

ಬೆಂಗಳೂರು: ಮಹಿಳೆಯರು ಸ್ತನ ಮತ್ತು ಸ್ತ್ರೀರೋಗ ಸಂಬಂಧಿತ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಎದುರಿಸುವ ಹಿಂಜರಿಕೆ ಹಾಗೂ ಮುಜುಗರವನ್ನು ಗಮನದಲ್ಲಿಟ್ಟುಕೊಂಡು, ಮಣಿಪಾಲ್ ಆಸ್ಪತ್ರೆ, ಕನಕಪುರ ರಸ್ತೆ , SOWMYA (Specialized Oncology for Women, Mindfully with You, Always!) ಎಂಬ ಮಹಿಳಾ-ಕೇಂದ್ರಿತ ಕ್ಯಾನ್ಸರ್ ಆರೈಕೆ ಸೇವೆಯನ್ನು ಪರಿಚಯಿಸಿದೆ.
“ಮಹಿಳೆಯರಿಗಾಗಿ, ಮಹಿಳೆಯರಿಂದಲೇ” ಎಂಬ ಪರಿಕಲ್ಪನೆಯಡಿ ರೂಪುಗೊಂಡಿರುವ SOWMYA, ಕ್ಯಾನ್ಸರ್ ತಪಾಸಣೆ, ರೋಗನಿರ್ಣಯ, ಚಿಕಿತ್ಸೆ ಮತ್ತು ಅನುಸರಣಾ ಆರೈಕೆಯ ಸಂದರ್ಭದಲ್ಲಿ ಮಹಿಳೆಯರಿಗೆ ಹೆಚ್ಚು ಗೌಪ್ಯತೆ, ಸೌಕರ್ಯ ಮತ್ತು ಆತ್ಮವಿಶ್ವಾಸದ ವಾತಾವರಣ ಒದಗಿಸುವ ಉದ್ದೇಶ ಹೊಂದಿದೆ.
ಸ್ತನ ಮತ್ತು ಸ್ತ್ರೀರೋಗ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದ ತಪಾಸಣೆ ಹಾಗೂ ಚಿಕಿತ್ಸೆಗಳು ಅತ್ಯಂತ ವೈಯಕ್ತಿಕವಾಗಿರುವುದರಿಂದ, ಅನೇಕ ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಮಾತನಾಡಲು ಹಿಂಜರಿಯುತ್ತಾರೆ. ಈ ಹಿಂಜರಿಕೆಯೇ ಕೆಲವೊಮ್ಮೆ ವೈದ್ಯರನ್ನು ಸಂಪರ್ಕಿಸುವಲ್ಲಿ ವಿಳಂಬಕ್ಕೆ ಕಾರಣವಾಗಬಹುದು. ಮಹಿಳೆಯರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಮತ್ತು ಚಿಕಿತ್ಸೆಯ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಲು ಅನುಕೂಲವಾಗುವ ವಾತಾವರಣವನ್ನು SOWMYA ಕಲ್ಪಿಸುತ್ತದೆ.
ಈ ಉಪಕ್ರಮವನ್ನು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಯ ಉಪ ನಿರ್ದೇಶಕಿ ಡಾ. ಮಮತಾ ಎಂ. ಎಸ್. ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಣಿಪಾಲ್ ಹಾಸ್ಪಿಟಲ್ಸ್ ಸಮೂಹದ ಚೀಫ್ ಆಪರೇಟಿಂಗ್ ಆಫೀಸರ್ ಕಾರ್ತಿಕ್ ರಾಜಗೋಪಾಲ್, ದಕ್ಷಿಣ ಮತ್ತು ಪೂರ್ವ ವಲಯದ ಚೀಫ್ ಆಪರೇಟಿಂಗ್ ಆಫೀಸರ್ ದೀಪಕ್ ವೇಣುಗೋಪಾಲನ್, ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ಮುರಳಿ ಶ್ರೀನಿವಾಸನ್ ವೈದ್ಯಕೀಯ ಸೇವೆಗಳ ಪ್ರಾದೇಶಿಕ ಮುಖ್ಯಸ್ಥೆ– ಡಾ. ಕ್ಷಿತಿಜಾ ಕುಲಕರ್ಣಿ ಹಾಗೂ ಕ್ಲಸ್ಟರ್ ಡೈರೆಕ್ಟರ್ ಮೋಹನ್ ಹರಿಹರನ್ ಸೇರಿದಂತೆ ಮಹಿಳಾ ಕ್ಯಾನ್ಸರ್ ಆರೈಕೆ ತಜ್ಞರು ಉಪಸ್ಥಿತರಿದ್ದರು.
SOWMYA ಮೂಲಕ ಮೊದಲ ಸಮಾಲೋಚನೆ ಮತ್ತು ತಪಾಸಣೆಯಿಂದಲೇ ಮಹಿಳೆಯರಿಗೆ ಆರಾಮದಾಯಕ ಮತ್ತು ವಿಶ್ವಾಸ ಮೂಡಿಸುವ ಅನುಭವ ನೀಡಲು ಒತ್ತು ನೀಡಲಾಗಿದೆ. ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳನ್ನು ಚರ್ಚಿಸುವುದರ ಜೊತೆಗೆ, ರೋಗನಿರ್ಣಯ ಮತ್ತು ಚಿಕಿತ್ಸಾ ಆಯ್ಕೆಗಳ ಕುರಿತು ಅಗತ್ಯ ಮಾಹಿತಿಯನ್ನು ಪಡೆಯಬಹುದು.
ಉಪಕ್ರಮದ ಭಾಗವಾಗಿ ಮಹಿಳೆಯರ ಕ್ಯಾನ್ಸರ್ ಸ್ಕ್ರೀನಿಂಗ್ ವೋಚರ್‌ಗಳು ಹಾಗೂ ‘Her Health Passport – My Breast Health Journey’ ಪರಿಚಯಿಸಲಾಗಿದೆ. ಈ ವೈಯಕ್ತಿಕ ಆರೋಗ್ಯ ಪಾಸ್‌ಪೋರ್ಟ್‌ನಲ್ಲಿ ಸ್ತನ ಆರೋಗ್ಯದ ಅಪಾಯದ ವಿವರ, ಸ್ಕ್ರೀನಿಂಗ್ ಇತಿಹಾಸ, ಚಿಕಿತ್ಸಾ ಯೋಜನೆ, ತಡೆಗಟ್ಟುವ ಆರೋಗ್ಯ ತಪಾಸಣೆ ಹಾಗೂ ಮುಂದಿನ ಆರೈಕೆಯ ಶಿಫಾರಸುಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಾಗಲಿದೆ.
ಉದ್ಘಾಟನೆ ಬಳಿಕ ಮಾತನಾಡಿದ ಡಾ.ಮಮತಾ “ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಸೂಕ್ಷ್ಮತೆ, ಗೌರವ ಮತ್ತು ಅವರ ಅಗತ್ಯಗಳ ಕುರಿತಾದ ಅರಿವಿನೊಂದಿಗೆ ನಿರ್ವಹಿಸುವುದು ಅತ್ಯಂತ ಮುಖ್ಯ. ‘ಸೌಮ್ಯ’ (SOWMYA) ದಂತಹ ಉಪಕ್ರಮಗಳು ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಹಾಗೂ ಸಕಾಲದಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಪಡೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತವೆ.
ವಿಶೇಷ ವೈದ್ಯಕೀಯ ಸೇವೆಗಳು, ಜಾಗೃತಿ ಮತ್ತು ಸಮಗ್ರ ಕ್ಯಾನ್ಸರ್ ಆರೈಕೆಯನ್ನು ಒಗ್ಗೂಡಿಸುವ ಮೂಲಕ, ಮಹಿಳೆಯರು ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಲು ಹಾಗೂ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆಗಾಗಿ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸುವಲ್ಲಿ ಈ ಉಪಕ್ರಮವು ಮಹತ್ವದ ಪಾತ್ರ ವಹಿಸುತ್ತದೆ,” ಎಂದರು.
ಮಹಿಳಾ-ಕೇಂದ್ರಿತ ಆರೈಕೆಯೊಂದಿಗೆ ವೈದ್ಯಕೀಯ ಪರಿಣತಿ ಮತ್ತು ಆಧುನಿಕ ತಂತ್ರಜ್ಞಾನಕ್ಕೂ SOWMYA ಒತ್ತು ನೀಡಿದೆ. ಕನಕಪುರ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಮೀಸಲಾದ ಸಿಂಗಲ್-ಫ್ಲೋರ್ ಆಂಕೊಲಾಜಿ ಹಬ್ ಮೂಲಕ ಹೊರರೋಗಿ ಸಮಾಲೋಚನೆ, ರೋಗನಿರ್ಣಯ ಮತ್ತು ಡೇ-ಕೇರ್ ಕಿಮೊಥೆರಪಿ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸಲಾಗುತ್ತದೆ.
ಇದರೊಂದಿಗೆ ರೋಬೋಟಿಕ್ ಸರ್ಜರಿ, ವಿಕಿರಣ ಚಿಕಿತ್ಸೆ, PET-CT ಮತ್ತು ಡಿಜಿಟಲ್ ಮ್ಯಾಮೊಗ್ರಫಿ ಸೇರಿದಂತೆ ಸುಧಾರಿತ ಚಿಕಿತ್ಸಾ ಸೌಲಭ್ಯಗಳು ಲಭ್ಯವಿವೆ.
ಮಣಿಪಾಲ್ ಆಸ್ಪತ್ರೆ, ಕನಕಪುರ ರಸ್ತೆಯ ಸ್ತನ ಮತ್ತು ಸ್ತ್ರೀರೋಗ ಆಂಕೊ-ಸರ್ಜರಿ ಹಾಗೂ ರೊಬೊಟಿಕ್ ಸರ್ಜರಿ ಸಲಹೆಗಾರ್ತಿ ಡಾ. ಮೋನಿಕಾ ಪನ್ಸಾರಿ ಮಾತನಾಡಿ, “ಕೆಲವೊಮ್ಮೆ ಕ್ಯಾನ್ಸರ್ ಆರೈಕೆಯ ಮೊದಲ ಅಡಚಣೆಯು ಚಿಕಿತ್ಸೆಯದಲ್ಲ; ಮಹಿಳೆ ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ಮಾತನಾಡಲು ಇರುವ ಹಿಂಜರಿಕೆಯೇ ಆಗಿರಬಹುದು. SOWMYA ಆ ಹಿಂಜರಿಕೆಯನ್ನು ದೂರ ಮಾಡುವ ಪ್ರಯತ್ನವಾಗಿದೆ.
ಮಹಿಳೆಯರು ಯಾವುದೇ ಮುಜುಗರದ ಭಾವನೆಯಿಲ್ಲದೆ ಪ್ರಶ್ನೆಗಳನ್ನು ಕೇಳಲು ಮತ್ತು ತಮ್ಮ ಕಾಳಜಿಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗಬೇಕು. ಮಹಿಳಾ ತಜ್ಞರ ತಂಡ ಹಾಗೂ ಸಮಗ್ರ ಆರೈಕೆ ವ್ಯವಸ್ಥೆಯ ಮೂಲಕ ಪ್ರತಿಯೊಬ್ಬ ಮಹಿಳೆಯೂ ತನ್ನನ್ನು ಗೌರವದಿಂದ ಕಾಣಲಾಗುತ್ತಿದೆ ಮತ್ತು ತನ್ನ ಮಾತನ್ನು ಕೇಳಲಾಗುತ್ತಿದೆ ಎಂಬ ಭಾವನೆ ಹೊಂದುವಂತೆ ಮಾಡುವುದು ನಮ್ಮ ಉದ್ದೇಶ,” ಎಂದರು.
SOWMYA ಮೂಲಕ ಮಹಿಳೆಯರ ಕ್ಯಾನ್ಸರ್ ಆರೈಕೆಯನ್ನು ಕೇವಲ ಚಿಕಿತ್ಸೆಗೆ ಸೀಮಿತಗೊಳಿಸದೆ, ಗೌಪ್ಯತೆ, ಸೌಕರ್ಯ, ವೈಯಕ್ತಿಕ ಗಮನ ಮತ್ತು ವೈದ್ಯಕೀಯ ಪರಿಣತಿಯನ್ನು ಒಳಗೊಂಡ ಸಮಗ್ರ ಆರೈಕೆ ವ್ಯವಸ್ಥೆ ರೂಪಿಸುವ ಗುರಿಯನ್ನು ಮಣಿಪಾಲ್ ಆಸ್ಪತ್ರೆ ಹೊಂದಿದೆ.