More

    ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ‌ ಬೃಹತ್ ಟ್ರ್ಯಾಕ್ಟರ್ ರ್ಯಾಲಿ

    ಹಾವೇರಿ: ದೆಹಲಿ ಗಡಿಯಲ್ಲಿ ರೈತರ ಮೇಲಿನ ದಬ್ಬಾಳಿಕೆ ನಿಲ್ಲಿಸುವುದು, ಈ ಕೂಡಲೇ ಬರ ಪರಿಹಾರ ಬಿಡುಗಡೆಗೊಳಿಸುವುದು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ರೈತರು ತಮ್ಮ ಶಕ್ತಿ ಪ್ರದರ್ಶಿಸಿದರು. 200ಕ್ಕೂ ಹೆಚ್ಚು ಟ್ರಾೃಕ್ಟರ್‌ಗಳಲ್ಲಿ 400ಕ್ಕೂ ಅಧಿಕ ರೈತರು ಭಾಗವಹಿಸಿದ್ದರು.

    ಕಾಗಿನೆಲೆ ರಸ್ತೆಯ ಮುರುಘ ರಾಜೇಂದ್ರ ಮಠದಿಂದ 200ಕ್ಕೂ ಹೆಚ್ಚಿನ ಟ್ರ್ಯಾಕ್ಟರ್ ಗಳಿಂದ ರ್ಯಾಲಿ ಆರಂಭವಾಯಿತು. ಗುತ್ತಲ ರಸ್ತೆ, ಪುರ ಸಿದ್ದೇಶ್ವರ ದೇವಸ್ಥಾನ, ಹುಕ್ಕೇರಿ ಮಠ, ಎಂಜಿ ರಸ್ತೆ ಮಾರ್ಗವಾಗಿ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಮೆರವಣಿಗೆ ನಡೆಯಿತು. ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿದ ರೈತರು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.

    ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಜನವರಿ 26ರಂದು ಸಚಿವರಿಗೆ ಧ್ವಜಾರೋಹಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ರೈತ ಸಂಘ ಎಚ್ಚರಿಕೆ ನೀಡಿತ್ತು. ಆಗ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ರೈತರ ಮನವೊಲಿಸಿ, ಧರಣಿ ಕೈಬಿಡುವಂತೆ ಮಾಡಿದ್ದರು. ಆದರೆ, ನಮ್ಮ ಬೇಡಿಕೆಗಳು ಇಂದಿಗೂ ಈಡೇರಿಲ್ಲ. ನಮ್ಮ ಜಿಲ್ಲೆಯ ನರಿಬುದ್ದಿ ಶಾಸಕರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಅವರಿಗೆ ರೈತರ ಪರ ಎಳ್ಳಷ್ಟೂ ಕಾಳಜಿ ಇಲ್ಲ. ಪರಿಹಾರ ಕೊಡಲು ಮೀನಮೇಷ ಎಣಿಸುತ್ತಿರುವ ಇಂಥ ಭಂಡ ಸರ್ಕಾರವನ್ನು ಹಿಂದೆ ನೋಡಿರಲಿಲ್ಲ. ರಸ್ತೆಯಲ್ಲಿ ಕುಳಿತು ಧಿಕ್ಕಾರ ಕೂಗಿದ್ದು ಸಾಕು, ಇನ್ನೆನಿದ್ದರೂ ಜೈಲ್ ಭರೋ ಚಳವಳಿ ನಡೆಸಬೇಕಿದೆ ಎಂದರು.
    ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬರ ಘೋಷಿಸಿ ಆರು ತಿಂಗಳಾಗಿದೆ. ಈವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ಪರಿಹಾರ ಬಿಡುಗಡೆ ಮಾಡಿಲ್ಲ. ಬರದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸರ್ಕಾರ ಎಚ್ಚೆತ್ತುಕೊಳ್ಳದೇ ಚುನಾವಣೆ ಗುಂಗಿನಲ್ಲಿದೆ ಎಂದರು.

    ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ, ಜಿಲ್ಲಾ ಸಂಚಾಲಕ ಮಹ್ಮದ್‌ಗೌಸ್ ಪಾಟೀಲ, ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ರಾಜು ತರಲಗಟ್ಟ, ಅಡಿವೆಪ್ಪ ಆಲದಕಟ್ಟಿ, ಸಂಘದ ಹಾವೇರಿ ತಾಲೂಕು ದಿಳ್ಳೆಪ್ಪ ಮಣ್ಣೂರ, ಹಿರೇಕೆರೂರ ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ಹಾನಗಲ್ಲ ಅಧ್ಯಕ್ಷ ಮರಿಗೌಡ ಪಾಟೀಲ, ಬ್ಯಾಡಗಿ ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ, ರಟ್ಟಿಹಳ್ಳಿ ಅಧ್ಯಕ್ಷ ಶಂಕ್ರಪ್ಪ ಶಿರಗಂಬಿ, ರಾಣೆಬೆನ್ನೂರ ಅಧ್ಯಕ್ಷ ಸುರೇಶ ಹೊನ್ನಪ್ಪಳವರ, ಸವಣೂರ ಅಧ್ಯಕ್ಷ ಚನ್ನಪ್ಪ ಮರಡೂರ, ಶಿಗ್ಗಾಂವಿ ಅಧ್ಯಕ್ಷ ಮುತ್ತಪ್ಪ ಗುಡಗೇರಿ, ಮತ್ತಿತರರು ಪಾಲ್ಗೊಂಡಿದ್ದರು.
    ಸ್ಥಳಕ್ಕೆ ಆಗಮಿಸಿದ ಡಿಸಿ
    ಮಧ್ಯಾಹ್ನ ಸುಡು ಬಿಸಿಲಲ್ಲಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕುಳಿತುಕೊಂಡ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿಯವರು ಆಗಮಿಸಲೇಬೇಕು ಎಂದು ಪಟ್ಟು ಹಿಡಿದರು. ಸಂಜೆ 4 ಗಂಟೆ ಸುಮಾರು ಡಿಸಿ ರಘುನಂದನ ಮೂರ್ತಿ, ಎಸಿ ಚನ್ನಪ್ಪ ಎಚ್.ಬಿ. ಹಾಗೂ ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಸ್ಥಳಕ್ಕಾಗಮಿಸಿ ರೈತರ ಅಹವಾಲು ಸ್ವೀಕರಿಸಿದರು. ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ನಾವು ಬಗೆಹರಿಸುತ್ತೇವೆ. ಸರ್ಕಾರದ ಜತೆಗಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಹಾಗೂ ಬುಧವಾರ ನಡೆಯಲಿರುವ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts