More

    11 ಸಾವಿರ ಕೋಟಿ ರೂ. ವಾಪಸ್ ನೀಡಿ; ಲಿಡಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಒತ್ತಾಯ

    ಹಾವೇರಿ: ಪರಿಶಿಷ್ಟ ಜಾತಿ ಪರಿಶಿಷ್ಟ ಜನಾಂಗದ ಅಭಿವೃದ್ಧಿಗೆ ಮೀಸಲು ಇಟ್ಟಿದ್ದ ಅನುದಾನದಲ್ಲಿ 5 ಗ್ಯಾರಂಟಿ ಯೋಜನೆಗಳಿಗಾಗಿ 11 ಸಾವಿರ ಕೋಟಿ ರೂ.ಯನ್ನು ರಾಜ್ಯ ಸರ್ಕಾರ ಬಳಕೆ ಮಾಡಿಕೊಂಡಿದೆ. ಇದರಿಂದ ಸಮಾಜಕ್ಕೆ ಅನ್ಯಾಯವಾಗಿದೆ. ಈ ಕೂಡಲೇ 11 ಸಾವಿರ ಕೋಟಿ ರೂ. ಮೀಸಲು ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆಗೆ ಸರ್ಕಾರ ವರ್ಗಾವಣೆ ಮಾಡಬೇಕು ಎಂದು ಲಿಡಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಒತ್ತಾಯಿಸಿದರು.
    ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಮಂಜೂರು ಮಾಡಿದ್ದ 20 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ತಡೆ ನೀಡಲಾಗಿದೆ. ಎಸ್ಸಿ.ಪಿ. ಟಿಎಸ್‌ಪಿ ಯೋಜನೆಗಳು ಇದರಲ್ಲಿ ಸೇರಿದ್ದು, ಇದರಿಂದ ಈ ವರ್ಗದ ಅಭಿವೃದ್ಧಿ ಕುಂಠಿತವಾಗಲಿದೆ. ಇಷ್ಟೆಲ್ಲ ಆಗುತ್ತಿದ್ದರೂ ಸಚಿವ ಸಂಪುಟದಲ್ಲಿರುವ ಪರಿಶಿಷ್ಟ ಜನಾಂಗದ ಸಚಿವರಾದ ಡಾ.ಜಿ.ಪರಮೇಶ್ವರ, ಡಾ.ಎಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ ಹಾಗೂ ಪ್ರಿಯಾಂಕ ಖರ್ಗೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಮೀಸಲು ಕ್ಷೇತ್ರದಿಂದ ಗೆದ್ದು, ಮೀಸಲು ಜಾತಿಗೆ ಇರುವ ಅನುದಾನ ಬೇರೆಡೆ ವರ್ಗಾವಣೆಯಾಗಿದ್ದರೂ ಮೌನವಾಗಿರುವುದು ಸರಿಯಲ್ಲ ಎಂದರು.
    ಸುದ್ದಿಗೋಷ್ಠಿಯಲ್ಲಿ ಡಿಎಸ್‌ಎಸ್‌ನ ಉಡಚಪ್ಪ ಮಾಳಗಿ, ಶೆಟ್ಟಿ ವಿಭೂತಿ, ಮಂಜುನಾಥ ಮಡಿವಾಳರ, ಹನುಮಂತಪ್ಪ ಮಾದರ, ಹನುಮಂತಪ್ಪ ಸಿ.ಡಿ., ಕಾಳಪ್ಪ ಬಡಿಗೇರ, ಮಂಜುನಾಥ ವೇಷಗಾರ, ಇತರರಿದ್ದರು.
    ಕರಪತ್ರ ಜಾಗೃತಿ
    ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದ ಪ್ರಕಾರ ಒಳಮೀಸಲಾತಿ ಜಾರಿಗೊಳಿಸಬೇಕು. ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕು. ಸಮಾಜದ ಜನರು ಎಂತಹ ಸಂದರ್ಭ ಬಂದರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂಬ ಉದ್ದೇಶದಿಂದ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮನೆ ಮನೆಗಳಿಗೆ ತೆರಳಿ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಡಿ.ಎಸ್.ಮಾಳಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts