More

    ಪ.ಪೂ. ಶಿಕ್ಷಣ ಇಲಾಖೆ ಯಥಾಸ್ಥಿತಿ ಕಾಪಾಡಿ; ಪ್ರಾಚಾರ್ಯರು, ಉಪನ್ಯಾಸರ ಸಂಘಗಳ ಆಗ್ರಹ

    ಹಾವೇರಿ: ಗುಣಾತ್ಮಕ ಮತ್ತು ಸ್ಪರ್ಧಾತ್ಮಕ ಶಿಕ್ಷಣಕ್ಕೆ ದೇಶದಲ್ಲಿಯೇ ಮಾದರಿಯಾದ ಪದವಿಪೂರ್ವ ಶಿಕ್ಷಣ ಇಲಾಖೆಯ ಅಸ್ಮಿತೆಯನ್ನು ಯಥಾಸ್ಥಿತಿ ಕಾಪಾಡುವಂತೆ ಹಾವೇರಿ ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಚಾರ್ಯರ ಸಂಘ, ಪ.ಪೂ. ಕಾಲೇಜುಗಳ ಉಪನ್ಯಾಸಕರ ಸಂಘ ಹಾಗೂ ಪದವಿಪೂರ್ವ ಕಾಲೇಜುಗಳ ನೌಕರರ ಸಂಘ ಹಾಗೂ ರಾಜ್ಯ ಪ.ಪೂ. ಕಾಲೇಜುಗಳ ಬೋಧಕೇತರ ಸಂಘ ಸರ್ಕಾರಕ್ಕೆ ಒತ್ತಾಯಿಸಿದೆ.
    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನೂರಾರು ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
    ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಎಂದು ಹೆಸರು ಬದಲಿಸಲಾಗಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಪಿಯು ಹಂತವನ್ನು ಪ್ರೌಢಶಾಲೆಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಹಿಂದಿನಿಂದಲೂ ನಡೆಯುತ್ತಿದೆ. ಇದನ್ನು ಕೂಡಲೇ ಕೈಬಿಟ್ಟು ಹಿಂದಿನಂತೆ ಯಥಾಸ್ಥಿತಿಯಲ್ಲಿಯೇ ಇರಿಸಬೇಕು. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ವಿಲೀನಗೊಳಿಸಿರುವ ಪರೀಕ್ಷಾ ವಿಭಾಗವನ್ನು ಹಿಂತೆಗೆದು ಪುನಃ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿಯೇ ಉಳಿಸುವ ಮೂಲಕ ಶೈಕ್ಷಣಿಕ ವಿಭಾಗ ಮತ್ತು ಪರೀಕ್ಷಾ ವಿಭಾಗಗಳ ನಡುವೆ ಹಳಿ ತಪ್ಪಿರುವ ಸಮನ್ವಯವನ್ನು ಮರುಸ್ಥಾಪಿಸಬೇಕು. ಅಲ್ಲದೇ, ಕುಸಿಯುತ್ತಿರುವ ಪರೀಕ್ಷಾ ಮೌಲ್ಯ, ಪಾವಿತ್ರತೆಯನ್ನು ಎತ್ತಿ ಹಿಡಿಬೇಕು.
    ಪ್ರತಿ ಜಿಲ್ಲಾ ಹಂತಗಳಲ್ಲಿ ಪಪೂಶಿ ಇಲಾಖೆಯ ಮೇಲುಸ್ತುವಾರಿಯನ್ನು ಜಿಪಂ ಸಿಇಒ ಮತ್ತು ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಇವರಿಗೆ ವಹಿಸಲು ಸರ್ಕಾರದ ಅಧೀನ ಕಾರ್ಯದರ್ಶಿಗಳು ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು. ಇದರಿಂದ ಸರಾಗವಾಗಿ ನಡೆಯುತ್ತಿರುವ ಇಲಾಖೆಯ ಚಟುವಟಿಕೆಗಳು ಸಂಕೀರ್ಣಗೊಂಡು, ವಿಳಂಬನೀತಿಗೆ ಕಾರಣವಾಗಬಹುದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
    ಸರ್ಕಾರ ಯಾವುದೇ ಶಿಕ್ಷಕರ ಸಂಘಟನೆಗಳು, ಶಿಕ್ಷಣ ತಜ್ಞರ ಜತೆಗೆ ಚರ್ಚಿಸದೇ ಏಕಾಏಕಿ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಿರುವುದು ಅವೈಜ್ಞಾನಿಕ ಮತ್ತು ಅತಾರ್ಕಿಕ ನಿರ್ಧಾರವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಕುಸಿಯುವುದು ಮಾತ್ರವಲ್ಲ. ಓದಿನ ಬಗೆಗೆ ತಾತ್ಸಾರವನ್ನು ಬೆಳೆಸುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಈ ಪದ್ಧತಿಯಿಂದ ನೈಜ ಮೌಲ್ಯಮಾಪನ ಸಾಧ್ಯವಾಗುವುದಿಲ್ಲ. ಈ ವಿಧಾನದಿಂದ ಪ್ರಮಾಣಾತ್ಮಕ ಫಲಿತಾಂಶ ದೊರಕುತ್ತದೆಯೇ ವಿನಃ ಗುಣರತ ಫಲಿತಾಂಶವಲ್ಲ. ಆದ್ದರಿಂದ ಪಪೂಶಿ ಇಲಾಖೆಯನ್ನು ರಜೆರಹಿತ ಇಲಾಖೆಯನ್ನಾಗಿ ಘೋಷಿಸಿ, ಇತರ ಸವಲತ್ತುಗಳನ್ನು ನೀಡಬೇಕೆಂದು ಮನವಿ ಸಲ್ಲಿಸಲಾಯಿತು.
    ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್.ನಿಸ್ಸಿಮಗೌಡ್ರ, ಪದವಿ ಪೂರ್ವ ಶಿಕ್ಷಣ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಡಾ. ರಾಮಮೋಹನ್ ರಾವ್, ಕೆ.ಪಿ.ಬ್ಯಾಡಗಿ, ಪ್ರಕಾಶ ಬಾರಕೇರ, ಶಿವಾನಂದ ಬೆನ್ನೂರು, ಪ್ರಾಚಾರ್ಯರಾದ ಆನಂದ ಮುದಕ್ಕಮ್ಮನವರ, ಜ್ಯೋತಿಭಾ ಶಿಂಧೆ, ಅರುಣಕುಮಾರ, ಭೋದಕೇತರ ಸಂಘದ ಪದಾಧಿಕಾರಿಗಳಾದ ಗಂಗಾಧರ, ಹರ್ಷ ಪಾಟೀಲ, ಬಸವರಾಜ ಮೊರಬದ, ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts