More

    ಕೋವಿಡ್ ಪರೀಕ್ಷೆ ವರದಿಗೆ ವಾರಗಟ್ಟಲೆ ಕಾಯ್ಬೇಕು

    ಮಂಗಳೂರು/ಉಡುಪಿ: ಕರೊನಾ ಸೋಂಕು ಏರುಗತಿಯಲ್ಲಿ ಸಾಗುತ್ತಿರುವ ಹೊತ್ತಿನಲ್ಲಿಯೇ ಸೋಂಕು ದೃಢಪಡಿಸುವ ಆರ್‌ಟಿ-ಪಿಸಿಆರ್ ಪರೀಕ್ಷೆ ವರದಿ ವಿಳಂಬವಾಗುತ್ತಿರುವುದು ರೋಗದ ವಿರುದ್ಧದ ಹೋರಾಟಕ್ಕೆ ಸವಾಲಾಗಿ ಪರಿಣಮಿಸಿದೆ.

    ಸಾಮಾನ್ಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆ ವರದಿ 24ರಿಂದ 48 ಗಂಟೆ ಅವಧಿಯಲ್ಲಿ ದೊರೆಯಬೇಕು. ಆದರೆ ಈಗ ವಾರ ಕಳೆದರೂ ರಿಪೋರ್ಟ್‌ಗಳು ಬರುತ್ತಿಲ್ಲ. ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ಶೀಘ್ರ ರೋಗ ಪತ್ತೆ ಅತ್ಯಂತ ಮುಖ್ಯವಾಗಿದೆ. ವರದಿ ವಿಳಂಬವಾಗುತ್ತಿರುವುದರಿಂದ ರೋಗಿಗಳನ್ನು ಗುರುತಿಸಿ ಪ್ರತ್ಯೇಕವಾಗಿರಿಸುವುದು ಕಷ್ಟವಾಗುತ್ತಿದ್ದು, ಸೋಂಕು ವೃದ್ಧಿಗೂ ಕಾರಣವಾಗುತ್ತಿದೆ. ಅಲ್ಲದೆ, ಸೋಂಕಿತರು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂಬ ಆತಂಕವಿದೆ.

    ‘ಈಗ ದಿನಂಪ್ರತಿ 5ರಿಂದ 6 ಸಾವಿರ ಪರೀಕ್ಷೆಗಳು ನಡೆಯುತ್ತಿರುವುದರಿಂದ ವರದಿ ವಿಳಂಬವಾಗುತ್ತಿದೆ. ವ್ಯವಸ್ಥೆ ಮೇಲ್ದರ್ಜೆಗೇರಿಸುವ ಪ್ರಯತ್ನ ಸಾಗಿದೆ. ವಾರದೊಳಗೆ ನಿರೀಕ್ಷಿತ ಫಲಿತಾಂಶ ದೊರೆಯಬಹುದು’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್.

    ಪ್ರಸಕ್ತ ದಕ್ಷಿಣ ಕನ್ನಡ ಜಿಲ್ಲೆಯ 8 ವೈದ್ಯಕೀಯ ಕಾಲೇಜು ಹಾಗೂ ವೆನ್ಲಾಕ್ ಕೋವಿಡ್ ಆಸ್ಪತ್ರೆಗಳಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳು ನಡೆಯುತ್ತಿವೆ. ವೆನ್ಲಾಕ್‌ನಲ್ಲಿ ದಿನಂಪ್ರತಿ 2,500 ಪರೀಕ್ಷೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 300ರಷ್ಟು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸ್ವಾಬ್ ಸಂಗ್ರಹ ಹೆಚ್ಚುತ್ತಿರುವುದರಿಂದ ಹೆಚ್ಚುವರಿ ಮಾದರಿಗಳ ಪರೀಕ್ಷೆ ದಿನದಿಂದ ದಿನಕ್ಕೆ ಬಾಕಿಯಾಗುತ್ತಿದೆ.

    ಉಡುಪಿ ಜಿಲ್ಲೆಯಲ್ಲಿ ದಿನಕ್ಕೆ ಮೂರ್ನಾಲ್ಕು ಸಾವಿರ ಸ್ಯಾಂಪಲ್ ಬರುತ್ತಿದ್ದು, ಜಿಲ್ಲಾಸ್ಪತ್ರೆ ಲ್ಯಾಬ್‌ನಲ್ಲಿ 1500 ಸ್ಯಾಂಪಲ್ ಪರೀಕ್ಷಿಸಲಾಗುತ್ತದೆ. ಹೀಗಾಗಿ ವರದಿ ವಿಳಂಬವಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ಹೇಳುತ್ತಾರೆ.

    ಜಿಲ್ಲೆಯ ಪ್ರಾಥಮಿಕ ಅರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಬೇಗ ರಿಪೋರ್ಟ್ ಬೇಕಾದಲ್ಲಿ ಜಿಲ್ಲಾಸ್ಪತ್ರೆಗೆ ಹೋಗಿ ಎಂದು ಅಲ್ಲಿನ ವೈದ್ಯಕೀಯ ಸಿಬ್ಬಂದಿ ಹೇಳುತ್ತಿರುವುದರಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಜನದಟ್ಟಣೆ ಉಂಟಾಗುತ್ತಿದೆ.

    ಖಾಸಗಿ ಲ್ಯಾಬ್‌ಗಳಿಂದಲೂ ವಿಳಂಬ? ದ.ಕ. ಜಿಲ್ಲೆಯ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಆರ್‌ಟಿ- ಪಿಸಿಆರ್ ಟೆಸ್ಟ್‌ಗೆ ಒಳಗಾದವರ ಸ್ವಾಬ್ ಖಾಸಗಿ ಆಸ್ಪತ್ರೆಗಳ ಲ್ಯಾಬ್‌ಗಳಿಗೂ ರವಾನೆಯಾಗುತ್ತದೆ. ಇದರ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಆದರೂ ವರದಿ ಸಿಗಲು ನಾಲ್ಕೈದು ದಿನ ಬೇಕು. ನೇರವಾಗಿ ಖಾಸಗಿ ಆಸ್ಪತ್ರೆ ಲ್ಯಾಬ್‌ಗೆ ಹೋಗಿ ಹಣ ಪಾವತಿಸಿ ಟೆಸ್ಟ್ ಮಾಡಿಸಿದರೆ 24 ಗಂಟೆಗಳಲ್ಲಿ ವರದಿ ಕೈಸೇರುತ್ತದೆ. ಯಾಕೆ ಹೀಗೆ ಎನ್ನುವ ಪ್ರಶ್ನೆಗೆ ಅಧಿಕಾರಿಗಳಿಂದ ಉತ್ತರ ಸಿಗುತ್ತಿಲ್ಲ.

    ಪೋರ್ಟಲ್‌ಗೆ ಅಪ್ಲೋಡ್ ಆಗುತ್ತಿಲ್ಲ: ಆರ್‌ಟಿ-ಪಿಸಿಆರ್ ಟೆಸ್ಟ್ ವರದಿ ಬಂದರೂ ಕೋವಿಡ್ ಪೋರ್ಟಲ್‌ಗೆ ಅಪ್ಲೋಡ್ ಆಗುತ್ತಿಲ್ಲ. ಇದರಿಂದಾಗಿ ಟೆಸ್ಟ್ ಫಲಿತಾಂಶ ರೋಗಿಗಳಿಗೆ ತಿಳಿಯದೆ ಮತ್ತಷ್ಟು ಅವಾಂತರಗಳು ನಡೆಯುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವೆನ್ಲಾಕ್ ಕೋವಿಡ್ ಲ್ಯಾಬ್ ನೋಡಲ್ ಅಧಿಕಾರಿ ಶರತ್, ಕೆಲಸದ ಒತ್ತಡದಿಂದ ವಿಳಂಬ ಆಗುತ್ತಿರುವುದು ಹೌದು; ಆದರೆ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುತ್ತಿದ್ದು, ಎರಡು-ಮೂರು ದಿನಗಳಲ್ಲಿ ಸಮಸ್ಯೆ ದೂರವಾಗಲಿದೆ ಎಂದು ತಿಳಿಸಿದ್ದಾರೆ.

    ಪೂಲಿಂಗ್ ಪದ್ಧತಿ: ಸಾಮಾನ್ಯವಾಗಿ ಪೂಲಿಂಗ್ ಪದ್ಧತಿಯಲ್ಲಿ ಪರೀಕ್ಷೆ ವೇಗವಾಗಿ ನಡೆಯುತ್ತದೆ. ಈ ಪದ್ಧತಿಯಲ್ಲಿ ಐದು ಮಾದರಿಗಳನ್ನು ಜತೆಯಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದರಲ್ಲಿ ಎಲ್ಲವೂ ನೆಗೆಟಿವ್ ವರದಿ ಬಂದರೆ ಒಮ್ಮೆಲೆ ಐದು ಪರೀಕ್ಷೆ ವರದಿ ಪೂರ್ಣಗೊಳ್ಳುತ್ತದೆ. ಯಾವುದಾದರೂ ಒಬ್ಬರ ವರದಿ ಪಾಸಿಟಿವ್ ಬಂದರೆ ಎಲ್ಲ ಐವರ ಮಾದರಿಗಳನ್ನು ಪ್ರತ್ಯೇಕವಾಗಿ ಪರೀಕ್ಷೆಗೆ ಒಳಪಡಿಸಬೇಕು. ಈಗ ಪಾಸಿಟಿವ್ ಪ್ರಕರಣಗಳು ಅಧಿಕ ಪ್ರಮಾಣದಲ್ಲಿ ಬರುತ್ತಿರುವುದರಿಂದ ಪ್ರತ್ಯೇಕವಾಗಿ ಪರೀಕ್ಷೆಗೆ ಒಳಪಡಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ.

    ಕರೊನಾ ಪಾಸಿಟಿವ್ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ಪತ್ತೆಯಾಗಲು ಆರಂಭವಾದ ಬಳಿಕ ಆರ್‌ಟಿ-ಪಿಸಿಆರ್ ಪರೀಕ್ಷೆ ವರದಿ ತಡವಾಗುತ್ತಿವೆ. ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಕಾರ್ಯೋನ್ಮುಖವಾಗಿವೆ. ಕೆಎಂಸಿ ಮೈಕ್ರೋ ಬಯಾಲಾಜಿ ವಿಭಾಗದ ಸಹಯೋಗದಲ್ಲಿ ವ್ಯವಸ್ಥೆ ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆಯುತ್ತಿದ್ದು, ಶೀಘ್ರದಲ್ಲೇ ಪರೀಕ್ಷೆ ವರದಿ ಸಕಾಲದಲ್ಲಿ ಲಭ್ಯವಾಗಲಿದೆ.

    ಡಾ.ರಾಜೇಂದ್ರ ಕೆ.ವಿ
    ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

    ಆರ್‌ಟಿ-ಪಿಸಿಆರ್ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಲಾಗುತ್ತಿದ್ದು, ದಿನವಹಿ 2,500ದಿಂದ 3,000ವರೆಗೆ ಟೆಸ್ಟ್ ನಡೆಸಲಾಗುತ್ತಿದೆ. ಹೀಗಾಗಿ ವರದಿ ವಿಳಂಬವಾಗಿತ್ತು. ಪ್ರಸಕ್ತ ಚಿಕ್ಕಮಗಳೂರು ಪ್ರಯೋಗಾಲಯಕ್ಕೂ ಮಾದರಿಗಳನ್ನು ಕಳುಹಿಸಲಾಗುತ್ತಿದೆೆ.

    ಜಿ.ಜಗದೀಶ್
    ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts