More

    ಯಾರಿಗೆ ಒಲಿಯುತ್ತೆ ಸಚಿವ ಸ್ಥಾನ ? ಸಲೀಂ ಅಹ್ಮದ್, ಶಿವಣ್ಣವರ, ಲಮಾಣಿ, ಬಣಕಾರ, ಮಾನೆ ರೇಸ್‌ನಲ್ಲಿ

    ಕೇಶವಮೂರ್ತಿ ವಿ.ಬಿ. ಹಾವೇರಿ

    ರಾಜ್ಯದಲ್ಲಿ ಕಾಂಗ್ರೆಸ್ ನೂತನ ಸರ್ಕಾರ ರಚನೆಯ ಕಸರತ್ತು ನಡೆಯುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಮುಖ್ಯಮಂತ್ರಿ ಯಾರೇ ಆದರೂ ಜಿಲ್ಲೆಯ ಐವರು ಕಾಂಗ್ರೆಸ್ ಶಾಸಕರ ಪೈಕಿ ಒಂದಿಬ್ಬರು ಸಚಿವರಾಗಲಿದ್ದಾರೆ ಎಂಬ ಚರ್ಚೆ ಆರಂಭವಾಗಿದ್ದು, ಯಾರಿಗೆ ಸಚಿವ ಸ್ಥಾನ ಒಲಿಯಲಿದೆ ಎಂಬುದು ಕುತೂಹಲಕಾರಿ ವಿಷಯವಾಗಿದೆ. ಸಚಿವ ಸ್ಥಾನದ ರೇಸ್‌ನಲ್ಲಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ, ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಹಾಗೂ ಹಿರೇಕೆರೂರ ಶಾಸಕ ಯು.ಬಿ.ಬಣಕಾರ ಹೆಸರು ಮುಂಚೂಣಿಯಲ್ಲಿವೆ. ರಾಣೆಬೆನ್ನೂರ ಶಾಸಕ ಪ್ರಕಾಶ ಕೋಳಿವಾಡ ಮೊದಲ ಬಾರಿಗೆ ಆಯ್ಕೆಯಾಗಿರುವ ಕಾರಣ ಅವರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಕಡಿಮೆ. ಬ್ಯಾಡಗಿ ಕ್ಷೇತ್ರದಿಂದ ಕುರುಬ ಸಮಾಜದ ಮುಖಂಡ ಬಸವರಾಜ ಶಿವಣ್ಣವರ ಭರ್ಜರಿ ಜಯಭೇರಿ ಭಾರಿಸಿದ್ದಾರೆ. ಈ ಮೂಲಕ ನಾಲ್ಕನೇ ಬಾರಿಗೆ (ಹಾವೇರಿಯಲ್ಲಿ ಎರಡು ಸಲ, ಬ್ಯಾಡಗಿಯಲ್ಲಿ ಎರಡು ಸಲ) ಶಾಸಕರಾಗಿ ಆಯ್ಕೆಯಾಗುವ ಮೂಲಕ ಜಿಲ್ಲೆಯ ಹಿರಿಯ ಕಾಂಗ್ರೆಸ್ ಶಾಸಕ ಎನಿಸಿಕೊಂಡಿದ್ದಾರೆ. ಈ ಹಿಂದೆಯೂ ಸಚಿವರಾಗಿ ಕೆಲಸ ಮಾಡಿದ್ದಾರೆ. ಜತೆಗೆ ಇದು ನನ್ನ ಕೊನೆಯ ಚುನಾವಣೆ ಎಂದು ಸ್ವತಃ ಶಿವಣ್ಣವರ ಹೇಳಿಕೊಂಡಿದ್ದಾರೆ. ಮುಖ್ಯವಾಗಿ ಕಾಗಿನೆಲೆ ಗುರುಪೀಠವನ್ನು ಹೊಂದಿರುವ ಬ್ಯಾಡಗಿ ಕ್ಷೇತ್ರದ ಶಿವಣ್ಣವರಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ದಟ್ಟವಾಗಿದೆ. ರಾಜ್ಯದಲ್ಲಿ ಲಂಬಾಣಿ ಸಮಾಜದ ಕೆಲವೇ ಕೆಲವು ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಅದರಲ್ಲಿ ರುದ್ರಪ್ಪ ಲಮಾಣಿ ಮೊದಲ ಸಾಲಿನಲ್ಲಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಅಲ್ಲದೇ ಬಿಜೆಪಿ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿದ ಬಳಿಕ ಆಕ್ರೋಶಗೊಂಡಿದ್ದ ಲಂಬಾಣಿ ಸಮಾಜ ಕಾಂಗ್ರೆಸ್ ಕೈಹಿಡಿದಿದೆ ಎನ್ನಲಾಗಿದೆ. ಈ ಆಧಾರದ ಮೇಲೆ ಣಿಗೆ ಸಚಿವ ಸ್ಥಾಲಮಾನ ಒಲಿಯಬಹುದು ಎಂದು ರಾಜಕೀಯ ತಜ್ಞರ ವಿಶ್ಲೇಷಣೆಯಾಗಿದೆ.
    2021ರ ಉಪ ಚುನಾವಣೆಯಲ್ಲಿ ಇಡೀ ರಾಜ್ಯ ಬಿಜೆಪಿ ಸರ್ಕಾರವನ್ನು ಎದುರಿಸಿ ಹಾನಗಲ್ಲ ಶಾಸಕರಾಗುವ ಮೂಲಕ ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಿದ್ದ ಶ್ರೀನಿವಾಸ ಮಾನೆ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಎನಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಶಾಸಕರಾಗಿದ್ದು, ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಗೆ ತಮ್ಮದೇ ಆದ ಕೊಡುಗೆಯನ್ನೂ ಕೊಟ್ಟಿದ್ದಾರೆ. ಜತೆಗೆ ಹೈಕಮಾಂಡ್ ಮಟ್ಟದಲ್ಲಿ ಸಂಪರ್ಕ ಹೊಂದಿರುವ ಮಾನೆಗೆ ಮರಾಠಾ ಹಾಗೂ ಯುವಕರ ಕೋಟಾದಡಿ ಸಚಿವ ಸ್ಥಾನ ಒಲಿಯಬಹುದು ಎನ್ನಲಾಗಿದೆ.
    ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಆಧಾರದ ಮೇಲೆ ಸಚಿವ ಸ್ಥಾನದ ಆಯ್ಕೆಯನ್ನೂ ಬದಲಾಗುವ ನಿರೀಕ್ಷೆಯಿದೆ. ಕೆಲವರು ಲಾಭಿ ನಡೆಸಿದ್ದರೆ, ಮತ್ತೆ ಕೆಲವರು ಸುಮ್ಮನಿದ್ದಾರೆ. ಜಿಲ್ಲೆಯ ಶಾಸಕರೇ ಸಚಿವರಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ.

    ಸ್ಪೀಕರ್ ಆಗ್ತಾರಾ ಯು.ಬಿ.ಬಿ. ?
    ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟ ಯು.ಬಿ.ಬಣಕಾರ ಹಿರೇಕೆರೂರಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮೂರನೇ ಬಾರಿಗೆ ಬಾರಿ ಶಾಸಕರಾಗಿ, ಒಂದು ಸಲ ಉಗ್ರಾಣ ನಿಗಮದ ಅಧ್ಯಕ್ಷರೂ ಆದ ಅನುಭವವಿರುವ ಯು.ಬಿ.ಬಣಕಾರಗೆ ಸಾದರ ಲಿಂಗಾಯತ ಸಮುದಾಯದ ಬಲ ಇದೆ. ಜತೆಗೆ ಇವರ ತಂದೆ ಜನತಾ ಪಕ್ಷದ ಅವಧಿಯಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾಗಿದ್ದರು. ತಂದೆಯವರಂತೆ ವರಿಗೂ ಸ್ಪೀಕರ್ ಸ್ಥಾನಮಾನ ಕೊಡಬೇಕು ಎಂಬುದು ಅವರ ಬೆಂಬಲಿಗರ ಒತ್ತಾಸೆಯಾಗಿದೆ. ಹೈಕಮಾಂಡ್ ಇವರಿಗೆ ಸ್ಪೀಕರ್ ಸ್ಥಾನಮಾನ ಕೊಡುತ್ತಾ ಕಾದು ನೋಡಬೇಕಿದೆ.

    ಸಲೀಂ ಅಹ್ಮದ್ ಹೆಸರು ಮುಂಚೂಣಿ
    ಪಕ್ಷ ಸಂಘಟನೆಯಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆ ಕೊಟ್ಟಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾವೇರಿ ಜಿಲ್ಲೆಯ ಉಸ್ತುವಾರಿಯೂ ಆಗಿದ್ದಾರೆ. ಈ ಹಿಂದೆ ಜಿಲ್ಲೆಯಿಂದ ಲೋಕಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರಾದರೂ ಜಿಲ್ಲೆಯಲ್ಲಿ ತಮ್ಮದೇ ಆದ ಸಂಘಟನೆ ಹೊಂದಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಚುನಾವಣೆಯಲ್ಲಿ ಸ್ಪರ್ಧಿಸಿ ವಿಧಾನ ಪರಿಷತ್ ಸದಸ್ಯರೂ ಆಗಿದ್ದಾರೆ. ಹೈಕಮಾಂಡ್‌ನ ಅಗ್ರ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸಲೀಂ ಅವರು ಕಾಂಗ್ರೆಸ್‌ಗೆ ಬಹುಮತ ಸಿಕ್ಕರೆ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರೂ ಆಗುತ್ತಾರೆ ಎಂಬ ಮಾತುಗಳು ಚುನಾವಣೆ ಅವಧಿಯಲ್ಲೇ ಕೇಳಿ ಬಂದಿದ್ದವು. ಹೀಗಾಗಿ, ಸಲೀಂಗೆ ಅದೃಷ್ಟ ಲಕ್ಷ್ಮೀ ಒಲಿಯುವ ಲಕ್ಷಣಗಳೂ ಗೋಚರಿಸುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts