More

    ಚುನಾವಣೆ ಬಳಿಕ ಮೂರನೇ ರಾಜಕೀಯ ಶಕ್ತಿ

    ಹುಬ್ಬಳ್ಳಿ : ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಮೂರನೇ ರಾಜಕೀಯ ಶಕ್ತಿ ಅಸ್ತಿತ್ವಗೊಳ್ಳಲಿದೆ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

    ನಗರದಲ್ಲಿ ಮಂಗಳವಾರದಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎರಡು ತಿಂಗಳ ನಂತರ ಮಠಾಧೀಶರು, ದಲಿತರು, ಮುಸ್ಲಿಂರನ್ನೊಳಗೊಂಡ ಮೂರನೇ ಶಕ್ತಿ ಹುಟ್ಟುಹಾಕುತ್ತೇವೆ. ಹೊಸ ಪ್ರಾದೇಶಿಕ ಪಕ್ಷ ರಚನೆಯಾಗುತ್ತದೆ. ಮುಂದೆ ಕರ್ನಾಟಕದಲ್ಲಿ ಮೂರನೇ ಶಕ್ತಿ ಅಧಿಕಾರಕ್ಕೆ ಬರುತ್ತದೆ. ಒಬ್ಬ ಬ್ರಹ್ಮಚಾರಿಗೆ ಶಕ್ತಿ ಕೊಡುತ್ತೇವೆ ಎಂದರು.

    ಈಗಾಗಲೇ ಈ ಬಗ್ಗೆ ಶಿರಹಟ್ಟಿಯ ಫಕೀರ್ ದಿಂಗಾಲೇಶ್ವರ ಶ್ರೀಗಳೊಂದಿಗೆ ಸುದೀರ್ಘವಾಗಿ ಚಚಿರ್ಸಿದ್ದೇನೆ. ಸದ್ಯ ವಿಧಾನಸೌಧ ನಿಧಾನಸೌಧ ಆಗಿದೆ. ವಿಧಾನಸೌಧದಲ್ಲಿ ಬಸವತತ್ವದ ಆಡಳಿತ ಬಂದಾಗ ಮಾತ್ರ ರಾಜ್ಯದಲ್ಲಿ ಉತ್ತಮ ಆಡಳಿತ ಸಾಧ್ಯ ಎಂದರು.

    ಕೇಶವಕೃಪದಲ್ಲಿ ಗೌರವ ಸಿಗುವುದಿಲ್ಲವೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಅವರಿಗೆ ಮೊದಲೇ ಹೇಳಿದ್ದೆ. ಬಸವಕೃಪದಲ್ಲಿ ಇರುವುದೇ ಒಳ್ಳೆಯದು ಎಂಬ ಕಿವಿಮಾತು ಹೇಳಿದ್ದೆ ಎಂದು ಹೇಳಿದರು.

    ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ಪ್ರಧಾನಿ ದೇಶದ ಜನರನ್ನೆಲ್ಲ ಒಂದಾಗಿ ನೋಡಬೇಕು. ಆದರೆ, ಈಗಿನ ಪ್ರಧಾನಿ ಹಿಂದು-ಮುಸ್ಲಿಂ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.

    ಕರ್ನಾಟಕದಲ್ಲಿ ಕಾಂಗ್ರೆಸ್ ತಪ್ಪಿನಿಂದ ಬಿಜೆಪಿ ಬೆಳೆಯುತ್ತಿದೆ. ಬಸವತತ್ವದ ಆಧಾರದ ಮೇಲೆ ರಾಜಕೀಯ ಪಕ್ಷಗಳನ್ನು ಸಂಘಟನೆ ಮಾಡಬೇಕಿದೆ ಎಂದರು.

    ಈಗಾಗಲೇ ಎಲ್ಲೆಡೆ ಮೋದಿ ವ್ಯಾಮೋಹ ಕಡಿಮೆ ಆಗಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಮತದಾನ ಕಡಿಮೆ ಆಗಿದೆ. ಇದನ್ನು ನೋಡಿ ಆದರೂ ನರೇಂದ್ರ ಮೋದಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಸದ್ಯ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸರಿ ಇಲ್ಲ. ಆದರೆ, ಮೋದಿ ಸೋಲಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರುವ ಅನಿವಾರ್ಯತೆ ಇದೆ ಎಂದು ಹೇಳಿದರು.

    ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣವನ್ನು ರಾಜಕೀಯಕ್ಕೆ ಬಳಕೆ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ, ಪಾಪ ಆ ಹೆಣ್ಣು ಮಗು ಸತ್ತಿದೆ. ಆದರೆ ಆ ಮಗು ಫೋಟೋ ಹಿಡಿದು, ಸತ್ತವಳ ಹೆಸರಿನ ಮೇಲೆ ಮತ ಕೇಳುವುದು ಸರಿಯಲ್ಲ ಎಂದರು.

    ನೇಹಾ ಕೊಲೆ ಮಾಡಿದ ಆರೋಪಿ ಫಯಾಜ್​ನಿಗೆ ಅದೇ ದಿನ ಕಠಿಣ ಶಿಕ್ಷೆ ನೀಡಬೇಕಿತ್ತು. ಸಂಸದ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ಬಿಜೆಪಿ ಮುಖಂಡರು ಏಕೆ ಮಾತನಾಡುತ್ತಿಲ್ಲ ? ಇದೇ ನಾ, ಅಚ್ಛೆ ದಿನ್ ? ಎಂದು ಪ್ರಶ್ನಿಸಿದರು.

    ಪ್ರಜ್ವಲ್ ರೇವಣ್ಣನನ್ನು ಪಕ್ಷದಿಂದ ಹೊರಹಾಕಿದ್ದಾಗಿ ಜೆಡಿಎಸ್ ಮುಖಂಡರು ಹೇಳುತ್ತಿದ್ದಾರೆ. ಆದರೆ, ದೌರ್ಜನ್ಯಕ್ಕೆ ಈಡಾಗಿರುವ ಮಹಿಳೆಯರಿಗೆ ಪರಿಹಾರ ಕೊಡುವವರು ಯಾರು ? ಎಂದು ಪ್ರಶ್ನೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts