More

  60 ಶಾಲಾ ಕಟ್ಟಡಗಳು ಅತಂತ್ರ ಸ್ಥಿತಿಗೆ

  ಹಾಸನ: ಶಿಥಿಲಾವಸ್ಥೆ ತಲುಪಿದ ಶಾಲಾ ಕಟ್ಟಡಗಳಿಗೆ ಮರುಜೀವ ನೀಡುವ ಯೋಜನೆ ಸರ್ಕಾರ ಬದಲಾವಣೆಯಿಂದ ನಿರ್ಲಕ್ಷೃಕ್ಕೆ ಒಳಪಟ್ಟಿದ್ದು, ಜಿಲ್ಲೆಯ 60 ಶಾಲಾ ಕಟ್ಟಡಗಳು ಅತಂತ್ರ ಸ್ಥಿತಿಗೆ ತಲುಪಿವೆ.
  ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರು ಹಳೆಯ ಕಾಲದ ಹಾಗೂ ಶಿಥಿಲಾವಸ್ಥೆ ತಲುಪಿದ ಶಾಲಾ ಕಟ್ಟಡಗಳನ್ನು ನೆಲಸಮಗೊಳಿಸಿ, ತಕ್ಷಣವೇ ಹೊಸ ಕಟ್ಟಡ ಕಟ್ಟಿಸಬೇಕೆಂದು ನಿರ್ದೇಶಿಸಿದ್ದರು. ಸಚಿವರ ನಿರ್ದೇಶನದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲೆಯ 60 ಶಾಲಾ ಕಟ್ಟಡಗಳಿಗೆ ತಲಾ 10.60 ಲಕ್ಷ ರೂ.ಗಳಂತೆ ಯೋಜನಾ ವೆಚ್ಚ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಶಾಲಾ ಕಟ್ಟಡ ಕಾಮಗಾರಿಗೆ ಅನುದಾನ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಶಿಕ್ಷಕರು ಅನುದಾನ ದೊರೆಯದೆ ಪರಿತಪಿಸುತ್ತಿದ್ದಾರೆ.
  ನೂತನ ಕಟ್ಟಡದ ಆಸೆಯಿಂದ ಹಳೆಯ ಕಟ್ಟಡ ನೆಲಸಮಗೊಳಿಸಿದ ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು ಪಾಠ ಮಾಡಲು ಸೂಕ್ತ ಸ್ಥಳಕ್ಕಾಗಿ ಪರಿತಪಿಸುತ್ತಿದ್ದಾರೆ. ಶಾಲೆಯ ಅಡುಗೆ ಕೊಠಡಿ, ಬಾಡಿಗೆ ಮನೆ, ದೇವಸ್ಥಾನ ಹಾಗೂ ಮರದ ಕೆಳಗೆ ಕುಳಿತು ಪಾಠ ಮಾಡಬೇಕಾದ ದುಸ್ಥಿತಿ ಎದುರಾಗಿದೆ. ಈ ಸಂಬಂಧ ಶಾಲಾ ಶಿಕ್ಷಕರು ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
  ಅನುದಾನ ಬಿಡುಗಡೆಯಾಗಿಲ್ಲ: ಹಾಸನ ತಾಲೂಕಿನ ಮೇದರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ನೆಲಸಮಗೊಳಿಸಿ ಎರಡು ವರ್ಷ ಕಳೆದರೂ ಕಟ್ಟಡ ಭಾಗ್ಯ ದೊರೆತಿಲ್ಲ. 10 ಮಕ್ಕಳಿರುವ ಶಾಲೆ ಇದಾಗಿದ್ದು, ಅಡುಗೆ ಕೊಠಡಿಯಲ್ಲಿ ಪಾಠ ನಡೆಯುತ್ತಿದೆ. ಆ ಕಟ್ಟಡವೂ ಬೀಳುವ ಸ್ಥಿತಿಯಲ್ಲಿದ್ದು, ಮಳೆ ಗಾಳಿ ಜೋರಾದರೆ ಶಾಲೆಗೆ ರಜೆ ನೀಡಿ ಮನೆಗೆ ಕಳುಹಿಸುವ ಪರಿಪಾಠ ಮುಂದುವರಿದಿದೆ. ಅಡುಗೆ ಮಾಡಬೇಕಿರುವ ಸ್ಥಳದಲ್ಲಿ ವಿದ್ಯಾಭ್ಯಾಸ ನಡೆಯುತ್ತಿರುವುದರಿಂದ ಅಡುಗೆ ಕಾರ್ಯಕರ್ತರು ಮನೆಯಲ್ಲೇ ಬಿಸಿಯೂಟ ತಯಾರಿಸಿಕೊಂಡು ಬರುತ್ತಿದ್ದಾರೆ. ಎರಡು ವರ್ಷಗಳಿಂದ ಬಯಲಿನಲ್ಲೇ ಪಾಠ ಕೇಳಬೇಕಾದ ಅನಿವಾರ್ಯತೆ ಮಕ್ಕಳಿಗೆ ಎದುರಾಗಿದೆ.
  ಹಿಂಬರಹವೇ ಉತ್ತರ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಿಕ್ಷಣ ಇಲಾಖೆಯ ಸರ್ಕಾರಿ ಶಾಲೆಗಳಿಗೆ ಬಿಡುಗಡೆ ಮಾಡಲು ಯಾವುದೇ ಅನುದಾನ ಇರುವುದಿಲ್ಲ ಎಂಬ ಹಿಂಬರಹವೇ ಶಿಕ್ಷಕರಿಗೆ ಉತ್ತರವಾಗಿದೆ.
  1918ರಲ್ಲಿ ಸ್ಥಾಪನೆಯಾದ ಹಾಸನದ ಉತ್ತರ ಬಡಾವಣೆ ಸರ್ಕಾರಿ ಶಾಲೆ ಅವ್ಯವಸ್ಥೆ ಹೇಳತೀರದಾಗಿದೆ. ಶಾಲೆಗೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ವರ್ಷದಿಂದ ಆಗ್ರಹಿಸಿದರೂ ಪ್ರಯೋಜನವಾಗಿಲ್ಲ. ಪಟ್ಟಿ ಮಾಡಿರುವ 60 ಶಾಲೆಗಳಲ್ಲಿ ಈ ಶಾಲೆಯ ಹೆಸರಿದ್ದರೂ ನಿಷ್ಪ್ರಯೋಜಕ. ಕಟ್ಟಡದ ಹೆಂಚುಗಳು ಮುರಿದಿದ್ದು, ಬಾಗಿಲುಗಳು ರೂಪ ಕಳೆದುಕೊಂಡಿವೆ. ಕಟ್ಟಡ ಇವತ್ತೋ ನಾಳೆಯೋ ಬೀಳುವ ಹಂತಕ್ಕೆ ತಲುಪಿದೆ.
  90 ಕಟ್ಟಡ ಕಾಮಗಾರಿ ಪೂರ್ಣ: ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಜಿಲ್ಲೆಯ 435 ಶಾಲೆಗಳ ಅಭಿವೃದ್ಧಿಗೆ ಸರ್ಕಾರ 8.62 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಈಗಾಗಲೇ 90 ಕಟ್ಟಡ ಕಾಮಗಾರಿ ಪೂರ್ಣಗೊಂಡಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಕಟ್ಟಡ ಕಾಮಗಾರಿ ವಹಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಸ್.ಪ್ರಕಾಶ್ ಹೇಳಿದರು.

  ಶಿಥಿಲಗೊಂಡಿರುವ ಕಟ್ಟಡಗಳ ದುರಸ್ತಿಗೆ ಸಂಬಂಧಿಸಿದಂತೆ 60 ಶಾಲೆಗಳ ಪಟ್ಟಿ ತಯಾರಿಸಿ ಕಳುಹಿಸಲಾಗಿತ್ತು. ಆದರೆ ಅನುದಾನ ಬಿಡುಗಡೆಯಾಗದ ಕಾರಣ ಕೆಲಸ ಪ್ರಾರಂಭಿಸಿಲ್ಲ. ತಾಲೂಕಿನ ಮೇದರಹಳ್ಳಿಯಲ್ಲಿ ಕಟ್ಟಡ ಸಮಸ್ಯೆಯಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿರುವ ವಿಚಾರ ತಿಳಿದುಬಂದಿಲ್ಲ. ಕೂಡಲೇ ಅಧಿಕಾರಿಗಳ ಗಮನಕ್ಕೆ ತಂದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು.
  ಕೆ.ಎಸ್.ಪ್ರಕಾಶ್, ಡಿಡಿಪಿಐ

  ಹೊಸ ಕಟ್ಟಡದ ಆಸೆಗೆ ಬಿದ್ದು ಹಳೆಯ ಕಟ್ಟಡ ಕೆಡವಿ ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಿದ್ದೇವೆ. ಮೇದರಹಳ್ಳಿ ಶಾಲೆಯಲ್ಲಿ ಮರದ ಕೆಳಗೆ ಕೂತು ಪಾಠ ಕೇಳುತ್ತಿದ್ದಾರೆ. ಜೋರು ಮಳೆ ಅಥವಾ ಗಾಳಿ ಬಂದರೆ ತರಗತಿ ಮೊಟಕುಗೊಳಿಸಿ ಮನೆಗೆ ಹೋಗಬೇಕು. ಅಡುಗೆ ಮನೆಯಲ್ಲಿ ಒಂದೊಂದು ದಿನ ಪಾಠ ನಡೆಯುತ್ತದೆ. ಸರ್ಕಾರಿ ಶಾಲೆಗಳನ್ನು ರಕ್ಷಿಸದಿದ್ದರೆ ಬಡ ಮಕ್ಕಳು ಶೈಕ್ಷಣಿಕವಾಗಿ ತೊಂದರೆ ಅನುಭವಿಸುತ್ತಾರೆ. ಶಾಸಕರು ಹಾಗೂ ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು.
  ಸೋಮೇಗೌಡ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ, ಮೇದರಹಳ್ಳಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts