More

    ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು

    ಮಾಗಡಿ:ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಸುರಿದ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ವಿದ್ಯುತ್ ಕಂಬಗಳು ನೆಲಕಚ್ಚಿವೆ ಹಾಗೂ ಜಮೀನುಗಳಿಗೆ ನೀರು ನುಗ್ಗಿ ಹೂವು, ಹಣ್ಣು, ತರಕಾರಿ ಬೆಳೆಗಳಿಗೆ ಹಾನಿಯಾಗಿದೆ.

    ಪಟ್ಟಣದ ಹೊಸಪೇಟೆ ಪೆಟ್ರೋಲ್ ಬಂಕ್, ಕೆಂಪಸಾಗರ ಮಾವಿನ ತೋಟ, ಮಾಡಬಾಳ್ ಬಳಿಯ ಇಟ್ಟಿಗೆ ಕಾರ್ಖಾನೆ, ತಿರುಮಲೆ, ಹೊಸಪೇಟೆ, ಪಟ್ಟಣ, ಪರಂಗಿ ಚಿಕ್ಕನಪಾಳ್ಯದ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದರೆ, ವ್ಯಾಸರಾಯನಪಾಳ್ಯ ಪರಂಗಿ ಚಿಕ್ಕನಪಾಳ್ಯ ಗ್ರಾಮದ ಬಳಿ ಸುಮಾರು 15 ಎಕರೆಯಲ್ಲಿ ರೈತರು ಬೆಳೆದಿದ್ದ ಹೂವು, ಹಣ್ಣು, ತರಕಾರಿ ಬೆಳೆಗಳು ಜಲಾವೃತವಾಗಿವೆ. 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿಬಿದ್ದು, ವಿದ್ಯುತ್ ಇಲ್ಲದೆ ಜನ ಪರದಾಡುವಂತಾಯಿತು.

    ಪುರಸಭೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ನಡೆಸಿರುವ ಒಳಚರಂಡಿ ಕಾಮಗಾರಿಯಿಂದಾಗಿ ಮಳೆ ನೀರು ಮ್ಯಾನ್​ಹೋಲ್ ಮೂಲಕ ವ್ಯಾಸರಾಯನಪಾಳ್ಯ, ಪರಂಗಿ ಚಿಕ್ಕನಪಾಳ್ಯದ ಸುತ್ತಮುತ್ತಲಿನಲ್ಲಿ ಬೆಳೆದ ತರಕಾರಿ, ಬಾಳೆ, ವೀಳ್ಯದೆಲೆ, ತೆಂಗಿನ ತೋಟ, ಅಡಕೆ ತೋಟ, ಹೂ, ಹಣ್ಣು ಬೆಳೆದಿದ್ದ ಜಮೀನಿಗೆ ಹರಿದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅಲ್ಲದೆ ಬರ್ಗಾವತಿ ಕೆರೆಗೆ ಮಳೆ ನೀರಿನೊಂದಿಗೆ ಕಲುಷಿತ ನೀರು ಸೇರಿ ಗಬ್ಬುನಾರುತ್ತಿದೆ.

    ಪರಂಗಿ ಚಿಕ್ಕನಪಾಳ್ಯದ ಯಾಲಕ್ಕಪ್ಪ ಮಾತನಾಡಿ, 15 ವರ್ಷಗಳ ಹಿಂದೆ ಪುರಸಭೆ ವತಿಯಿಂದ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಆರಂಭವಾದಾಗಿನಿಂದಲೂ ಜನರಿಗೆ ನೆಮ್ಮದಿ ಇಲ್ಲವಾಗಿದೆ. ಶುದ್ಧ ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ಪಟ್ಟಣದ ಶೌಚಗೃಹಗಳ ನೀರು ಬರ್ಗಾವತಿ ಕೆರೆಗೆ ಹರಿಯುತ್ತಿದೆ. ಇತ್ತ ಕೊಳವೆಬಾವಿ ನೀರು ಕೂಡ ಕುಡಿಯಲು ಯೋಗ್ಯವಾಗಿಲ್ಲ. ಓಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿರುವುದೇ ಇದಕ್ಕೆಲ್ಲ ಕಾರಣ. ಇನ್ನು ಮಳೆ ಬಂದರೆ ರಾಜಕಾಲುವೆಯಲ್ಲಿ ಹರಿಯಬೇಕಾದ ನೀರು ಮನೆಗಳಿಗೆ ನುಗ್ಗುತ್ತಿದೆ. ಕೂಡಲೇ ಪುರಸಭೆ ಜನರ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಇಲ್ಲದಿದ್ದರೆ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.

    ಅಧಿಕಾರಿಗಳ ನಿರ್ಲಕ್ಷ್ಯ

    ಪಟ್ಟಣದ ತಗ್ಗುಪ್ರದೇಶದ ಮನೆಗಳಿಗೆ ಪ್ರತಿವರ್ಷ ಮಳೆಗಾಲದಲ್ಲಿ ನೀರು ನುಗ್ಗುತ್ತಿದೆ. ಕೆಲ ಪ್ರಭಾವಿಗಳು ರಾಜಕಾಲುವೆ ಮುಚ್ಚಿ ಮನೆ ನಿರ್ವಿುಸಿಕೊಂಡಿರುವುದು ಇದಕ್ಕೆಲ್ಲ ಕಾರಣವಾಗಿದೆ. ಶುಕ್ರವಾರ ರಾತ್ರಿಯೂ ಮಳೆಯಿಂದ ಕೆಲವೆಡೆ ನಾಗರಿಕರು ಸಂಕಷ್ಟ ಅನುಭವಿಸುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಸಮಸ್ಯೆ ಆಲಿಸಲು ಮುಂದಾಗದೆ ನಿರ್ಲಕ್ಷ್ಯ ತೋರಿದ್ದಾರೆ. ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಪುರಸಭೆ, ತಾಲೂಕು ಕಚೇರಿಗಳಲ್ಲಿ ಸಹಾಯವಾಣಿ ಇಲ್ಲದಿರುವುದು ದುರ್ದೈವವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts