More

    ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಬಂಡಾಯ ಬೇಗುದಿ

    ಕೇಶವಮೂರ್ತಿ ವಿ.ಬಿ. ಹಾವೇರಿ
    ನಾಮಪತ್ರ ಸಲ್ಲಿಕೆಯ ಅವಧಿ ಮುಕ್ತಾಯವಾದರೂ ಕೂಡ ಬಂಡಾಯ ಶಮನ ಮಾಡುವಲ್ಲಿ ಕಾಂಗ್ರೆಸ್, ಬಿಜೆಪಿ ಹೈಕಮಾಂಡ್ ಹೆಚ್ಚು ಮುತುವರ್ಜಿ ವಹಿಸದ ಕಾರಣ ಜಿಲ್ಲೆಯ ಹಲವು ಕ್ಷೇತ್ರಗಳ ಟಿಕೆಟ್ ವಂಚಿತರು ಜೆಡಿಎಸ್, ಎನ್‌ಸಿಪಿ, ಕೆಆರ್‌ಪಿಪಿ ಹಾಗೂ ಪಕ್ಷೇತರ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಎರಡೂ ಪಕ್ಷಗಳ ಕೆಲ ರೆಬೆಲ್‌ಗಳು ಗುರುವಾರ ನಾಮಪತ್ರ ಸಲ್ಲಿಸುವ ಮೂಲಕ ಮುಖಂಡರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
    ರಾಣೆಬೆನ್ನೂರ, ಶಿಗ್ಗಾಂವಿ- ಸವಣೂರ, ಹಾವೇರಿ, ಹಾನಗಲ್ಲ ಕ್ಷೇತ್ರಗಳಲ್ಲಿ ಹಲವು ಟಿಕೆಟ್ ವಂಚಿತರು ಕಾಂಗ್ರೆಸ್, ಬಿಜೆಪಿ ತೊರೆದು ಇತರ ಪಕ್ಷಗಳು ಹಾಗೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
    ಹಾವೇರಿ ಮೀಸಲು ಕ್ಷೇತ್ರಕ್ಕೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸುತ್ತಿದ್ದಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಸೇರಿದಂತೆ ಇತರ ಟಿಕೆಟ್ ಆಕಾಂಕ್ಷಿಗಳೆಲ್ಲ ಸೇರಿ ಸಭೆ ನಡೆಸಿ ಟಿಕೆಟ್ ಬದಲಾಯಿಸದಿದ್ದಲ್ಲಿ ಬಂಡಾಯ ಖಚಿತ ಎಂದಿದ್ದರು. ಅದರಲ್ಲಿ ಈಗ ನಿವೃತ್ತ ಪೊಲೀಸ್ ಅಧಿಕಾರಿ ಶಿವಕುಮಾರ ತಾವರಗಿ, ಈರಪ್ಪ ಲಮಾಣಿ ಪಕ್ಷೇತರರಾಗಿ, ಚಂದನರಾಣಿ ದೊಡ್ಡಮನಿ ಕೆಆರ್‌ಪಿಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.
    ಬಿಜೆಪಿ ಅಭ್ಯರ್ಥಿಯಾಗಿ ತಹಶೀಲ್ದಾರ್ ಗವಿಸಿದ್ದಪ್ಪ ದ್ಯಾಮಣ್ಣವರ ಹೆಸರು ಘೋಷಣೆಯಾದ ಬಳಿಕ ಪಕ್ಷದಲ್ಲಿ ಹಲವು ಬೆಳವಣಿಗೆಗಳಾಗಿವೆ. ಗವಿಸಿದ್ದಪ್ಪರ ಬಿ-ಫಾರ್ಮ್‌ ಕೈತಪ್ಪಿಸಲು ಹಲವರು ಯತ್ನಿಸಿದರಾದರೂ ಫಲಪ್ರದವಾಗಿಲ್ಲ. ಹಾಗಾಗಿ, ಟಿಕೆಟ್ ವಂಚಿತ ವೆಂಕಟೇಶ ನಾರಾಯಣಿ, ಕೆ.ಬಿ.ಮಲ್ಲಿಕಾರ್ಜುನ, ಪರಮೇಶಪ್ಪ ಮೇಗಳಮನಿ, ಡಿ.ಎಸ್. ಮಾಳಗಿ, ರಾಮು ಮಾಳಗಿ, ಶ್ರೀಪಾದ ಬೆಟಗೇರಿ, ಬಿಜೆಪಿ ಪಕ್ಷದಿಂದ ಹಾಗೂ ಪಕ್ಷೇತರರಾಗಿ ಎರಡೆರೆಡು ನಾಮಪತ್ರ ಸಲ್ಲಿಸಿದ್ದಾರೆ.
    ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕೆಲ ಟಿಕೆಟ್ ವಂಚಿತರು ಅಸಮಾಧಾನ ಹೊರ ಹಾಕಿದ್ದರು. ಇಂಥವರನ್ನು ಕೆಲ ರಾಜ್ಯ, ಜಿಲ್ಲಾ ಮಟ್ಟದ ಮುಖಂಡರು ಕರೆಸಿ ಮನವೊಲಿಸಲು ಯತ್ನಿಸಿದರಾದರೂ ಯಶಸ್ವಿಯಾಗಿಲ್ಲ. ಹಾಗಾಗಿ, ಕೈ-ಕಮಲ ಪಕ್ಷಗಳಿಗೆ ಬಂಡಾಯದ ಬಿಸಿ ತಟ್ಟಿದ್ದು, ಸದ್ಯದ ಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂಥ ವಾತಾವರಣವಿದೆ. ಈ ಬಗ್ಗೆ ಎರಡೂ ಪಕ್ಷಗಳ ಮುಖಂಡರು ಗಂಭೀರವಾಗಿ ಚಿಂತನೆ ಮಾಡದಿದ್ದಲ್ಲಿ ಆಸ್ಪೋಟವಾಗುವ ಸಾಧ್ಯತೆ ಇದೆ. ಬಾಕ್ಸ್:
    ಸ್ವಾಮೇರ ಕನಸಿಗೆ ತಣ್ಣೀರು
    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಅವರು ಸಹ ಬೇಡ ಜಂಗಮ ಪ್ರಮಾಣ ಪತ್ರ ಪಡೆದು ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಟಿಕೆಟ್ ಕೈತಪ್ಪಿದ ಬಳಿಕ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದ್ದರು. ಆದರೆ, ಈ ನಡುವೆ ಜಿಲ್ಲಾಧಿಕಾರಿಗಳು ಹಿರೇಮಠರ ಬೇಡ ಜಂಗಮ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಆದೇಶಿಸಿದ್ದರು. ಈ ಆದೇಶಕ್ಕೆ ತಡೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಏ.18ರಂದು ವಿಚಾರಣೆ ನಡೆಸಿದ ಕೋರ್ಟ್ ಮೇ 4ಕ್ಕೆ ವಿಚಾರಣೆಯನ್ನು ಮುಂದೂಡಿ ಆದೇಶಿಸಿದೆ. ಬೇಡ ಜಂಗಮ ಪ್ರಮಾಣ ಪತ್ರದ ಗೊಂದಲ ಬಗೆಹರಿಯದ ಹಿನ್ನೆಲೆಯಲ್ಲಿ ಕಳ್ಳಿಹಾಳ ಸ್ವಾಮೇರ ಕನಸಿಗೆ ತಣ್ಣೀರು ಎರಚಿದಂತಾಗಿದೆ. ಆದರೆ, ಸ್ವಾಮೇರು ಕಾಂಗ್ರೆಸ್‌ನಲ್ಲೇ ಉಳಿಯುತ್ತಾರೋ, ಬಿಜೆಪಿಗೆ ಹೋಗುತ್ತಾರೋ, ಅಥವಾ ಮತ್ಯಾರಿಗೆ ಬೆಂಬಲ ಕೊಡುತ್ತಾರೋ ಎಂಬುದಿನ್ನೂ ಅಂತಿಮಗೊಂಡಿಲ್ಲ.
    ನೆಹರು ಓಲೇಕಾರ ತಟಸ್ಥ
    ಬಿಜೆಪಿ ಟಿಕೆಟ್ ಕೈತಪ್ಪುತ್ತಿದ್ದಂತೆ ಸಿಎಂ ವಿರುದ್ಧ ಕೆಂಡಾಮಂಡಲರಾಗಿದ್ದ ಶಾಸಕ ನೆಹರು ಓಲೇಕಾರ ಜೆಡಿಎಸ್‌ನಿಂದ ಅಥವಾ ಪಕ್ಷೇತರರಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಸಿಎಂ ವಿರುದ್ಧ ಅವಾಚ್ಯ ಶಬ್ದಗಳ ಬಳಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ನಡೆದ ಪ್ರತಿಭಟನೆ ಬಳಿಕ ಬೆಂಬಲಿಗರ ಸಭೆ ನಡೆಸಿದ ಓಲೇಕಾರ ಸದ್ಯ ತಟಸ್ಥರಾಗಿದ್ದಾರೆ. ‘ನಾನು ಬಿಜೆಪಿ ಪಕ್ಷದಲ್ಲೇ ಉಳಿಯುತ್ತೇನೆ. ಆದರೆ, ಯಾರಿಗೂ ಬೆಂಬಲ ಸೂಚಿಸುವುದಿಲ್ಲ’ ಎಂದು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
    ಶಿಗ್ಗಾಂವಿ ಕಾಂಗ್ರೆಸ್ ಅತಂತ್ರ
    ಶಿಗ್ಗಾಂವಿ- ಸವಣೂರ ಕ್ಷೇತ್ರದ ಕಾಂಗ್ರೆಸ್ ಅತಂತ್ರ ಸ್ಥಿತಿಗೆ ತಲುಪಿದೆ. ಟಿಕೆಟ್ ವಂಚಿತರಾದ ಶಶಿಧರ ಯಲಿಗಾರ ಜೆಡಿಎಸ್‌ನಿಂದ, ಷಣ್ಮುಖ ಶಿವಳ್ಳಿ ಪಕ್ಷೇತರ ಹಾಗೂ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಬಂಡಿವಡ್ಡರ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಿನಯ ಕುಲಕರ್ಣಿ ಅಥವಾ ಸಲೀಂ ಅಹ್ಮದ್ ಅವರಿಗೆ ಟಿಕೆಟ್ ಕೊಟ್ಟರೆ ಬೆಂಬಲಿಸುವೆ ಎಂದಿದ್ದ ಮಾಜಿ ಶಾಸಕ ಅಜೀಮ್‌ಪೀರ್ ಖಾದ್ರಿ ನಿಲುವು ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.
    ಆರ್.ಶಂಕರ, ಸಂತೋಷ ಪಾಟೀಲ ರೆಬೆಲ್
    ರಾಣೆಬೆನ್ನೂರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್.ಶಂಕರ್ ಎನ್‌ಸಿಪಿಯಿಂದ, ಸಂತೋಷಕುಮಾರ ಪಾಟೀಲ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಹಾನಗಲ್ಲ ಕಾಂಗ್ರೆಸ್ ಟಿಕೆಟ ಬಯಸಿದ್ದ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಪಕ್ಷ ತೊರೆದು ಜೆಡಿಎಸ್ ಹುರಿಯಾಳಾಗಿದ್ದಾರೆ. ಹಾನಗಲ್ಲ ಬಿಜೆಪಿಯಲ್ಲಿ ಬಂಡಾಯ ಭೀತಿ ಶಮನಗೊಂಡಿದೆ. ಬ್ಯಾಡಗಿ, ಹಿರೇಕೆರೂರಲ್ಲಿ ಸದ್ಯಕ್ಕೆ ರೆಬೆಲ್‌ಗಳು ತಣ್ಣಗಾದಂತೆ ಗೋಚರಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts