More

    ಮಹಿಳೆಯರಿಗೆ ಟಿಕೆಟ್ ನೀಡಲು ಹೆಚ್ಚಿದ ಒತ್ತಡ

    ಕೇಶವಮೂರ್ತಿ ವಿ.ಬಿ. ಹಾವೇರಿ

    ಸಮಾನತೆಯ ತತ್ವ ಸಾರಿದ ಸಂತರ ನಾಡು, ಯಾಲಕ್ಕಿಯ ಬೀಡು ಹಾವೇರಿ ಜಿಲ್ಲೆಯಾಗಿ 25 ವರ್ಷಗಳೇ ಉರುಳಿದರೂ, ಜಿಲ್ಲೆಯಿಂದ ಈವರೆಗೆ ಒಬ್ಬೇ ಒಬ್ಬ ಮಹಿಳೆಗೆ ಶಾಸಕ ಸ್ಥಾನಮಾನ ಸಿಕ್ಕಿಲ್ಲ. ಇದಕ್ಕೆ ಕಾರಣ ಮಹಿಳೆಯರಿಗೆ ಹೆಚ್ಚು ಅವಕಾಶ ದೊರೆಯದಿರುವುದು. ವೇದಿಕೆಗಳ ಮೇಲೆ ಸಮಾನತೆಯ ಕುರಿತು ಉದ್ದುದ್ದ ಭಾಷಣಗಳನ್ನು ಬಿಗಿಯುವ ರಾಜಕೀಯ ಪಕ್ಷಗಳು ಮೊದಲಿನಿಂದಲೂ ಮಹಿಳೆಯರನ್ನು ಕಡೆಗಣಿಸುತ್ತ ಬಂದಿದ್ದು, ಸ್ವಾತಂತ್ರಾೃ ನಂತರ ಈವರೆಗೆ ಬೆರಳೆಣಿಕೆಯಷ್ಟು ಮಹಿಳೆಯರಿಗೆ ಮಾತ್ರ ಸ್ಪರ್ಧಿಸುವ ಅವಕಾಶ ದೊರೆತಿದ್ದು, ಸಿಂಹಪಾಲು ಪುರುಷರಿಗೇ ದಕ್ಕಿದೆ. ಅವಿಭಜಿತ ಧಾರವಾಡ ಜಿಲ್ಲೆಯಿಂದ ಹಾವೇರಿ ಕ್ಷೇತ್ರದಿಂದ 1957ರಲ್ಲಿ ಸ್ವಾತಂತ್ರೃ ಯೋಧ, ಹುತಾತ್ಮ ಮಹಾದೇವ ಮೈಲಾರ ಅವರ ಪತ್ನಿ ಸಿದ್ದಮ್ಮ ಮೈಲಾರ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶೇ.86ರಷ್ಟು ಮತ (17,286) ಪಡೆದು ಮೊದಲ ಮಹಿಳಾ ಶಾಸಕಿಯಾಗಿ ಆಯ್ಕೆಯಾಗಿದ್ದರು. ನಂತರ ಬ್ಯಾಡಗಿ ಕ್ಷೇತ್ರದಿಂದ 1962ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎಂ.ಜಿ.ಬಣಕಾರ ವಿರುದ್ಧ ಸಿದ್ದಮ್ಮ 21,092 ಮತ ಪಡೆದು ಮತ್ತೊಮ್ಮೆ ಶಾಸಕರಾಗಿ ಆಯ್ಕೆಗೊಂಡಿದ್ದರು. ಬಳಿಕ 1967ರಲ್ಲಿ ಬ್ಯಾಡಗಿಯಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎಂ.ಜಿ.ಬಣಕಾರ ವಿರುದ್ಧ ಸೋಲು ಕಂಡಿದ್ದರು. ರಾಣೆಬೆನ್ನೂರ ಕ್ಷೇತ್ರದಿಂದ 1962ರಲ್ಲಿ ಯಲ್ಲವ್ವ ಸಾಂಬ್ರಾಣಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 18,715 ಮತ ಪಡೆದು ವಿಜೇತರಾಗಿದ್ದರು. ಸಿದ್ದಮ್ಮ ಹಾಗೂ ಯಲ್ಲವ್ವ ಅವರನ್ನು ಬಿಟ್ಟರೆ ಮತ್ಯಾವ ಮಹಿಳೆಗೂ ಶಾಸಕಿ ಸ್ಥಾನಮಾನ ದೊರೆತಿಲ್ಲ. ಕೆಲವರು ಸ್ಪರ್ಧಿಸಿದರೂ ಶಾಸಕರಾಗುವ ಅವಕಾಶ ಬರಲಿಲ್ಲ. ಅದರಲ್ಲೂ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಪುರುಷರಿಗೇ ಹೆಚ್ಚೆಚ್ಚು ಅವಕಾಶ ನೀಡುತ್ತ ಬಂದಿರುವುದು ಗಮನಾರ್ಹ.
    ಜಿಲ್ಲೆಯಲ್ಲಿ ಒಟ್ಟು 12,91,194 ಮತದಾರರಿದ್ದು, 6,60,270 ಪುರುಷ ಮತದಾರರಿದ್ದರೆ, 6,30,879 ಮಹಿಳಾ ಮತದಾರರಿದ್ದಾರೆ. ಶೇ.48ಕ್ಕೂ ಅಧಿಕ ಮಹಿಳಾ ಮತದಾರರನ್ನು ಜಿಲ್ಲೆ ಹೊಂದಿದ್ದರೂ ಪ್ರಮುಖ ರಾಷ್ಟ್ರೀಯ ಪಕ್ಷಗಳು ಈವರೆಗೆ ಮಹಿಳೆಯರಿಗೆ ಮಣೆ ಹಾಕಿಲ್ಲ. ಹಾಗಾಗಿ, ಜಿಲ್ಲೆಗೆ ಒಂದಾದರೂ ಮಹಿಳೆಗೆ ಟಿಕೆಟ್ ಕೊಡಬೇಕು ಎಂಬ ಒತ್ತಡ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಹೆಚ್ಚಾಗಿದೆ.
    ಈ ನಿಟ್ಟಿನಲ್ಲಿ ರಾಣೆಬೆನ್ನೂರಿಂದ ಭಾರತಿ ಆಳವಂಡಿ, ಭಾರತಿ ಜಂಬಗಿ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ರಾಜೇಶ್ವರಿ ಪಾಟೀಲ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಹಾವೇರಿ ಮೀಸಲು ಕ್ಷೇತ್ರದಲ್ಲಿ ಕೆಆರ್‌ಎಸ್ ಪಕ್ಷದಿಂದ ಪ್ರೇಮಾ ಕಲಕೇರಿ ಈಗಾಗಲೇ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯಾದರೂ ಶಾಸಕಿ ಆಗುವ ಅವಕಾಶ ಮಹಿಳೆಗೆ ಒಲಿಯುತ್ತಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

    ಸ್ಪರ್ಧಾ ಕಣದಲ್ಲಿ ಬೆರಳೆಣಿಕೆ
    ಹಾವೇರಿ ಕ್ಷೇತ್ರದಿಂದ 1985ರಲ್ಲಿ ಮೀನಾಕ್ಷಿ ಗಿರ್ಜಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 25,628 ಮತ ಪಡೆದು ಪರಾಭವಗೊಂಡಿದ್ದರು. 1999ರಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದ ಮೀನಾಕ್ಷಿ ಗಿರ್ಜಿ 17,300 ಮತ ಪಡೆದು ಸೋತಿದ್ದರು. ಬ್ಯಾಡಗಿ ಕ್ಷೇತ್ರದಿಂದ 1983ರಲ್ಲಿ ಶಾಂತಾ ಪವಾಡಪ್ಪ ಪಕ್ಷೇತರರಾಗಿ ಸ್ಪರ್ಧಿಸಿ 487 ಮತ ಪಡೆದು ಸೋತಿದ್ದರು. 1994ರಲ್ಲಿ ಬ್ಯಾಡಗಿಯಿಂದ ಗೌರಮ್ಮ ಹೆಗಡೆ ಪಕ್ಷೇತರರಾಗಿ ಸ್ಪರ್ಧಿಸಿ 386 ಮತ ಪಡೆದಿದ್ದರು. 1985ರಲ್ಲಿ ಹಿರೇಕೆರೂರಿಂದ ಜಿ.ಬಿ.ಜ್ಯೋತಿ ಪಕ್ಷೇತರರಾಗಿ ಸ್ಪರ್ಧಿಸಿ 936 ಮತ ಪಡೆದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts