More

    ಶಾಂತಿನಾಥ ಭವನದಲ್ಲಿ ಆರೋಗ್ಯ ಶಿಬಿರ

    ಹುಬ್ಬಳ್ಳಿ : ಪರೋಪಕಾರ, ದಾನ ಧರ್ಮದಲ್ಲಿ ಸದಾ ಮುಂಚೂಣಿಯಲ್ಲಿರುವ ಜೈನ ಸಮಾಜವು ಅಹಿಂಸೆ ಮತ್ತು ಶಾಂತಿಯ ತತ್ವದಡಿ ಆರೋಗ್ಯಕರ ಸಮಾಜ ನಿರ್ವಿುಸಲು ಮನುಕುಲಕ್ಕೆ ಭದ್ರ ಬುನಾದಿ ಹಾಕಿದೆ ಎಂದು ನರರೋಗ ತಜ್ಞ, ಶ್ರೀ ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಹೇಳಿದರು.

    ಶ್ರೀ ಶಾಂತಿನಾಥ ತೀರ್ಥಂಕರ ದಿಗಂಬರ ಜೈನ ಬಸದಿ ಟ್ರಸ್ಟ್ ಕಮಿಟಿ, ದಿಗಂಬರ ಜೈನ ಸಮಾಜ, ಶಾಂತಿನಾಥ ಮಹಿಳಾ ಸಮಾಜ ಹಾಗೂ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರದ ಸಹಯೋಗದಲ್ಲಿ ಇಲ್ಲಿನ ಮಹಾವೀರ ಗಲ್ಲಿಯ ಶ್ರೀ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಜೀವನದಲ್ಲಿ ಸಾಧನೆ ಮಾಡಲು ಉತ್ತಮ ಆರೋಗ್ಯ ಅವಶ್ಯಕ. ಯುವಕರು ದುಶ್ಚಟಗಳಿಂದ ದೂರವಿದ್ದು ದೇಹವನ್ನು ರೋಗದ ನೆಲೆಯಾಗದಂತೆ ಎಚ್ಚರ ವಹಿಸಬೇಕು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೇ ಕಾಲಕಾಲಕ್ಕೆ ತಪಾಸಣೆ ಮಾಡಿಕೊಂಡು ಆರೋಗ್ಯದತ್ತ ಹೆಚ್ಚು ಗಮನಹರಿಸಬೇಕು. ಉತ್ತಮ ಆರೋಗ್ಯವೇ ಮನುಷ್ಯನ ನಿಜವಾದ ಸಂಪತ್ತು ಎಂದು ತಿಳಿಸಿದರು.

    ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಮಹಾವೀರ ಬೋಂಗಡಿ ಮಾತನಾಡಿ, ವ್ಯಕ್ತಿಯ ದೈಹಿಕ, ಸಾಮಾಜಿಕ ಹಾಗೂ ಮಾನಸಿಕ ಅಂಶಗಳು ಆತನ ಉತ್ತಮ ಆರೋಗ್ಯದ ಮೇಲೆ ಅವಲಂಬಿತವಾಗಿವೆ. ಭವಿಷ್ಯದಲ್ಲಿ ಬರಬಹುದಾದ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಇಂಥ ಶಿಬಿರಗಳು ಸಹಕಾರಿಯಾಗಿದ್ದು, ಪ್ರತಿಯೊಬ್ಬರು ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

    ಟ್ರಸ್ಟ್​ನ ಶ್ರೇನಿಕರಾಜ್ ರಾಜಮಾನೆ, ಶರತ್ಚಂದ್ರ ಕೆ., ರಾಜೇಂದ್ರ ಬೀಳಗಿ, ಶಾಂತಿನಾಥ ಮಹಿಳಾ ಸಮಾಜದ ನಯನಾ ಘೋಟಡಕೆ, ಚೇಳನಾ ರಾಜಮಾನೆ, ಸುನಂದಾ ಘೋಟಡಕೆ, ಸ್ವರೂಪ ಉಮಚಗಿ, ಸರೋಜಾ, ವೈದ್ಯರಾದ ಡಾ. ಆನಂದ ಕೊಪ್ಪದ, ಡಾ. ಅಖಿಲೇಶ ಜೋಶಿ, ಡಾ. ಅಭಯಾಂಬಿಕಾ, ಡಾ. ಜನಮೇಜಯ, ಆಸ್ಪತ್ರೆ ಸಿಬ್ಬಂದಿ, ಇನ್ನಿತರರು ಇದ್ದರು.

    ಶಿಬಿರದಲ್ಲಿ ನೂರಕ್ಕೂ ಅಧಿಕ ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts