More

    ಹುಕ್ಕೇರಿ ತಾಲೂಕಿನ ಐವರಿಗೆ ಹೋಂ ಕ್ವಾರಂಟೈನ್

    ಹುಕ್ಕೇರಿ: ತಾಲೂಕಿನ ಐವರು ಮುಸ್ಲಿಮರು ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿನ ತಬ್ಲೀಗ್ ಜಮಾತ್ ಕೇಂದ್ರ ಕಚೇರಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಗೆ ಹೋಗಿದ್ದರು ಎಂಬ ಮಾಹಿತಿ ಬುಧವಾರ ಬಯಲಿಗೆ ಬರುತ್ತಿದ್ದಂತೆ ಪಟ್ಟಣದ ಜನರಲ್ಲಿ ಆತಂಕ ಮನೆ ಮಾಡಿದೆ.
    ತಾಲೂಕಾಡಳಿತ ಇವರನ್ನು ಪತ್ತೆ ಹಚ್ಚಿ ಪರೀಕ್ಷಿಸುವುದರ ಜತೆಗೆ ಗೃಹ ಬಂಧನದಲ್ಲಿರಿಸಿ ನಿಗಾ ವಹಿಸಿದೆ. ಈಗಾಗಲೇ ಈ ಸಭೆಯಲ್ಲಿ ಪಾಲ್ಗೊಂಡಿದ್ದ ಹಲವಾರು ಜನರಿಗೆ ಮಾರಕ ರೋಗ ಕರೊನಾ ಸೋಂಕು ತಗುಲಿದೆ. ಹಲವರು ರೋಗಕ್ಕೆ ಬಲಿಯಾಗಿದ್ದಾರೆ. ಹುಕ್ಕೇರಿ ತಾಲೂಕಿನ ಐವರು ಈ ಸಭೆಗೆ ತೆರಳಿರುವ ಸುದ್ದಿ ಈಗ ತೀವ್ರ ಕಳವಳ ಸೃಷ್ಟಿಸಿದೆ.

    ಸೂಕ್ತ ಪರೀಕ್ಷೆಗೆ ರಮೇಶ ಕತ್ತಿ ಸೂಚನೆ: ಈ ಐವರನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದೆ. ಸರ್ಕಾರಿ ವೈದ್ಯರು ಇವರನ್ನು ಪರೀಕ್ಷಿಸಿ ನಿಮಗೆ ಯಾವುದೇ ರೋಗವಿಲ್ಲ. ಮನೆಗೆ ಹೋಗಿ ಎಂದು ಹೇಳಿದ್ದಾರೆ. ಈ ವಿಷಯ ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ಗೊತ್ತಾಗುತ್ತಿದ್ದಂತೆ ಆಕ್ರೋಶಗೊಂಡ ಅವರು, ಜಿಲ್ಲಾ ವೈದ್ಯಾಧಿಕಾರಿಯನ್ನು ಸಂಪರ್ಕಿಸಿ ಹುಕ್ಕೇರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಕುರಿತು ತಿಳಿಸಿದ್ದಾರೆ. ತಕ್ಷಣ ಆ ಐವರನ್ನು ಹೋಂ ಕ್ವಾರಂಟೈನ್ ಮಾಡಿ ಪರೀಕ್ಷಿಸಿ ಚಿಕಿತ್ಸೆ ಕೈಗೊಳ್ಳುವಂತೆ ಸೂಚಿಸಿದ್ದಾರೆ.

    ಟಾಸ್ಕ್‌ಫೋರ್ಸ್ ಸಭೆ: ದೆಹಲಿಯ ಧಾರ್ಮಿಕ ಸಭೆಯಲ್ಲಿ ತಾಲೂಕಿನ ಐವರು ಪಾಲ್ಗೊಂಡಿದ್ದರೆಂಬ ಮಾಹಿತಿ ತಿಳಿದ ಬಳಿಕ, ಉಪ ವಿಭಾಗಾಧಿಕಾರಿ ಅಶೋಕ ತೇಲಿ ಹುಕ್ಕೇರಿಗೆ ಆಗಮಿಸಿ ಸಭೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಐವರಲ್ಲಿ ಇಬ್ಬರು ದೆಹಲಿಯ ತಬ್ಲೀಗ್ ಜಮಾತ್ ಕೇಂದ್ರ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದರು. ಇನ್ನುಳಿದ ಮೂವರು ದೆಹಲಿ, ಅಜ್ಮೀರ್ ಮತ್ತು ಡೆಹರಾಡೂನ್‌ಗಳಿಗೆ ಪ್ರವಾಸ ಹೋಗಿ ಬರುವಾಗ ತಬ್ಲೀಗ್ ಸಭೆಗೆ ಹೋಗಿದ್ದವರ ಜತೆಗೆ ಆಗಮಿಸಿದ್ದಾರೆ. ಅದಕ್ಕಾಗಿ ಈ ಐವರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದರು. ಪರೀಕ್ಷಾ ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

    ಸ್ಪಂದಿಸದ ಆರೋಪ: ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಸರಿಯಾದ ಪರೀಕ್ಷೆ ಮತ್ತು ಚಿಕಿತ್ಸೆ ನಡೆಯುತ್ತಿಲ್ಲ. ಇದರತ್ತ ಗಮನಿಸಬೇಕಾದ ಮುಖ್ಯ ವೈದ್ಯಾಧಿಕಾರಿ ನರಸಣ್ಣವರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರು ಆರೋಪಿಸಿದರು.
    ಚಿಕಿತ್ಸೆ ನೀಡಲು ಒಪ್ಪಿದ ಖಾಸಗಿ ವೈದ್ಯರು: ಉಪ ವಿಭಾಗಾಧಿಕಾರಿ ಅಶೋಕ ತೇಲಿ ಅವರು ಖಾಸಗಿ ವೈದ್ಯರ ಸಭೆ ನಡೆಸಿ ಮಾತನಾಡಿ, ಇಲ್ಲಿಯವರೆಗೆ ತಮ್ಮ ಕ್ಲಿನಿಕ್ ತೆರೆದು ಚಿಕಿತ್ಸೆ ಕೈಗೊಳ್ಳುತ್ತಿದ್ದ ತಾವು ಇದೀಗ ಮಾರಕ ರೋಗ ಕರೊನಾ ವೈರಸ್ ತಡೆಗಟ್ಟಲು ಸಹಕರಿಸುತ್ತಿಲ್ಲವೆಂದು ಆಕ್ಷೇಪಿಸಿದರು.

    ಖಾಸಗಿ ವೈದ್ಯರಾದ ಖಾಜಾ ಮಕಾನದಾರ, ಉದಯ ಕುಲಕರ್ಣಿ ಮತ್ತು ಐ.ಎಂ.ಎ. ಅಧ್ಯಕ್ಷ ಬಿ.ಎಸ್. ಪಾಟೀಲ ಮಾತನಾಡಿ, ಕ್ಲಿನಿಕ್‌ಗಳು ಚಿಕ್ಕದಾಗಿರುವುದರಿಂದ ರೋಗಿಗಳು ಬಂದಾಗ ಸಾಮಾಜಿಕ ಅಂತರ ಪಾಲಿಸಲು ಸಾಧ್ಯವಾಗುವುದಿಲ್ಲ ಮತ್ತು ಆಯುಷ್ ವೈದ್ಯರ ಸಂಘಟನೆ ನಿರ್ದೇಶನದಂತೆ ಕ್ಲಿನಿಕ್ ಬಂದ್ ಮಾಡಿದ್ದೆವು.

    ತಾವು ಎಲ್ಲ ಸೌಲಭ್ಯ ನೀಡುವುದರ ಜತೆಗೆ ಸ್ಥಳ ನಿಗದಿ ಮಾಡಿದರೆ ದಿನದ 24 ತಾಸು ಸೇವೆ ನೀಡುವುದಾಗಿ ತಿಳಿಸಿದರು. ತಹಸೀಲ್ದಾರ ಅಶೋಕ ಗುರಾಣಿ, ತಾಲೂಕಾ ವೈದ್ಯಾಧಿಕಾರಿ ಉದಯ ಕುಡಚಿ, ತಾ.ಪಂ ಇ.ಒ ಮಹಾದೇವ ಬಿರಾದಾರಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಪಿ.ಎಸ್.ಐ ಶಿವಾನಂದ ಗುಡಗನಟ್ಟಿ, ಸಮಾಜ ಕಲ್ಯಾಣಾಧಿಕಾರಿ ಉಮೇಶ ಸಿದ್ನಾಳ, ಖಾಸಗಿ ವೈದ್ಯರಾದ ಅಭಿಷೇಕ ವಾಗೋಜಿ, ಶಿವಾಜಿ ಗೋಟೂರೆ, ವೈ.ವಿ.ದೇಸಾಯಿ, ಎಸ್.ಬಿ.ಜಾಧವ, ಮುತ್ತುರಾಜ ಹೂಗಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts