More

    ತಾತ್ಕಾಲಿಕ ವೈದ್ಯರ ನೇಮಕಾತಿಗೆ ಕ್ರಮ; ಖಾಯಂ ಹುದ್ದೆ ಭರ್ತಿಗೆ ಸರ್ಕಾರಕ್ಕೆ ಪತ್ರ; ವಿಜಯವಾಣಿ ಸರಣಿ ವರದಿ ಪರಿಣಾಮ

    ಹಾವೇರಿ: ಜಿಲ್ಲೆಯ ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 23 ತಜ್ಞ ವೈದ್ಯರು ಸೇರಿದಂತೆ ಇತರ ಸಿಬ್ಬಂದಿ ಕೊರತೆ ನೀಗಿಸಲು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.
    ಅನಸ್ತೇಶಿಯಾ, ಆರ್ಥೋಪಿಡಿಕ್, ಪೀಡಿಯಾಟ್ರಿಕ್, ಎಂಬಿಬಿಎಸ್, ಸೇರಿದಂತೆ ಇತರ 23 ವೈದ್ಯರ ಹುದ್ದೆಗಳ ಕಾಯಂ ನೇಮಕಾತಿಗಾಗಿ ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಸದ್ಯಕ್ಕೆ ಈ ಕೊರತೆ ನೀಗಿಸಲು ಜಿಲ್ಲಾಧಿಕಾರಿಯವರ ಅನುಮತಿ ಮೇರೆಗೆ 12 ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ಬಾಕಿ 13 ವೈದ್ಯರ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ನಡೆಸಲಾಗುವುದು. ತುರ್ತು ಅವಶ್ಯಕತೆ ಇದ್ದ ಹುದ್ದೆಗಳನ್ನು ಮೊದಲು ಭರ್ತಿ ಮಾಡಲಾಗುವುದು. 47 ಸಿಎಂಒ (ಚೀಫ್ ಮೆಡಿಕಲ್ ಆಫೀಸರ್) ಹುದ್ದೆಗಳ ನೇಮಕಾತಿ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ.
    ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಕುಡಿಯುವ ನೀರು, ಶೌಚಗೃಹ, ಬೆಡ್, ಕುರ್ಚಿ, ಮತ್ತಿತರ ಸೌಲಭ್ಯ ಈಗಾಗಲೇ ಇದೆ. ಅವುಗಳ ಸಮರ್ಪಕ ನಿರ್ವಹಣೆ ಮಾಡುವಂತೆ ಸೂಚಿಸಿದ್ದೇನೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಟೆಂಡರ್ ನೀಡಲು ಸೂಚಿಸಲಾಗಿದೆ. ಸ್ಥಳೀಯ ವಿಆರ್‌ಎಸ್ ಸಮಿತಿಯಲ್ಲಿ ಚರ್ಚಿಸಿ, ಪಾರ್ಕಿಂಗ್ ನಿರ್ವಹಣೆಗೆ ಟೆಂಡರ್ ನೀಡುವಂತೆ ಸೂಚಿಸಿದ್ದೇನೆ ಎಂದು ಡಿಎಚ್‌ಒ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
    ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳ ಸಮಸ್ಯೆಗಳ ಕುರಿತು ‘ವಿಜಯವಾಣಿ’ ಕಳೆದ ತಿಂಗಳು ‘ಆಸ್ಪತ್ರೆ ಸ್ಥಿತಿಗತಿ’ ಹೆಸರಿನ ಸರಣಿ ವರದಿಯನ್ನು ಪ್ರಕಟಿಸಿತ್ತು. ಲೇಖನದಲ್ಲಿ ಆಯಾ ಆಸ್ಪತ್ರೆಗಳ ಸಮಸ್ಯೆಗಳನ್ನು ಜನರ ಮುಂದೆ ತೆರೆದಿಟ್ಟಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts