು ಕಲೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಮಕ್ಕಳಿಗೆ ತರಬೇತಿ ನೀಡಿ ಅವರಿಂದ ಯಕ್ಷಗಾನದ ಶೈಲಿಯ ಮಾತು ಮತ್ತು ಉಚ್ಛಾರಣೆಯನ್ನು ಮಾಡಿಸುವುದು ಸವಾಲಿನ ಕೆಲಸ. 25 ವರ್ಷದಿಂದ ಹೂವಿನ ಕೋಲು ಕಲೆಯನ್ನು ಮುಂದುವರಿಸಿಕೊಂಡು ಬರುತ್ತಾ ಇದ್ದೇನೆ.
    -ಭಾಗವತ ಸುರೇಶ್ ಆಚಾರ್ಯ, ಬಾರಕೂರು ಹೂವಿನಕೋಲುತಂಡದ ಮುಖ್ಯಸ್ಥ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts