More

    ಹಾವನೂರ ಗ್ರಾಮದೇವತೆ ಜಾತ್ರೆ

    ಗುತ್ತಲ: ವರ್ಷದಲ್ಲಿ ಎರಡು ದಿನ, 13 ಗಂಟೆ ಕಾಲ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾವನೂರ ಗ್ರಾಮದೇವತೆ ಜಾತ್ರೆ ಫೆ. 4 ಮತ್ತು 5ರಂದು ವೈಭವದಿಂದ ಜರುಗಲಿದೆ.

    ರಾಜ್ಯದ ಜಾತ್ರೆಗಳಲ್ಲೇ ವಿಶೇಷವಾಗಿರುವ ಹಾವನೂರ ಗ್ರಾಮದೇವಿ ಜಾತ್ರೆಯಲ್ಲಿ ದೇವಿಯು ಶಾಂತರೂಪಿಯಾಗಿ ಗಜಗೌರಿ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾಳೆ. ಅವರಾತ್ರಿ ಅಮಾವಾಸ್ಯೆ ತರುವಾಯ ಬರುವ ಶುಕ್ರವಾರ ಗಡಿ ಜಾತ್ರೆ ನಡೆಯುತ್ತದೆ. ಬಳಿಕ ಬರುವ ಮಂಗಳವಾರ (ಫೆ. 4) ಮಧ್ಯರಾತ್ರಿ 12ರ ನಂತರ ಪೆಟ್ಟಿಗೆಯಿಂದ ದೇವಿಯನ್ನು ಹೊರತೆಗೆದು ಅಲಂಕಾರ ಮಾಡಿ ಬುಧವಾರ (ಫೆ. 5ರಂದು) ಬೆಳಗಿನ ಜಾವ 4 ಗಂಟೆ ಸುಮಾರಿಗೆ ಚೌತಮನಿ ಕಟ್ಟಿಯಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ನಂತರ ದೇವಿಗೆ ಉಡಿ ತುಂಬುವುದು, ಹಣ್ಣು, ಕಾಯಿ ನೈವೇದ್ಯ ನಡೆಯುತ್ತದೆ. ಸಂಜೆ 5ಕ್ಕೆ ಮೆರವಣಿಗೆ ಮೂಲಕ ಗಡಿಗೆ ಕಳುಹಿಸಲಾಗುತ್ತದೆ. ದೇವಿಯ ದರ್ಶನಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ.

    ಹಿನ್ನೆಲೆ: ಹಾವನೂರ ಗ್ರಾಮದೇವಿಯ ಮೂಲ ಶಿವಮೊಗ್ಗ ಜಿಲ್ಲೆ ತೆಲಗಡ್ಡಿ ಗ್ರಾಮ. ಆರಂಭದಲ್ಲಿ ಈ ಗ್ರಾಮದಲ್ಲಿ ರಕ್ತಬೂದಾಳ (ರಕ್ತ ಚಂದನ) ಕಟ್ಟಿಗೆಯಲ್ಲಿ ದೇವಿ ನಿರ್ವಣಗೊಂಡು ಅದೇ ಊರಲ್ಲಿ ಸ್ಥಾಪನೆಯಾಗುತ್ತಾಳೆ. ಇದರಿಂದ ಅಲ್ಲಿನ ಜನರು ರಕ್ತಕಾರಿ ಮೃತಪಡುತ್ತಿದ್ದರಿಂದ ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ತುಂಗಭದ್ರಾ ನದಿಯಲ್ಲಿ ಬುಟ್ಟಿಯೊಂದರಲ್ಲಿ ದೇವಿ ಮೂರ್ತಿಯನ್ನಿಟ್ಟು ತೇಲಿ ಬಿಡಲಾಗುತ್ತದೆ. ಇದೇ ವೇಳೆ ಹಾವನೂರನ್ನು ಆಳುತ್ತಿದ್ದ ಹನುಮಂತರಾಯನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡ ಶ್ರೀದೇವಿಯು, ನದಿಯಲ್ಲಿ ಬರುವುದಾಗಿಯೂ, ಮೊದಲ ಪೆಟ್ಟಿಗೆ ಬಿಟ್ಟು, 2ನೇ ಪೆಟ್ಟಿಗೆಯಲ್ಲಿ ಬರುವ ನನ್ನನ್ನು ಹಾವನೂರಿನಲ್ಲಿ ಪ್ರತಿಷ್ಠಾಪಿಸುವಂತೆ ಹೇಳುತ್ತಾಳೆ. ಇದನ್ನು ಹನುಮಂತರಾಯನು ಆಸ್ಥಾನ ಗುರುಗಳಾದ ನೆಗಳೂರ ಸಂಸ್ಥಾನ ಹಿರೇಮಠದ ಕರ್ತೃ ಗುರುಶಾಂತೇಶ್ವರರಿಗೆ ತಿಳಿಸುತ್ತಾನೆ. ಆಗ ಗುರುಗಳು, ತಾನು ಸ್ವತಃ ಅಲ್ಲಿಗೆ ಬರುವುದಾಗಿ ಹನುಮಂತರಾಯನಿಗೆ ತಿಳಿಸಿ, ನಸುಕಿನ ಜಾವ ನದಿಯಲ್ಲಿ ಬರುವ 2ನೇ ಪೆಟ್ಟಿಗೆ ಪಡೆದುಕೊಳ್ಳುತ್ತಾರೆ. ನಂತರ ದೇವಿಯನ್ನು ಗುರುಶಾಂತೇಶ್ವರರ ಸಲಹೆ ಮೇರೆಗೆ ಹನುಮಂತರಾಯ ನದಿ ಪಕ್ಕದಲ್ಲೇ ಪ್ರತಿಷ್ಠಾಪಿಸಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts