More

    ಎಪಿಸಿ ಹುದ್ದೆ ನೇಮಕಾತಿಗೆ ಲಿಖಿತ ಪರೀಕ್ಷೆ ನಾಡಿದ್ದು; ಯಾರಿಗೂ ಹಣ ಕೊಡಬೇಡಿ; ಎಸ್‌ಪಿ ಅಂಶುಕುಮಾರ ಸೂಚನೆ

    ಹಾವೇರಿ: ನಗರ ಹಾಗೂ ಸುತ್ತಮುತ್ತಲಿನ 15 ಪರೀಕ್ಷಾ ಕೇಂದ್ರಗಳಲ್ಲಿ ಜ.28ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಎ.ಪಿ.ಸಿ. (ಸಿ.ಎ.ಆರ್/ಡಿ.ಎ.ಆರ್) 3,064 ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.
    ಲಿಖಿತ ಪರೀಕ್ಷೆ ಪಾರದರ್ಶಕತೆ, ಗಣಕೀಕೃತ, ಸಂಪೂರ್ಣ ವಸ್ತುನಿಷ್ಠೆ, ಅರ್ಹತೆ ಮತ್ತು ಮೀಸಲಾತಿ ಆಧಾರದ ಮೇಲೆ ನಡೆಯುತ್ತದೆ. ಯಾವುದೇ ಅಭ್ಯರ್ಥಿಗಳು ಇಲಾಖೆಯ ಹೊರಗಾಗಲಿ ಅಥವಾ ಒಳಗಾಗಲಿ ಉದ್ಯೋಗ ಪಡೆಯುವ ಸಲುವಾಗಿ ಯಾವುದೇ ವ್ಯಕ್ತಿಗೆ ಹಣ ನೀಡುವುದು ಅಥವಾ ಯಾವುದೇ ವಿಧವಾದ ಪಾರಿತೋಷಕ ನೀಡುವುದು ಮಾಡಬಾರದು. ಯಾವುದೇ ವಿಧವಾದ ಹಣ ವಸೂಲಾತಿಗೆ ಯಾರಿಗೂ ಅಧಿಕಾರ ನೀಡಿರುವುದಿಲ್ಲ. ಈ ದಿಶೆಯಲ್ಲಿ ಮಧ್ಯವರ್ತಿಗಳ ಭರವಸೆಗಳಿಗೆ ಮಾರು ಹೋಗಬಾರದೆಂದು ಅಭ್ಯರ್ಥಿಗಳಿಗೆ ತಿಳಿಸಿದ್ದಾರೆ.
    ಲಿಖಿತ ಪರೀಕ್ಷೆಯ ಕರೆ ಪತ್ರವನ್ನು ಇಲಾಖೆಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಕರೆ ಪತ್ರದಲ್ಲಿ ನೀಡಿರುವ ಸೂಚನೆಗಳಂತೆ ಪರೀಕ್ಷೆಗೆ ಹಾಜರಾಗಬೇಕು. ಅಭ್ಯರ್ಥಿಗಳು ಪರೀಕ್ಷೆಗೆ ಬರುವಾಗ ಮೊಬೈಲ್, ಯಾವುದೇ ಎಲೆಕ್ಟ್ರಾನಿಕ್ ವಸ್ತು, ಸ್ಮಾರ್ಟ್ ವಾಚ್‌ಗಳನ್ನು ತರಬಾರದು ಎಂದು ಎಸ್‌ಪಿ ಅಂಶುಕುಮಾರ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
    ವಸ್ತ್ರ ಸಂಹಿತೆ: ಪುರುಷ ಮತ್ತು ತೃತೀಯಲಿಂಗ ಪುರುಷ ಅಭ್ಯರ್ಥಿಗಳು ಅರ್ಥ ತೊಳಿನ ಶರ್ಟ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್‌ಗಳನ್ನು ಧರಿಸಬೇಕು. ಜಿಪ್ ಪ್ಯಾಕೆಟ್‌ಗಳು, ದೊಡ್ಡ ಬಟನ್‌ಗಳು ಇರುವ ಶರ್ಟ್‌ಗಳು, ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್‌ಗಳನ್ನು ಧರಿಸುವಂತಿಲ್ಲ.
    ಪರೀಕ್ಷಾ ಕೇಂದ್ರದೊಳಗೆ ಶೂಗಳನ್ನು ನಿಷೇಧಿಸಲಾಗಿದ್ದು, ಅಭ್ಯರ್ಥಿಗಳು ತೆಳುವಾದ ಅಡಿಭಾಗವಿರುವ ಪಾದರಕ್ಷೆಗಳನ್ನು(ಚಪ್ಪಲಿ) ಧರಿಸಿರಬೇಕು. ಕುತ್ತಿಗೆ ಸುತ್ತಾ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
    15 ಪರೀಕ್ಷಾ ಕೇಂದ್ರಗಳು:
    ಹಾವೇರಿ ನಗರದ ಹೊಸಮಠ ಬಸವೇಶ್ವರ ಕಾಲೇಜ್, ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜ್, ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್, ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು, ದೇವಗಿರಿ ಸರ್ಕಾರಿ ಇಂಜನಿಯರಿಂಗ್ ಕಾಲೇಜ್, ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುದ್ಲೆಪ್ಪ ಹಳ್ಳಿಕೇರಿ ಪಿಯು ಕಾಲೇಜ್, ಕೆರಿಮತ್ತಿಹಳ್ಳಿ ವಿಶ್ವವಿದ್ಯಾಲಯ, ಚನ್ನಬಸಪ್ಪ ಮಾಗಾವಿ ಪ್ರೌಢಶಾಲೆ, ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮುನ್ಸಿಪಲ್ ಹೈಸ್ಕೂಲ್, ಎಸ್.ಎಂ.ಎಸ್. ಬಾಲಕಿಯರ ಪ್ರೌಢಶಾಲೆ, ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾ ವಿದ್ಯಾಲಯ, ಎಸ್.ಜೆ.ಎಂ. ಪಿಯು ಕಾಲೇಜ್, ಸೇಂಟ್ ಆನ್ಸ್ ಪ್ರಾಥಮಿಕ ಶಾಲೆ ಹಾಗೂ ಇಜಾರಿ ಲಕಮಾಪುರ ಬಿ.ಪಿ.ಇಡಿ ಮಹಾವಿದ್ಯಾಲಯದಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 5,500 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts