More

    ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಶಿಫಾರಸ್ಸು ಮಾಡಿದ ಕಾರ್ಯಕರ್ತರು; ಒಬ್ಬರು ಮೂವರ ಹೆಸರು ಸೂಚಿಸಿದರು

    ಹಾವೇರಿ: ನಗರದ ಕಾಗಿನೆಲೆ ರಸ್ತೆಯ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಶುಕ್ರವಾರ ಇದೇ ಮೊದಲ ಬಾರಿಗೆ ಜಿಲ್ಲೆಯ ಆರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಗೌಪ್ಯ ಮತದಾನ ಪ್ರಕ್ರಿಯೆಯಲ್ಲಿ 600ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡು ಮತದಾನ ಮಾಡಿದರು. ತಮ್ಮ ಕ್ಷೇತ್ರದ ಮೂವರ ಹೆಸರನ್ನು ಪಕ್ಷಕ್ಕೆ ಶಿಫಾರಸ್ಸು ಮಾಡಿದರು.
    ಸಚಿವ ಶ್ರೀರಾಮುಲು, ರಾಜ್ಯ ಕಾರ್ಯದರ್ಶಿ ಭಾರತಿ ಮುಗದುಮ್, ರಾಜ್ಯ ಪ್ರಕೋಷ್ಠಗಳ ಸಂಚಾಲಕ ಭಾನುಪ್ರಕಾಶ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಅಧ್ಯಕ್ಷತೆಯಲ್ಲಿ ಮತದಾನ ಪ್ರಕ್ರಿಯೆ ನೆರವೇರಿತು. ಆರು ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಮತದಾನ ನಡೆಯಿತು. ಬ್ಯಾಲೆಟ್ ಪೇಪರ್ ಮೇಲೆ ಮೂವರ ಹೆಸರು ಬರೆದು ಮತಪೆಟ್ಟಿಗೆಯಲ್ಲಿ ಹಾಕಿದರು. ಜಿಲ್ಲೆಯ 699 ಪದಾಧಿಕಾರಿಗಳ ಪೈಕಿ ಶೇ.98ರಷ್ಟು ಮತದಾನ ನಡೆಯಿತು.
    ಪ್ರತಿ ವಿಧಾನಸಭಾ ಕ್ಷೇತ್ರದ ಮಾತೃ ಘಟಕದ ಪದಾಧಿಕಾರಿಗಳು ಜಿಲ್ಲೆಯ ಮಾತೃ ಘಟಕದಲ್ಲಿರುವ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು, ಆಯಾ ವಿಧಾನಸಭಾ ಕ್ಷೇತ್ರದಲ್ಲಿರುವ ಜಿಲ್ಲಾ ಮೊರ್ಚಾಗಳ ಅಧ್ಯಕ್ಷರು, ಕ್ಷೇತ್ರದ ಮಂಡಲ ಮೋರ್ಚಾಗಳ ಅಧ್ಯಕ್ಷರು, ರಾಜ್ಯ ಪ್ರಕೋಷ್ಟಗಳ ಸಂಚಾಲಕರು, ಸಹ ಸಂಚಾಲಕರು, ರಾಜ್ಯ ಮೋರ್ಚಾಗಳ ಪದಾಧಿಕಾರಿಗಳು, ರಾಜ್ಯ ಮಾತೃ ಘಟಕದ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಶಕ್ತಿ ಕೇಂದ್ರಗಳ ಪ್ರಮುಖರು, ಮಾಜಿ ಜಿಪಂ, ತಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಾಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಮಾಜಿ ಶಾಸಕರು, ಮಾಜಿ ಸಂಸದರು, ವಿಧಾನ ಪರಿಷತ್ ಸದಸ್ಯರು, ಮಾಜಿ ವಿಧಾನ ಪರಿಷತ್ ಸದಸ್ಯರು ಗುಪ್ತ ಮತದಾನ ಮಾಡಿದರು.
    ಮತ ಪೆಟ್ಟಿಗೆಯನ್ನು ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ರಾಜ್ಯ ತಂಡದ ಮೂಲಕ ಕೇಂದ್ರ ತಂಡಕ್ಕೆ ರವಾನಿಸಿದರು. ಕೇಂದ್ರ ತಂಡ ಇದನ್ನು ಪರಿಶೀಲಿಸಲಿದೆ.
    ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಾ ಇಳಿಗೇರ, ಶಶಿಧರ ಹೊಸಳ್ಳಿ, ರುದ್ರೇಶ ಚಿನ್ನಣ್ಣನವರ, ಸಂತೋಷ ಆಲದಕಟ್ಟಿ, ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts