More

    ಹೈಕಮಾಂಡ್ ಸೂಚಿಸಿದರೆ ಸ್ಪರ್ಧೆ

    ಬೆಳಗಾವಿ: ಪಕ್ಷ ಆದೇಶ ಮಾಡಿದರೆ ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಸ್ಪರ್ಧಿಸುತ್ತೇನೆ. ಪಕ್ಷದ ಯಾರಿಗೇ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

    ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಉಪ ಚುನಾವಣೆ ಎದುರಿಸಲು ಕಾಂಗ್ರೆಸ್ ತಯಾರಿ ಮಾಡಿಕೊಂಡಿದೆ. ಪಕ್ಷ ಸಂಘಟನೆಯ ದೃಷ್ಟಿಯಿಂದ ನನ್ನ ಹೆಸರನ್ನು ಉಪ ಚುನಾವಣೆಗೆ ಈ ಮೊದಲೇ ಹೈಕಮಾಂಡ್‌ಗೆ ಶಿಫಾರಸು ಮಾಡಲಾಗಿದೆ. ಜತೆಗೆ ಬೇರೆ ಅಭ್ಯರ್ಥಿಗಳ ಹೆಸರನ್ನೂ ಕಳುಹಿಸಲಾಗಿದೆ. ಆದರೆ, ಅಂತಿಮವಾಗಿ ಅಭ್ಯರ್ಥಿ ಯಾರೆಂದು ಹೈಕಮಾಂಡ್ ಅಂತಿಮ ಮಾಡಿಲ್ಲ. ಒಂದುವೇಳೆ ನನಗೇ ಟಿಕೆಟ್ ನೀಡಿದ್ದಲ್ಲಿ ಯಮಕನಮರಡಿ ಕ್ಷೇತ್ರದ ಜನತೆ ಜತೆ ಸಭೆ ಮಾಡಿ, ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು. ಮುಂಬೈ-ಕರ್ನಾಟಕ ಭಾಗದಲ್ಲಿ ಪಕ್ಷದ ಜವಾಬ್ದಾರಿ ನನ್ನ ಮೇಲಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಹೈಕಮಾಂಡ್ ದೆಹಲಿಗೆ ಬರುವಂತೆ ಸೂಚಿಸಿದ್ದು, ಮಂಗಳವಾರ ತೆರಳುತ್ತಿದ್ದೇನೆ. ಕೆಲವರು ರಾಜ್ಯದಿಂದ ಕೇಂದ್ರಕ್ಕೆ ಹೋಗಿರುವ ಉದಾಹರಣೆ ಇದ್ದು, ಹೀಗಾಗಿ ನನ್ನ ಹೆಸರು ಪ್ರಸ್ತಾಪ ಆಗಿರಬಹುದು ಎಂದರು.

    ಸ್ಥಳೀಯ ನಾಯಕರಿಂದಲೇ ಪ್ರಚಾರ: ಪಕ್ಷದ ಆಧಾರದ ಮೇಲೆ ಚುನಾವಣೆ ನಡೆಯುತ್ತದೆಯೇ ಹೊರತು ಜಾತಿ ಆಧಾರದ ಮೇಲೆ ಅಲ್ಲ. ಮಸ್ಕಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ಖಚಿತ. ಬಸವಕಲ್ಯಾಣ ಕ್ಷೇತ್ರದಲ್ಲಿ ಅಭ್ಯರ್ಥಿ ಪರ ಪ್ರಚಾರಕ್ಕೆ ಕೇಂದ್ರದಿಂದ ಯಾರೂ ಬರುವುದಿಲ್ಲ.
    ರಾಜ್ಯಮಟ್ಟದ ನಾಯಕರೇ ಪ್ರಚಾರ ಮಾಡಲಿದ್ದಾರೆ. ಮಾ. 25ರ ಒಳಗೆ ಟಿಕೆಟ್ ಘೋಷಣೆ ಆಗಲಿದೆ ಎಂದು ಸತೀಶ ತಿಳಿಸಿದರು.

    ಪ್ಲಸ್, ಮೈನಸ್ ಏನೂ ಆಗದು: ಕೇಂದ್ರದ ಬೆಲೆ ಏರಿಕೆ ನೀತಿ, ಕೃಷಿ ಕಾಯ್ದೆ ಹಾಗೂ ಖಾಸಗೀಕರಣದಿಂದ ಜನರಿಗೆ ತೊಂದರೆ ಆಗುತ್ತಿದೆ. ಈ ವಿಷಯವನ್ನಿಟ್ಟುಕೊಂಡು ಉಪ ಚುನಾವಣೆಯಲ್ಲಿ ಜನರ ಬಳಿ ಹೋಗುತ್ತೇವೆ. ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣ
    ಕಾಂಗ್ರೆಸ್‌ಗೆ ಪ್ಲಸ್, ಮೈನಸ್ ಏನೂ ಆಗುವುದಿಲ್ಲ. ಈ ಪ್ರಕರಣವನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅದಕ್ಕೆ ಸಮಯ ಬೇಕಾಗುತ್ತದೆ.

    ಮೊದಲು ‘ಸಿಡಿ ಲೇಡಿ’ ಸಿಗಬೇಕು. ಅವರ ಹಿಂದೆ ಇರುವವರು ಯಾರೆಂಬ ವಿಚಾರ ಹೊರ ಬರಬೇಕು. ಇಂದಲ್ಲ ನಾಳೆ ಅವರು ಪೊಲೀಸರಿಗೆ ಸಿಗುತ್ತಾರೆ. ಅವರು ತಪ್ಪು ಮಾಡಿಲ್ಲ ಎಂದಾದರೆ ಯಾಕೆ ನಾಪತ್ತೆಯಾಗಿದ್ದಾರೆ? ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಸಹೋದರ ರಮೇಶನನ್ನು ಭೇಟಿ ಆಗಿಲ್ಲ. ಅವಕಾಶ ಸಿಕ್ಕರೆ ಭೇಟಿ ಆಗುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಸತೀಶ ಜಾರಕಿಹೊಳಿ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts