More

    ನೀರು ಬಿಡಿ ಇಲ್ಲ ಪ್ರತಿಭಟನೆ ಎದುರಿಸಿ

    ಹಿರಿಯೂರು; ವಿವಿ ಸಾಗರ ಜಲಾಶಯ ನೀರಿನ ಮಟ್ಟ 100 ಅಡಿ ದಾಟಿದೆ. ಆದರೆ, ಅಚ್ಚುಕಟ್ಟು ಪ್ರದೇಶಕ್ಕೆ ನೀರಿಲ್ಲ.

    ತಾಲೂಕಿನಲ್ಲಿ ಅಡಕೆ, ತೆಂಗು, ದಾಳಿಂಬೆ ಇತರೆ ತೋಟಗಾರಿಕೆ ಬೆಳೆಗಳು ಒಣಗಿದ್ದು, ಸರ್ಕಾರದಿಂದ ಈವರೆಗೂ ಪರಿಹಾರ ಸಿಕ್ಕಿಲ್ಲ. ಹಲವು ಬಾರಿ ಬೇಡಿಕೆ ಮುಂದಿಟ್ಟರು ಆಳುವ ವರ್ಗ ಸ್ಪಂದಿಸಿಲ್ಲ.

    ಈಗಲಾದರೂ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡಿ, ಬೆಳೆನಷ್ಟಕ್ಕೆ ಪರಿಹಾರ ಕೊಡಿ, ಇಲ್ಲದಿದ್ದರೆ ಅನ್ನದಾತರ ಆಕ್ರೋಶ ಎದುರಿಸಲು ಸಜ್ಜಾಗಿ ಎಂದು ತಾಲೂಕು ರೈತ ಸಂಘ ಜಿಲ್ಲಾಡಳಿತ, ತಾಲೂಕಾಡಳಿತ, ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

    ತಾಲೂಕು ಕಚೇರಿ ಬಳಿ ಫೆ.25ಕ್ಕೆ ಅಹೋರಾತ್ರಿ ಧರಣಿ ಕೈಗೊಳ್ಳಲು ರೈತರು ಈಗಾಗಲೇ ಸಜ್ಜಾಗಿದ್ದಾರೆ. ಜತೆಗೆ ಪ್ರತಿಭಟನಾ ಮೆರವಣಿಗೆ, ತಾಲೂಕು ಕಚೇರಿ, ಜನಪ್ರತಿನಿಧಿಗಳಿಗೆ ಮುತ್ತಿಗೆ.. ಹೀಗೆ ವಿವಿಧ ರೀತಿ ಹೋರಾಟದ ರೂಪುರೇಷೆ ಸಿದ್ಧಪಡಿಡಲಾಗಿದೆ.

    ಬರ ಪೀಡಿತ ಪಟ್ಟಿಗೆ ಸೇರಿಸಿ: ಜಿಲ್ಲಾಡಳಿತದ ಅವೈಜ್ಞಾನಿಕ ಬೆಳೆ ಸಮೀಕ್ಷೆ ವರದಿಯಿಂದ ಬರ ಪೀಡಿತ ಪಟ್ಟಿಯಿಂದ ತಾಲೂಕನ್ನು ಕೈಬಿಡಲಾಗಿದೆ. ಈ ಬಗ್ಗೆ ಕ್ಷೇತ್ರದ ಶಾಸಕರು ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿ ತಾಲೂಕನ್ನು ಬರ ಪಟ್ಟಿಗೆ ಸೇರ್ಪಡೆ ಮಾಡಬೇಕು.

    ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಿ: ವೇದಾವತಿ ನದಿ ಪಾತ್ರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಇದರಿಂದಾಗಿ ಅಂತರ್ಜಲ ಅಪಾಯ ಮಟ್ಟ ತಲುಪಿದ್ದು, ಕಳೆದ 3-4 ವರ್ಷದಲ್ಲಿ ತಾಲೂಕಿನಲ್ಲಿ ಒರೋಬ್ಬರಿ 15-20 ಸಾವಿರ ಕೊಳವೆಬಾವಿ ಕೊರೆಯಲಾಗಿದೆ.

    ರೈತರ ಬೇಡಿಕೆಗಳು: ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಸರಬರಾಜು, ಎಡ-ಬಲ ದಂಡೆ ನಾಲೆಗಳ ಅಭಿವೃದ್ಧಿ, ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ವಿಸ್ತರಣೆ ಮತ್ತು ದುರಸ್ತಿ, ಕಡಲೆ ಖರೀದಿ ಕೇಂದ್ರ ಆರಂಭ, ನನೆಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಕಾಮಗಾರಿ ತ್ವರಿತ ಪೂರ್ಣಗೊಳಿಸಬೇಕು.

    ಜಿಲ್ಲಾ ರೈತ ಸಂಘ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಹೇಳಿಕೆ: ರೈತರ ಹೆಸರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ರಾಜ್ಯ ಸರ್ಕಾರ, ಭದ್ರಾ ಮೇಲ್ದಂಡೆ ಯೋಜನೆ ತ್ವರಿತಕ್ಕೆ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಹಿರಿಯೂರನ್ನು ಬರ ಪೀಡಿತ ತಾಲೂಕನ್ನಾಗಿ ಘೋಷಿಸಬೇಕು.

    ರೈತ ಸಂಘದ ತಾಲೂಕಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಹೇಳಿಕೆ: ವಿವಿ ಸಾಗರ ಜಲಾಶಯದಿಂದ ನೀರು ಹರಿಸುವ ಬಗ್ಗೆ ಜಿಲ್ಲಾಡಳಿತದ ಜತೆ ಚರ್ಚಿಸಲಾಗುವುದು ಎಂದು ತಹಸೀಲ್ದಾರ್ ಭರವಸೆ ನೀಡಿದ್ದಾರೆ. ಫೆ.25ರೊಳಗೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts