More

    ಆಧುನಿಕ ವ್ಯವಸ್ಥೆ ರೈತರ ಬದುಕು ಕೆಡಿಸುತ್ತಿದೆ; ಸಾಲದ ಸುಳಿಗೆ ಸಿಲುಕುತ್ತಿದ್ದಾರೆ; ಕನ್ನೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆ

    ಹಾವೇರಿ: ಹೆಚ್ಚು ಉತ್ಪನ್ನ, ಹೆಚ್ಚು ಲಾಭ, ವಾಣಿಜ್ಯ ಬೆಳೆ, ಶ್ರೀಮಂತಿಕೆ ಮಾರ್ಗ ಮುಂತಾದ ಭ್ರಮೆಗಳಿಂದಾಗಿ ರೈತರು ಸಾಲದ ಬಲೆಗೆ ಬೀಳುತ್ತಿದ್ದಾರೆ. ಆಧುನಿಕ ವ್ಯವಸ್ಥೆ ನಮ್ಮ ರೈತರ ಬದುಕನ್ನು ಹದಗೆಡಿಸುತ್ತಿದೆ. ಅವರಲ್ಲಿ ಹೊಸ ಭ್ರಮೆಗಳನ್ನು ಹುಟ್ಟಿಸುತ್ತಿದೆ ಎಂದು ಕೊಲ್ಲಾಪುರದ ಕನ್ನೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
    ತಾಲೂಕಿನ ಅಗಡಿ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಜೀವನ ದರ್ಶನ ಪ್ರವಚನದ ಭಾನುವಾರದ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಇತ್ತೀಚೆಗೆ ಶ್ರಮ ಸಂಸ್ಕೃತಿ ಮರೆಯಾಗುತ್ತಿದೆ. ಕಾರ್ಪೊರೇಟ್ ಸಂಸ್ಕೃತಿ ಕೃಷಿಯನ್ನು ಆವರಿಸಿದೆ. ಇಂದು ಕೃಷಿಯನ್ನು ನಂಬಿ ರೈತರು ಜೀವನವನ್ನು ನಡೆಸಲಾಗುತ್ತಿಲ್ಲ. ಜಮೀನಿಗೆ ರಾಸಾಯನಿಕ ಬಳಸುವುದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.
    ದೇಶದ ಆರೋಗ್ಯ ರೈತರ ಬೆಳೆಗಳನ್ನು ಅವಲಂಬಿಸಿದೆ. ಕೃಷಿ ಕಾಯಕ ಹಾಗೂ ಪ್ರಸಾದ ಪ್ರಜ್ಞೆಯೊಂದಿಗೆ ದಾಸೋಹ ಭಾವದಿಂದ ಶರಣರು ಬದುಕಿ ತೋರಿಸಿದರು. ಶರಣ ಸಂಸ್ಕೃತಿ ಮೂಲವೇ ರೈತಾಪಿ ಸಂಸ್ಕೃತಿಯಾಗಿದೆ. ಕೃಷಿ ಸಂಸ್ಕೃತಿಯೇ ಎಲ್ಲ ಸಂಸ್ಕೃತಿ ಮತ್ತು ನಾಗರಿಕತೆಗಳ ಮೂಲವಾಗಿದೆ ಎಂದು ಹೇಳಿದರು.
    ಸಾವಯವ ಕೃಷಿ ಸಂಪನ್ಮೂಲ ವ್ಯಕ್ತಿ ನಿಜಲಿಂಗಪ್ಪ ಬಸೇಗೆಣ್ಣಿ ಮಾತನಾಡಿ, ಹೊಸ ನಾಗರಿಕತೆ ದೈಹಿಕ ಶ್ರಮ ತಪ್ಪಿಸಿಕೊಳ್ಳುವುದನ್ನು ಕಲಿಸುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ಶಿಕ್ಷಣ ಪದ್ಧತಿ. ಹೆಚ್ಚು ಬೆಳೆಯುವ ಹುಚ್ಚಿನಲ್ಲಿ ಮಿತಿಮೀರಿ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ಬಂಜರಾಗತೊಡಗಿದೆ. ಸಿರಿಧಾನ್ಯಗಳ ಬಳಕೆ ಹಾಗೂ ಸಾವಯವ ಕೃಷಿ ಬಗ್ಗೆ ಆಸಕ್ತಿ ಮೂಡಬೇಕು. ನಮ್ಮ ಆರೋಗ್ಯ ಅಡುಗೆ ಮನೆಯಲ್ಲಿದೆ. ಆಹಾರ ಔಷಧ ಆಗಬೇಕು. ಔಷಧ ಆಹಾರವಾಗಬಾರದುದರು ಎಂದರು.
    ಸಾವಯವ ಕೃಷಿಕ ಚಿನ್ನಪ್ಪ ಬಸೇಗೆಣ್ಣಿ ಮಾತನಾಡಿ ಕನ್ನೇರಿ ಮಠದ ಪೂಜ್ಯರ ಕೃಷಿ ಪದ್ಧತಿಯನ್ನು ನಾನು ಅಳವಡಿಸಿಕೊಂಡು ಬೇರೆಯವರಿಗೂ ಸಾವಯವ ಕೃಷಿ ಹರಿವು ಮೂಡಿಸುತ್ತಿದ್ದೇನೆ. ಕನ್ನೇರಿ ಮಠಕ್ಕೆ ಹೋಗಿ ನಾನು ಪ್ರಭಾವಿತನಾಗಿದ್ದೇನೆ. ಸಾವಯವ ಕೃಷಿಗೆ ಸಾವಿಲ್ಲ, ಇದು ರೈತನನ್ನು ಬದುಕಿಸುತ್ತದೆ ಮಾತ್ರವಲ್ಲದೆ ಗಿಡ-ಮರಗಳನ್ನು ಬದುಕಿಸುತ್ತಿದೆ ಎಂದರು.
    ಕಮಿಟಿ ಅಧ್ಯಕ್ಷ ಬಸಪ್ಪ ಬಳಲಕೊಪ್ಪ ಅಧ್ಯಕ್ಷತೆ ವಹಿಸಿ ವಹಿಸಿದ್ದರು. ಗುರುಸಿದ್ಧ ಸ್ವಾಮೀಜಿ, ಗುರುಲಿಂಗ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಕಮಿಟಿಯ ಶಿವಾನಂದ ಬಳೆಗಾರ, ಕಲವೀರಪ್ಪ ಮಠಪತಿ, ಶಿವು ನೀಲಪ್ಪನವರ, ಮಂಜು ಕಡ್ಲಿ, ಅನಿಲ ಗೌಳಿ, ಹೇಮಂತ ಸಣ್ಣಪ್ಪನವರ, ಮಂಜು ಡಂಬಜಮತ್ತೂರ, ಕೇಶವ ಅಕ್ಕಿ, ಜಗದೀಶ ಬಡಿಗೇರ ಇತರರಿದ್ದರು.
    ಮಂಜಯ್ಯ ಹಿರೇಮಠ ಸ್ವಾಗತಿಸಿದರು. ಮಹಾಂತೇಶ ಮೂಲಿಮನಿ ನಿರೂಪಿಸಿದರು. ನಾಗರಾಜ ಬಸೇಗೆಣ್ಣಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts