More

    ಎಚ್‌ಡಿಕೆ-ಸಿಪಿವೈ ನಡುವೆ ವಾಗ್ಯುದ್ಧ : ಜೆಡಿಎಸ್, ಬಿಜೆಪಿ ನಾಯಕರ ನಡುವೆ ಕೆಸರೆರಚಾಟ ಬೆಂಬಲಿಗರಿಂದ ಎಚ್ಚರಿಕೆ

    ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಸಿ.ಪಿ. ಯೋಗೇಶ್ವರ್ ನಡುವಿನ ಕೆಸರೆರಚಾಟಕ್ಕೆ ಹೊಸ ತಿರುವು ಬಂದಿದೆ. ಇಬ್ಬರನ್ನೂ ಬೆಂಬಲಿಸಿ ಹೇಳಿಕೆ, ಪ್ರತಿ ಹೇಳಿಕೆಗಳು ಹೊರ ಬೀಳುತ್ತಿವೆ. ಇದು ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ.

    ‘ಚನ್ನಪಟ್ಟಣದಿಂದ ಕುಮಾರಸ್ವಾಮಿ ಹೊರ ಹಾಕುತ್ತೇನೆ’ ಎಂಬ ಹೇಳಿಕೆಗೆ ಜೆಡಿಎಸ್ ನಾಯಕರು ಯೋಗೇಶ್ವರ್ ವಿರುದ್ಧ ಮುಗಿಬಿದ್ದಿದ್ದಾರೆ. ಇನ್ನೊಂದೆಡೆ ಸಚಿವ ಯೋಗೇಶ್ವರ್ ಹೇಳಿಕೆಯನ್ನು ಡಿಸಿಎಂ ಅಶ್ವತ್ಥನಾರಾಯಣ ಸಮರ್ಥಿಸಿಕೊಂಡಿದ್ದಾರೆ.

    ಯಾರು ಏನೆಂದರು..?:
    ಮಾಜಿ ಸಚಿವ ಸಾ.ರಾ.ಮಹೇಶ್, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಬೆಂಬಲಿತರು ಹೇಳಹೆಸರಿಲ್ಲದೆ ಸೋತಿದ್ದಾರೆ. ದಿನೇ ದಿನೆ ಚನ್ನಪಟ್ಟಣ ದೂರವಾಗುತ್ತಿರುವುದನ್ನು ನೋಡಲಾಗದೇ ಕ್ಷೇತ್ರ ಕಳೆದುಹೋಗುತ್ತಿರುವ ನೋವು ಯೋಗೇಶ್ವರ್‌ಗೆ ಮತಿ ಭ್ರಮಣೆ ಉಂಟು ಮಾಡಿದೆ. ಅದಕ್ಕೆ ಉರಿ ಮಾತುಗಳನ್ನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಹುಟ್ಟೂರು ಚಕ್ಕೆರೆಯಲ್ಲೇ ಯೋಗೇಶ್ವರ್‌ಗೆ ನಾಲ್ಕಾಣೆ ಬೆಲೆ ಇಲ್ಲ. ಚಕ್ಕೆರೆ ಗ್ರಾಮ ಪಂಚಾಯಿತಿ ಜೆಡಿಎಸ್ ಬೆಂಬಲಿಸಿದೆ. ಹುಟ್ಟೂರನ್ನೇ ಗೆಲ್ಲದ ಯೋಗೇಶ್ವರ್ ಕ್ಷೇತ್ರ ಗೆಲ್ಲಲು ಸಾಧ್ಯವೆ? ಎಂದು ಟಾಂಗ್ ಕೊಟ್ಟಿದ್ದಾರಲ್ಲದೆ, ಯೋಗೇಶ್ವರ್ ‘ಸರ್ವಪಕ್ಷ ಸದಸ್ಯ’ ಎಂದು ವ್ಯಂಗ್ಯವಾಡಿದ್ದಾರೆ.
    ನಗಲಾರದವರೂ ನಗುತ್ತಾರೆ: ಇದಕ್ಕೆ ಪೂರಕವಾಗಿ ಮಾಜಿ ಎಂಎಲ್‌ಸಿ ಶರವಣ, ಯೋಗೇಶ್ವರ್ ಮನಸ್ಸು ಮಂಗನಂತೆ ಚಂಚಲ. ಯೋಗೇಶ್ವರ್ ರಾಜಕೀಯ ಪ್ರಬುದ್ಧನಲ್ಲ.

    ಹಾಗಾಗಿಯೇ ಊರಲ್ಲಿರುವ ಪಕ್ಷವನ್ನೆಲ್ಲ ಸುತ್ತಿ ಬಂದಿದ್ದಾನೆ. ಈಗ ಬಿಜೆಪಿ ಸಿದ್ಧಾಂತದ ಮಾತನಾಡುತ್ತಿದ್ದಾನೆ. ಆತನ ಬಾಯಲ್ಲಿ ಸಿದ್ಧಾಂತ ಕೇಳಿ ನಗಲಾರದವರೂ ನಕ್ಕರೆ ಆಶ್ಚರ್ಯವಿಲ್ಲ ಎಂದು ಲೇವಡಿ ಮಾಡಿದ್ದಾರೆ. ಸುಳ್ಳು, ಬೆದರಿಕೆ, ಸೀಡಿ, ೆಟೋಗಳಿಂದ ಮಂತ್ರಿಯಾದ ಏಕೈಕ ಉದಾಹರಣೆ ಯೋಗೇಶ್ವರ್ ಎಂದು ಟೀಕಿಸಿದ್ದಾರೆ.

    ಬಾಯಿ ಚಪಲಕ್ಕೆ ಮಾತನಾಡಬೇಡಿ: ಜೆಡಿಎಸ್‌ನ ಮತ್ತೊಬ್ಬ ಎಂಎಲ್‌ಸಿ ಬೋಜೇಗೌಡ, ಯೋಗೇಶ್ವರ್ ಮರ್ಕಟ ಮನಸ್ಥಿತಿಯ ರಾಜಕೀಯ ಜೋಕರ್ ಎಂದು ಕಟು ವಿಡಂಬನೆ ಮಾಡಿದ್ದಾರೆ. ಮದಗಜ ಎಚ್‌ಡಿಕೆಯನ್ನು ಹಣಿಯಲು ನೀವು ಡಿ.ಕೆ.ಶಿವಕುಮಾರ್ ಪಾದ ನೆಕ್ಕಿದ್ದನ್ನು ನಾವು ನೋಡಿಲ್ಲವೆ? ಎಂದು ತಿರುಗೇಟು ನೀಡಿದ್ದಾರೆ.

    ಡ್ರಗ್ಸ್ ದಂಧೆಯಲ್ಲಿ ಜೈಲು ಸೇರಿದವರ ಪಲ್ಲಂಗದಲ್ಲಿ ಪಂದ್ಯವಾಡಿದ ನಿಮ್ಮವರ ೆಟೋಗಳು, ವೀಡಿಯೋಗಳು ನಿಮ್ಮನ್ನು ಬಟಾ ಬಯಲು ಮಾಡಲಿವೆ. ಗಾಜಿನ ಮನೆಯಲ್ಲಿ ನಿಂತು ಕಲ್ಲೆಸೆಯಬೇಡಿ. ಬಾಯಿ ಚಪಲಕ್ಕೆ ಮಾತನಾಡಬೇಡಿ ಎಂದು ಬೋಜೇಗೌಡ ಎಚ್ಚರಿಕೆ ನೀಡಿದ್ದಾರೆ.
    ಯೋಗೇಶ್ವರ್ ಹೇಳಿಕೆ ಸರಿಯಾಗಿದೆ

    ರಾಜ್ಯ ಸರ್ಕಾರದ ಭ್ರಷ್ಟಾಚಾರದ ದಾಖಲೆಗಳಿದ್ದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಿರಂಗಪಡಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸವಾಲು ಹಾಕಿದ್ದಾರೆ. ಬಿಜೆಪಿಗೆ ಲ್ೈ ಕೊಟ್ಟ್ಟೆನೆಂದು ಹೇಳುವ ಎಚ್‌ಡಿಕೆ ಬಿಜೆಪಿಯಿಂದ ತಮಗಾದ ಲಾಭ, ಅನುಕೂಲತೆ ಮರೆತು ಬಿಟ್ಟಿದ್ದಾರೆ.

    ಮುಖ್ಯಮಂತ್ರಿ ಪದವಿಯನ್ನು ಬಂಗಾರದ ತಟ್ಟೆಯಲ್ಲಿಟ್ಟು ಕೊಟ್ಟೆವು. ಆದರೆ ಅದನ್ನು ತಾವೇ ಒದ್ದುಕೊಂಡರೆ ಏನು ಮಾಡುವುದು? ಎಂದು ಅಶ್ವತ್ಥ ನಾರಾಯಣ ಪ್ರಶ್ನಿಸಿದ್ದಾರೆ. ಎಚ್‌ಡಿಕೆ ವಿಷಯದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಬೇಕಾದುದನ್ನೇ ಹೇಳಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಚನ್ನಪಟ್ಟಣ ಕ್ಷೇತ್ರಕ್ಕೆ ಸಿಪಿವೈ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವುದು ನಿಶ್ಚಿತ. ಇದೇ ಎಚ್‌ಡಿಕೆ ಕುರಿತು ಸಿಪಿವೈ ನೀಡಿರುವ ಹೇಳಿಕೆಯ ತಾತ್ಪರ್ಯ ಎಂದು ಅಶ್ವತ್ಥ ನಾರಾಯಣ ಸಮರ್ಥಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts