More

    ಮನೆಯಲ್ಲೇ ಗೊಬ್ಬರ ತಯಾರಿಕೆ

    ಶಶಿಧರ ಕುಲಕರ್ಣಿ ಮುಂಡಗೋಡ: ಮನೆಯ ಹೂದೋಟ, ತರಕಾರಿ ಗಿಡಗಳು, ಸೊಪ್ಪಿನ ಗಿಡಗಳು, ತೆಂಗು ಹಾಗೂ ಇತರ ಗಿಡಗಳಿಗೆ ಮನೆಯಲ್ಲಿಯೇ ಮಿಶ್ರ ಗೊಬ್ಬರ ತಯಾರಿಸಬಹುದು. ಅದು ಕೂಡ ಮನೆಯಲ್ಲಿನ ಹಸಿ ಕಸ, ತರಕಾರಿ, ಹಣ್ಣಿನ ಸಿಪ್ಪೆ ಮತ್ತಿತರ ತ್ಯಾಜ್ಯಗಳಿಂದ.

    ಪಟ್ಟಣದ ಬಸವೇಶ್ವರನಗರದ ಜಗದೀಶ ಕಾನಡೆ ಎಂಬುವರು ತಾಲೂಕಿನಲ್ಲಿಯೇ ಪ್ರಥಮ ಬಾರಿ ಪೈಪ್ ಕಾಂಪೋಸ್ಟ್ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

    ಏನಿದು ಪೈಪ್ ಕಾಂಪೋಸ್ಟ್? : ಪೈಪ್​ನಿಂದ ಮಿಶ್ರ ಗೊಬ್ಬರ ತಯಾರಿ ಮಾಡುವ ವಿಧಾನವೇ ಪೈಪ್ ಕಾಂಪೋಸ್ಟ್. ಸುಮಾರು 5 ಅಡಿ ಉದ್ದ ಹಾಗೂ 10 ಇಂಚು ಅಗಲದ ಪ್ಲಾಸ್ಟಿಕ್ ಪೈಪ್ ತೆಗೆದುಕೊಳ್ಳಬೇಕು. ಇದಕ್ಕೆ ತಗಲುವ ವೆಚ್ಚ 750 ರೂ. ಮಾತ್ರ. 1 ಅಡಿ ಆಳದ ಗುಂಡಿ ತೋಡಿ ನೆಲದಲ್ಲಿ ಪೈಪ್ ಹುಗಿಯಬೇಕು. ಅದರ ಸುತ್ತ ಮಣ್ಣು ಹಾಕಿ ಗಟ್ಟಿಯಾಗಿ ನಿಲ್ಲಿಸಬೇಕು. ಮೂರು ಮುಷ್ಠಿ ಸೆಗಣಿಗೆ ಒಂದು ಮುಷ್ಠಿ ಬೆಲ್ಲ ಮತ್ತು ಕಡಲೆ ಹಿಟ್ಟು ಮಿಶ್ರಣ ಮಾಡಬೇಕು. ಕಡಲೆ ಹಿಟ್ಟಿಗೆ ಹುಳುಗಳು ಬಹುಬೇಗ ಬೆಳವಣಿಗೆ ಆಗುತ್ತವೆ. ಇವುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪೈಪ್​ನೊಳಗೆ ಹಾಕಬೇಕು. ಯಾವುದೇ ರೀತಿಯ ತೇವಾಂಶ ಇರಬಾರದು. ಮಿಶ್ರಣವನ್ನು ಹಾಕಿದ ನಂತರ ಒಂದು ದಿನ ಹಾಗೆಯೇ ಬಿಡಬೇಕು.

    ಏನೇನು ಸೇರಿಸಬೇಕು?: ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸ, ತರಕಾರಿ ಸಿಪ್ಪೆ, ಹಣ್ಣಿನ ಸಿಪ್ಪೆ, ಮಾಂಸದ ತುಂಡು, ಮೀನು ಕೊಯ್ದ ಸಿಪ್ಪೆ, ನೀರಿನ ಅಂಶ ಬಿಟ್ಟು ಎಲ್ಲವನ್ನೂ ಹಾಕಬಹುದು. ಪ್ರತಿದಿನ ತ್ಯಾಜ್ಯ ಹಾಕಿದಾಗ ಒಂದು ಮುಷ್ಠಿ ಮಣ್ಣು ಹಾಕುತ್ತ ಹೋಗಬೇಕು. ವಾರಕ್ಕೊಮ್ಮೆ ಹುಳಿ ಬಂದ ಮೊಸರು ಹಾಕಬೇಕು. ಇದರಿಂದ ಗ್ಯಾಸ್ ಉತ್ಪತ್ತಿಯಾಗುತ್ತದೆ. ಇದು ಗೊಬ್ಬರ ತಯಾರಿಕೆಗೆ ಸಹಕಾರಿಯಾಗಿದೆ. ಬೆಲ್ಲ ಮತ್ತು ಸೆಗಣಿಯಿಂದ ಎರೆಹುಳುಗಳು ಉತ್ಪತ್ತಿಯಾಗುತ್ತವೆ.

    ಪೈಪ್ ತುಂಬುವ ಹಂತಕ್ಕೆ ಬಂದಾಗ ಪ್ಲಾಸ್ಟಿಕ್​ನಿಂದ ಕಟ್ಟಿ ಬಿಡಬೇಕು. ಪಕ್ಕದಲ್ಲಿಯೇ ಇನ್ನೊಂದು ಪೈಪ್ ಅಳವಡಿಸಿ ಅದನ್ನು ಬಳಸಬಹುದು. ತ್ಯಾಜ್ಯವು ಕರಗುತ್ತ ಕೆಳಗೆ ಶೇಖರಣೆಯಾಗುತ್ತ ಹೋಗುತ್ತದೆ. 3 ತಿಂಗಳವರೆಗೆ ಪೈಪ್​ನ ಬಾಯಿಯನ್ನು ಮುಚ್ಚಿ ಇಟ್ಟಿರಬೇಕು. ವಾರಕ್ಕೊಮ್ಮೆ ಸ್ವಲ್ಪ ನೀರನ್ನು ಸಿಂಪಡಿಸಬೇಕು. ಇದರಿಂದ ತ್ಯಾಜ್ಯವು ಕೊಳೆತು ಚೆನ್ನಾಗಿ ಗೊಬ್ಬರವಾಗುತ್ತದೆ. 3 ತಿಂಗಳ ನಂತರ ಹುಗಿದ ಪೈಪ್ ಅನ್ನು ಎತ್ತಿ ತೆಗೆದಾಗ ತೇವಾಂಶವೆಲ್ಲ ಬತ್ತಿ ಹೋಗಿ ಹುಡಿ- ಹುಡಿಯಾದ ಪೌಷ್ಟಿಕ ಮಿಶ್ರಣ ಗೊಬ್ಬರ ದೊರೆಯ್ತುದೆ.

    ಪೈಪ್ ಕಾಂಪೋಸ್ಟ್ ಉತ್ತಮವಾದ ಯೋಜನೆ. ಸಮಾಜದಲ್ಲಿ ಕಸ ವಿಂಗಡಣೆ ಮಾಡುವ ವಿಭಿನ್ನ ಶೈಲಿಯ ವ್ಯವಸ್ಥೆ. ನಮ್ಮ ಮನೆ ಕಸ ನಮ್ಮ ಮನೆಯಿಂದ ಹೊರಗೆ ಹೋಗದೆ ನಮ್ಮ ಸುತ್ತಮತ್ತಲಿನ ಪರಿಸರಕ್ಕೆ ರಸಗೊಬ್ಬರವಾಗಲಿ.

    | ಜಗದೀಶ ಕಾನಡೆ , ಪೈಪ್ ಕಾಂಪೋಸ್ಟ್ ತಯಾರಿಕೆಯಲ್ಲಿ ಯಶ ಗಳಿಸಿದವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts