More

    ಏಡ್ಸ್ ಪ್ರಿವೆನ್ಷನ್ ಸೊಸೈಟಿ ನೌಕರರ ಮುಷ್ಕರ 19ರಿಂದ; ಕೆಸಾಪ್ಸ್ ಸಿಬ್ಬಂದಿಯನ್ನು ಆರೋಗ್ಯ ಇಲಾಖೆಗೆ ವಿಲೀನಗೊಳಿಸಿ; ಅಕ್ಷತಾ ಕೆ.ಸಿ.

    ಹಾವೇರಿ: ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಗುತ್ತಿಗೆ ನೌಕರರನ್ನು ಆರೋಗ್ಯ ಇಲಾಖೆಯ ಸಮಾನಾಂತರ ಹುದ್ದೆಗಳಿಗೆ ವಿಲೀನಗೊಳಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಫೆ.19ರಿಂದ ಅನಿರ್ದಿಷ್ಠಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಗುತ್ತಿಗೆ ನೌಕರರ ಸಂಘದ ಗೌರವಾಧ್ಯಕ್ಷೆ ಅಕ್ಷತಾ ಕೆ.ಸಿ. ಹೇಳಿದರು.
    ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 2002ರಿಂದ ಏಡ್ಸ್ ನಿಯಂತ್ರಣಕ್ಕಾಗಿ ಸೊಸೈಟಿ ಆರಂಭವಾಯಿತು. ಅಂದಿನಿಂದ ಈವರೆಗೆ ಸುಮಾರು 400ಕ್ಕೂ ಅಧಿಕ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ ಜಿಲ್ಲೆಯಲ್ಲಿ ವರ್ಷಕ್ಕೆ 150ಕ್ಕೂ ಅಧಿಕ ಸಂಖ್ಯೆಯ ಎಚ್‌ಐವಿ ಪೀಡಿತರು ಪತ್ತೆಯಾಗುತ್ತಿದ್ದರು. ಸಿಬ್ಬಂದಿ ರೋಗಿಗಳಿಗೆ ನಿರಂತರ ಚಿಕಿತ್ಸೆ, ಜನರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಇದೀಗ ಜಿಲ್ಲೆಯಲ್ಲಿ 20ಕ್ಕಿಂತ ಕಡಿಮೆ ರೋಗಿಗಳು ಪತ್ತೆಯಾಗುತ್ತಿದ್ದಾರೆ ಎಂದರು.
    ಹೀಗೆ ಎಚ್‌ಐವಿ ನಿಯಂತ್ರಣಕ್ಕಾಗಿ ಜೀವವನ್ನೇ ಪಣ ಇಟ್ಟು ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಆರೋಗ್ಯ ಇಲಾಖೆ ಕಸಕ್ಕಿಂತ ಕಡೆಯಾಗಿ ನೋಡುತ್ತಿದೆ. ಸಮಸ್ಯೆ ಬಗೆಹರಿಸುವ ಕುರಿತು ನೂರಾರು ಬಾರಿ ಮನವಿ ಮಾಡಿದರೂ ಬಗೆಹರಿಸುತ್ತಿಲ್ಲ. ಕನಿಷ್ಠ ಪಿಎಫ್, ಇಎಸ್‌ಐ ಸೌಲಭ್ಯವನ್ನೂ ಕಲ್ಪಿಸಿಲ್ಲ. ಹಾಗಾಗಿ, ಈ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಕೈಬಿಡಬೇಕು. ಕೆಸಾಪ್ಸ್ ಸಿಬ್ಬಂದಿಯನ್ನು ಆರೋಗ್ಯ ಇಲಾಖೆಗೆ ವಿಲೀನಗೊಳಿಸಬೇಕು. ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡಬೇಕು. ಹರಿಯಾಣ, ಪಂಜಾಬ್ ಮಾದರಿಯಲಿ ಎಚ್‌ಆರ್ ಪಾಲಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಫೆ.16ರಂದು ಈ ಕುರಿತು ಆರೋಗ್ಯ ಇಲಾಖೆ ಸಭೆ ನಡೆಸುತ್ತಿದ್ದು, ಈ ವೇಳೆ ಸಮಸ್ಯೆ ಬಗೆಹರಿಸದಿದ್ದಲ್ಲಿ 19ರಿಂದ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    ಸಂಘದ ಉಪಾಧ್ಯಕ್ಷ ಮಂಜುನಾಥ ಕೆರೂಡಿ, ನಿರ್ದೇಶಕ ಮಾರುತಿ ಭಜಂತ್ರಿ, ಜಿಲ್ಲಾಧ್ಯಕ್ಷ ಜಯಪ್ಪ ಬಿದರಿ, ಇತರರಿದ್ದರು.
    86 ಕೇಂದ್ರ ಬಂದ್ ಹುನ್ನಾರ
    ಈ ನಡುವೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 86 ಕೇಂದ್ರಗಳನ್ನು ಹಾಗೂ ಜಿಲ್ಲೆಯ 13 ಕೇಂದ್ರಗಳಲ್ಲಿ ನಾಲ್ಕು ಕೇಂದ್ರಗಳನ್ನು ಮುಚ್ಚಲು ಮುಂದಾಗಿದ್ದಾರೆ. ಇದರಿಂದ ಅಲ್ಲಿನ ಸಿಬ್ಬಂದಿ ಬೀದಿ ಪಾಲಾಗಲಿದ್ದಾರೆ ಎಂದು ಹಿರಿಯ ಆಪ್ತಸಮಾಲೋಚಕ ಸುಧಾಕರ ದೈವಜ್ಞ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts