More

    ರಾಜ್ಯ ಬಜೆಟ್‌ನಲ್ಲಿ ರೈತರಿಗಿಲ್ಲ ಅನುದಾನ; ಕೋಡಿಹಳ್ಳಿ ಚಂದ್ರಶೇಖರ ಅಸಮಾಧಾನ

    ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌ನಲ್ಲಿ ರೈತರಿಗೆ ಯಾವುದೇ ಅನುಕೂಲ ಕಲ್ಪಿಸಿಲ್ಲ. ಕೃಷಿ, ತೋಟಗಾರಿಕೆ, ನೀರಾವರಿ, ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಿಗೆ ಕಡಿಮೆ ಅನುದಾನ ಹಂಚಿಕೆ ಮಾಡಿದ್ದಾರೆ. ಬಜೆಟ್ ನಂತರವಾದರೂ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಒತ್ತಾಯಿಸಿದರು.
    ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 85 ಸಾವಿರ ಕೋಟಿ ರೂ. ಸಾಲ ಮಾಡಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಇವರು ಸಾಲ ಮಾಡಿ, ಜನರ ಮೇಲೆ ಬಿಟ್ಟು ಹೋಗುತ್ತಾರೆ. ಸಾಲ ಮಾಡಿದ ಸರ್ಕಾರವೇ ತೀರಿಸಿ ಹೋಗುವ ವ್ಯವಸ್ಥೆ ಜಾರಿಯಾಗಬೇಕು ಎಂದು ಹೇಳಿದರು.
    ಪೆಟ್ರೋಲ್‌ಗೆ ಪರ್ಯಾಯವಾಗಿ ಎಥೆನಾಲ್ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ದೊಡ್ಡ ದೊಡ್ಡ ಉದ್ಯಮಿಗಳಿಂದ ಎಥೆನಾಲ್ ಉತ್ಪಾದಿಸಿದರೆ ರೈತರಿಗೆ ಯಾವುದೇ ಲಾಭವಾಗುವುದಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಉತ್ಪಾದಿಸುವಂತಾಗಬೇಕು. ರೈತರಿಗೆ ಎಥೆನಾಲ್ ಉತ್ಪಾದನೆಗೆ ಅವಕಾಶ ಕಲ್ಪಿಸಿ, ಅವರಿಂದ ನೇರವಾಗಿ ಖರೀದಿಸಿದರೆ ಅನ್ನದಾತರಿಗೆ ಅನುಕೂಲವಾಗುತ್ತದೆ ಎಂದರು.
    ಸರ್ಕಾರಕ್ಕೆ ಎಚ್ಚರಿಕೆ
    ರಾಜ್ಯದಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆದಿರುವುದು ಸ್ವಾಗತಾರ್ಹ. ಅದೇ ರೀತಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ವಾಪಸ್ ಪಡೆಯದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    ಸಮನ್ಸ್ ಜಾರಿ
    ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೆ.ಎಸ್.ಆರ್.ಟಿ.ಸಿ ನೌಕರರ ಹೋರಾಟ ನಡೆಸುವ ವೇಳೆಯಲ್ಲಿ ಅವರ ಹೋರಾಟ ಹಿಂಪಡೆಯಲು ನಾನು ಮಧ್ಯಸ್ಥಿಕೆ ವಹಿಸಿ, ಕೋಟ್ಯಂತರ ರೂಪಾಯಿ ಡೀಲ್ ಮಾಡಿದ್ದೇನೆ ಎಂದು ಖಾಸಗಿ ವಾಹಿನಿಯೊಂದು ನನ್ನನ್ನು ಖಳನಾಯಕ, ಮೋಸಗಾರ ಎಂಬ ಪದ ಬಳಕೆ ಮಾಡಿ ನನ್ನ ತೇಜೋವಧೆ ಮಾಡಿತ್ತು. ಆ ವಾಹಿನಿಯ ಆರೋಪಕ್ಕೆ ನ್ಯಾಯಾಲಯವು ಸಮನ್ಸ್ ನೀಡಿದೆ. ಇದು ನನ್ನ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ ಎಂದು ಚಂದ್ರಶೇಖರ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts