More

    ಪರಂಪರೆ, ಸಂಸ್ಕೃತಿ ಹಳ್ಳಿಯ ಕೃಷಿಕರಲ್ಲಿ ಜೀವಂತ

    ಮೈಸೂರು : ನಮ್ಮ ದೇಶದ ಪರಂಪರೆ, ಸಂಸ್ಕೃತಿ ಹಳ್ಳಿಗಳಲ್ಲಿರುವ ಕೃಷಿಕರಲ್ಲಿ ಮಾತ್ರ ಉಳಿದಿದೆ ಎಂದು ಕಪ್ಪಡಿ ಶ್ರೀ ಕ್ಷೇತ್ರದ ಮಠಾಧಿಪತಿಗಳಾದ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ಅಭಿಪ್ರಾಯಪಟ್ಟರು.


    ಶ್ರೀ ಕ್ಷೇತ್ರ ಕಪ್ಪಡಿ ದೇವಸ್ಥಾನ ಟ್ರಸ್ಟ್ ಹಾಗೂ ಪ್ರಗತಿಪರ ಚಿಂತಕರ ಒಕ್ಕೂಟದಿಂದ ತಾಲೂಕಿನ ಕಪ್ಪಡಿ ಕ್ಷೇತ್ರದಲ್ಲಿ ಆಯೋಜಿಸಿರುವ ಕೃಷಿ ಮೇಳ ಹಾಗೂ ಕೃಷಿ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.


    ಸಾವಯವ ಮತ್ತು ಸುಸ್ಥಿರ ಕೃಷಿ ಪದ್ಧತಿ, ಜತೆಯಲ್ಲಿ ಹೈನುಗಾರಿಕೆಯಲ್ಲಿ ಅನೇಕರು ಇಂದು ಯಶಸ್ಸುಗಳಿಸಿದ್ದಾರೆ. ಅಂತವರ ಮಾರ್ಗದರ್ಶನ ಎಲ್ಲರಿಗೂ ಸಿಗಬೇಕು. ಇದೇ ಮೊದಲ ಬಾರಿಗೆ ಕೃಷಿ ಮೇಳ ಮತ್ತು ಕಾರ್ಯಾಗಾರ ಆಯೋಜಿಸಲಾಗಿದೆ. ಆ ಮೂಲಕ ರೈತರು ಮತ್ತು ಭಕ್ತರಿಗೆ ವ್ಯವಸಾಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ಕೃಷಿ ಮತ್ತು ಕೃಷಿಕರ ಬಗ್ಗೆ ಇರುವ ನಿರ್ಲಕ್ಷ್ಯ ಭಾವನೆಯನ್ನು ತೆಗೆದು ಹಾಕಬೇಕಿದೆ. ರೈತ ಸ್ವಾವಲಂಬನೆ ಸಾಧಿಸಿ ಉತ್ತಮ ಜೀವನ ರೂಪಿಸಿಕೊಳ್ಳಬೇಕಾಗಿದೆ. ಆದ್ದರಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.


    ವಿವಿಧ ಭಾಗದಿಂದ ಕೃಷಿ ವಿಜ್ಞಾನಿಗಳು, ವಿಚಾರ ವಾದಿಗಳು ಬಂದಿದ್ದು, ತಮ್ಮ ಜ್ಞಾನ ಮತ್ತು ವಿಚಾರಧಾರೆಯನ್ನು ಮಂಡಿಸಲಿದ್ದಾರೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೇ ಮುಂದೆಯೂ ಸಹ ಮಠದ ವತಿಯಿಂದ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಏರ್ಪಡಿಸಲಾಗುವುದು. ರಾಚಪ್ಪಾಜಿ ಮತ್ತು ಅಣ್ಣಮ್ಮಾಜಿ ಅವರು ನಾಡಿನ ಜನತೆಗೆ ಸುಖ, ಸಂತೋಷ, ಆರೋಗ್ಯ ಕರುಣಿಸುವ ಜತೆಗೆ ಉತ್ತಮ ಮಳೆಯಾಗಿ ನಾಡು ಸಂಮೃದ್ಧಿಯಾಗಲಿ ಎಂದರು.


    ಮೈಕ್ರೋಬಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ಸಾವಯವ ತಜ್ಞ ಡಾ.ಕೆ.ಆರ್.ಹುಲುನಾಚೇಗೌಡರಿಂದ ಸುಸ್ಥಿರ ಸಾವಯವ ಕೃಷಿ ಬಗ್ಗೆ ಉಪನ್ಯಾಸ, ದಡದಹಳ್ಳಿ ಇಂದ್ರಪ್ರಸ್ಥದ ಡಾ.ಎ.ಪಿ.ಚಂದ್ರಶೇಖರ್ ಅವರಿಂದ ಕೃಷಿ ಪದಾರ್ಥಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಬಗ್ಗೆ ಉಪನ್ಯಾಸ, ಇಲವಾಲದ ತೋಟಗಾರಿಕಾ ಮಹಾವಿದ್ಯಾಲಯ ಕೀಟ ತಜ್ಞ ಡಾ.ರಾಮೇಗೌಡ ಅವರಿಂದ ಕೀಟರೋಗಕ್ಕೆ ಕಷಾಯಗಳಿಂದ ನಿಯಂತ್ರಣ ಹಾಗೂ ಪ್ರಾತ್ಯಕ್ಷಿಕೆ ನೀಡಲಾಯಿತು.


    ಸುತ್ತೂರು ಕೆ.ವಿ.ಕೆ ಯ ಡಾ.ರಾಜಣ್ಣ ಅವರಿಂದ ಭೂಮಿ, ಮಣ್ಣು ಫಲವತ್ತತೆ ಹೆಚ್ಚಿಸುವುದು, ಮಿರ್ಲೆ ಇಂದ್ರಮ್ಮ ಅವರು ಸ್ವಸಹಾಯ ಗುಂಪಿನ ಯಶಸ್ಸಿನ ಹಾದಿ ಕುರಿತು ಅನುಭವ ಹಂಚಿಕೊಂಡರು. ಪಿರಿಯಾಪಟ್ಟಣದ ಹಿಟ್ಟನೆ ಹೆಬ್ಬಾಗಿಲಿನ ಕಾಳಪ್ಪ ಅವರು ದೇಸಿ ಬೀಜಗಳ ಮಹತ್ವ, ಹೆಗ್ಗವಾಡಿಪುರ ಶಿವಕುಮಾರಸ್ವಾಮಿ ತೋಟಗಾರಿಕೆ ಬೆಳೆಗಳ ಸಮಗ್ರ ಮಾಹಿತಿ ತಿಳಿಸಿದರು.


    ಗಮನ ಸೆಳೆದ ಎತ್ತಿನ ಗಾಣ:
    ಕೃಷಿ ಮೇಳದಲ್ಲಿ ದೇಶಿ ಸಿರಿ ಉತ್ಪನ್ನಗಳ ಸಂಸ್ಥೆಯ ನವೀನ್ ಅವರ ಎತ್ತಿನ ಗಾಣದಿಂದ ಆಡುಗೆ ಎಣ್ಣೆ ತೆಗೆಯುವ ಘಟಕದ ಪ್ರಾತ್ಯಕ್ಷಿಕೆ, ದೇಸಿ ಹಸುಗಳು ಹಾಗೂ ಎತ್ತುಗಳ ಪ್ರದರ್ಶನವನ್ನು ನೋಡುಗರು ಕಣ್ತುಂಬಿಕೊಂಡು ಸಂಭ್ರಮಿಸಿದರು. ಅಲ್ಲದೆ ಸ್ಥಳದಲ್ಲೇ ಗಾಣದಿಂದ ತೆಗೆದ ಎಣ್ಣೆಯನ್ನು ಖರೀದಿಸಿದರು.
    ಮೇಳದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಪಶು ಸಂಗೋಪನೆ ಇಲಾಖೆ, ಅರಣ್ಯ ಇಲಾಖೆಗಳ ವತಿಯಿಂದ ಮಳಿಗೆಗಳನ್ನು ತೆರೆದು ರೈತರಿಗೆ ಇಲಾಖೆಗಳ ವತಿಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ತಿಳಿಸಲಾಯಿತು. ದೇಸಿ ಬೀಜ ಸಂರಕ್ಷಕರು ಗೋ ಉತ್ಪನ್ನಗಳು, ಔಷಧೀಯ ಸಸ್ಯಗಳು, ಕೀಟ ಹಾಗೂ ರೋಗ ನಿಯಂತ್ರಣಗಳಿಗೆ ಕಷಾಯ ತಯಾರಿಕೆಯಂತಹ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
    ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜೆ.ಮಲ್ಲಿಕಾರ್ಜುನ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಮೂರ್ತಿ, ಹೆಬ್ಬಾಳು ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟೇಗೌಡ, ಪ್ರಗತಿಪರ ರೈತರಾದ ಗೋಪಾಗೌಡ, ಹೆಬ್ಬಾಳು ಸುಜಯ್, ನವೀನ್, ತಾಲೂಕು ರೈತ ಯುವ ವೇದಿಕೆ ಅಧ್ಯಕ್ಷ ರಾಮ್‌ಪ್ರಸಾದ್, ಮಠದ ಸಿಬ್ಬಂದಿಗಳಾದ ಕೆ.ಎಂ.ಲಿಂಗರಾಜು, ಭರತ್ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts