More

    ಸಿಂಗ್ ಕೈಯಲ್ಲಿ ಭಿಕ್ಷಾಪಾತ್ರೆ, ಮೋದಿ ಕೈಯಲ್ಲಿ ಅಕ್ಷಯ ಪಾತ್ರೆ !; 10 ವರ್ಷದ ಬಳಿಕವೂ ದೇಶದಲ್ಲಿ ಬಿಜೆಪಿ ಪರ ಅಲೆ; ಬಿ.ವೈ.ವಿಜಯೇಂದ್ರ ಘರ್ಜನೆ

    ಹಾವೇರಿ: ಮನಮೋಹನ್‌ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಬೇರೆ ದೇಶಕ್ಕೆ ಹೋದರೆ ಭಿಕ್ಷಾಪಾತ್ರೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ಅಕ್ಷಯ ಪಾತ್ರೆ ಇದೆ. ಹಾಗಾಗಿ, ದೊಡ್ಡ ದೊಡ್ಡ ರಾಷ್ಟ್ರಗಳ ಅಧ್ಯಕ್ಷರು ಮೋದಿ ಅವರಿಗಾಗಿ ಕಾಯುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘರ್ಜಿಸಿದರು.
    ಯುವ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ಕೊಳ್ಳಿ ಪಾಲಿಟೆಕ್ನಿಕ್ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ‘ಯುವ ಸಮಾವೇಶ’ದಲ್ಲಿ ಅವರು ಮಾತನಾಡಿದರು.
    ಮೋದಿ ಅವರ 10 ವರ್ಷಗಳ ಆಡಳಿತದ ನಂತರವೂ ಕೇಂದ್ರ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ. ಆಡಳಿತ ಪರವಾದ ವಾತಾವರಣವಿದೆ. 10 ವರ್ಷಗಳಲ್ಲಿ ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೆ ದೇಶಸೇವೆ ಮಾಡಿದ್ದಾರೆ ಮೋದಿ. ತಾಯಿ ಮೃತಪಟ್ಟಾಗ ಅಂತ್ಯಸಂಸ್ಕಾರ ಮುಗಿಸಿ 2 ಗಂಟೆ ನಂತರ ದೇಶದ ಬಗ್ಗೆ ಚಿಂತನೆ ನಡೆಸಿ, ಕರ್ತವ್ಯಕ್ಕೆ ಮರಳುತ್ತಾರೆ. ಉಗ್ರಗಾಮಿಗಳ ಸ್ವರ್ಗವಾಗಿದ್ದ ಕಾಶ್ಮೀರದಲ್ಲಿ 370 ಕಾಯ್ದೆ ರದ್ದುಗೊಳಿಸಿ, ಉಗ್ರಗಾಮಿ ಕೃತ್ಯಗಳಿಗೆ ಕಡಿವಾಣ ಹಾಕಿದ್ದಾರೆ. ಜಗತ್ತಿನ ಐದನೇ ಆರ್ಥಿಕ ರಾಷ್ಟ್ರವನ್ನಾಗಿಸಿದ್ದಾರೆ ಎಂದರು.
    ಮೋದಿ ಅವರ ಆಡಳಿತ ಭ್ರಷ್ಟಾಚಾರರಹಿತ ಆಡಳಿತವಾಗಿದೆ. ಉತ್ತಮ ಆಡಳಿತ ಕೊಡುತ್ತಿದ್ದಾರೆ. ಕೋವಿಡ್ ವೇಳೆ ಇಡೀ ಜಗತ್ತು ತತ್ತರಿಸಿದ ಸಂದರ್ಭದಲ್ಲಿ ದೇಶದ 80 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ, ಲಸಿಕೆ ಕೊಟ್ಟು ಸಲಹಿದ್ದು ಮೋದಿ ಸರ್ಕಾರ. ಈಗಲೂ ಮೋದಿ ಅವರ ಅಕ್ಕಿಯ ಚೀಲದ ಮೇಲೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ತಮ್ಮ ಫೋಟೊ ಹಾಕಿಕೊಂಡು ಪುಗಸಟ್ಟೆ ಪ್ರಚಾರ ಪಡೆಯುತ್ತಿದೆ. ಬಜೆಟ್‌ನಲ್ಲಿ ಎಸ್‌ಸಿ ಎಸ್‌ಟಿ ಜಾತಿಗೆ ಮೀಸಲಿಟ್ಟಿದ್ದ 25 ಸಾವಿರ ಕೋಟಿಯನ್ನು ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದೆ. ಇದೊಂದು ರೈತ ವಿರೋಧಿ, ದಲಿತರ ವಿರೋಧಿ, ಮಹಿಳೆ, ಯುವಕರ ವಿರೋಧಿ ಸರ್ಕಾರ ಎಂದು ಟೀಕಿಸಿದರು.
    ಕಿಸಾನ್ ಸಮ್ಮಾನ್ ಯೋಜನೆಯಡಿ ಕೊಡುತ್ತಿದ್ದ 4 ಸಾವಿರ ಹಣವನ್ನು ಕಾಂಗ್ರೆಸ್ ನಿಲ್ಲಿಸಿತು. ವಿದ್ಯಾನಿಧಿ ಸ್ಕಾಲರ್‌ಶಿಪ್ ನಿಲ್ಲಸಿತು. ಬಡ ವಿದ್ಯಾರ್ಥಿಗೆ ಸ್ಕಾಲರ್‌ಶಿಪ್ ಕೊಡುತ್ತಿಲ್ಲ. ವಿದ್ಯುತ್ ದರ ಹೆಚ್ಚಿಸಿತು. ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹಧನ ನಿಲ್ಲಿಸಿದೆ. ಸ್ಟ್ಯಾಂಪ್ ದರ ಹೆಚ್ಚಿಸಿದೆ. ಶೇ.30ರಿಂದ 40ರಷ್ಟು ಬಸ್ ದರ ಹೆಚ್ಚಿಸಿದೆ. ಟಿಸಿ ಅಖವಡಿಸಲು 25 ಸಾವಿರ ರೂ. ಇದ್ದ ದರ ಈಗ 3 ಲಕ್ಷಕ್ಕೆ ಏರಿದೆ ಎಂದರು.
    ಮಾಜಿ ಸಿಎಂ, ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾತನಾಡಿ, ಹಾವೇರಿ ಮತ್ತು ಗದಗ ಜಿಲ್ಲೆಗಳಾಗಿ ರಚನೆಯಾಗಿದ್ದು ಮಾಜಿ ಸಚಿವ ಸಿ.ಎಂ.ಉದಾಸಿ ಅವರ ಹೋರಾಟದಿಂದ. ಹಾವೇರಿ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ತುಂಗಾ ಮೇಲ್ದಂಡೆ ಯೋಜನೆ ಹಾಗೂ ಗದಗನಲ್ಲಿ ಸಿಂಗಟಾಲೂರು ಏತ ನೀರಾವರಿ ಸೇರಿದಂತೆ ಅನೇಕ ನೀರಾವರಿ ಯೋಜನೆ ತಂದಿದ್ದು ಬಿ.ಎಸ್.ಯಡಿಯೂರಪ್ಪನವರ ಸರ್ಕಾರ. ಆಗ ನಾನು ಜಲಸಂಪನ್ಮೂಲ ಸಚಿವನಾಗಿದ್ದೆ. ಬಿಜೆಪಿ ಸರ್ಕಾರ ಜಿಲ್ಲೆಯಲ್ಲಿ ಜಾರಿಗೊಳಿಸಿದ್ದ 8 ಏತ ನೀರಾವರಿ ಯೋಜನೆಗಳು ಶೇ.90ರಷ್ಟು ಪ್ರಗತಿಯಾಗಿದೆ. ಮೆಡಿಕಲ್ ಕಾಲೇಜು, ಮೆಗಾ ಮಾರುಕಟ್ಟೆ, ಮೆಗಾ ಡೇರಿ, ಕೈಗಾರಿಕಾ ವಸಾಹತು, ಹಾವೇರಿ ವಿವಿ, ಮತ್ತಿತರ ಅನೇಕ ಕೊಡುಗೆಗಳನ್ನು ನೀಡಿದ್ದೇನೆ.
    ಮಾಜಿ ಸಚಿವರಾದ ಬಿ.ಸಿ.ಪಾಟೀಲ, ಮನೋಹರ ತಹಶೀಲ್ದಾರ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರೂಪಾಕ್ಷಪ್ಪ ಬಳ್ಳಾರಿ, ಪ್ರಮುಖರಾದ ಡಾ.ಬಸವರಾಜ ಕೇಲಗಾರ, ಭೋಜರಾಜ ಕರೂದಿ, ಗವಿಸಿದ್ದಪ್ಪ ದ್ಯಾಮಣ್ಣವರ, ಶೋಭಾ ನಿಸ್ಸೀಮಗೌಡ್ರ, ಭಾರತಿ ಜಂಬಗಿ, ಭಾರತಿ ಅಳವಂಡಿ, ಸಿದ್ದರಾಜ ಕಲಕೋಟಿ, ಮಲ್ಲಿಕಾರ್ಜುನ ಬಾಳಿಕಾಯಿ, ಅಭಿಷೇಕ ಗುಡಗೂರ, ಭರತ ಬೊಮ್ಮಾಯಿ, ಸೃಷ್ಟಿ ಪಾಟೀಲ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
    ರೈತರ ಬಗ್ಗೆ ಕನಿಕರವಿಲ್ಲ
    ಭೀಕರ ಬರಗಾಲವಿದ್ದರೂ ಸಿಎಂ ಸಿದ್ದರಾಮಯ್ಯ ರೈತರ ಬಗ್ಗೆ ಕನಿಕರ ತೋರಿಸುತ್ತಿಲ್ಲ. 850ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಪರಿಹಾರ ಕೊಟ್ಟಿಲ್ಲ. ಬೇರೆ ಯಾವ ರಾಜ್ಯದ ಸಿಎಂಗಳೂ ಮೋದಿಯನ್ನು ದೂಷಿಸುತ್ತಿಲ್ಲ. ರೈತರಿಗೆ ಬರ ಪರಿಹಾರ ಕೊಡದೆ ಕೇಂದ್ರದ ಅನುದಾನಕ್ಕಾಗಿ ಕಾಯುತ್ತಿರುವ ಏಕೈಕ ಸಿಎಂ ಸಿದ್ದರಾಮಯ್ಯ. ನೆರ, ಪ್ರವಾಹ ಬಂದಾಗ ರಾಜ್ಯಾದ್ಯಂತ ಯಡಿಯೂರಪ್ಪ ಪ್ರವಾಸ ಮಾಡಿ ಮನೆ ಬಿದ್ದವರಿಗೆ 5 ಲಕ್ಷ ರೂ. ಪರಿಹಾರ ನೀಡಿದ್ದರು. ಮಾತೃ ಹೃದಯದ ಸಿಎಂ ಯಡಿಯೂರಪ್ಪ. ಸಿದ್ದರಾಮಯ್ಯನವರು ಮೊಸಳೆ ಕಣ್ಣೀರು ಹಾಕುವ ಸಿಎಂ ಎಂದು ಕುಟುಕಿದರು.
    ಮೂರು ಲಕ್ಷ ಮತಗಳಿಂದ ಬೊಮ್ಮಾಯಿ ಗೆಲುವು
    ದಿನೇ ದಿನೇ ಬಿಜೆಪಿ ಅಲೆಯಿಂದ ಕಾಂಗ್ರೆಸ್‌ನವರು ಕಂಗೆಟ್ಟಿದ್ದಾರೆ. ಫಲಿತಾಂಶ ಬಂದ ನಂತರ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಧೂಳೀಪಟವಾಗಲಿದೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಿಸಿದ, ಜಿಲ್ಲೆಗೆ ಅನೇಕ ನೀರಾವರಿ ಯೋಜನೆ, ಮೆಡಿಕಲ್ ಕಾಲೇಜು ತಂದಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೂರು ಲಕ್ಷ ಮತಗಳಿಂದ ಗೆಲ್ಲಲಿದ್ದಾರೆ. ರಾಜ್ಯದ 28 ಸ್ಥಾನಗಳೂ ಬಿಜೆಪಿ- ಜೆಡಿಎಸ್ ಪಾಲಾಗುವುದು ಖಚಿತ. ಕಾಂಗ್ರೆಸ್ 20 ಸ್ಥಾನ ಗೆದ್ದರೆ ಅದು ಜಗತ್ತಿನ 8ನೇ ಅದ್ಭುತವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದರು.
    ಕೋಟ್:
    ಹಾವೇರಿಯ ಒಬ್ಬ ಶಾಸಕನನ್ನು ಮಂತ್ರಿ ಮಾಡಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ಸೋನಿಯಾಗಾಂಧಿ ಹೇಳಿದಂತೆ ಅವರ ಸುತ್ತಲೂ ಕತ್ತಲೇ ಇದೆ. ತುಕಡೆ ತುಕಡೆ ಗ್ಯಾಂಗ್ ನಿಮ್ಮ ಬಳಿ ಇರುವಾಗ ಅವರ ಸುತ್ತ ಬೆಳಕು ಬರಲು ಸಾಧ್ಯವಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿರುವೆ. ನನ್ನ ಅನುಭವ ಧಾರೆ ಎರೆದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುತ್ತೇನೆ. ನಿಮ್ಮ ಮತಕ್ಕೆ ಗೌರವ ತರುತ್ತೇನೆ.
    – ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ, ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts