More

    ಇಲ್ಲಿ ಪ್ರೇಮ ವಿವಾಹಗಳಿಗಿಲ್ಲ ಯಾವುದೇ ಕಡಿವಾಣ..!

    ಹಾಸನ: ಪ್ರೇಮಿಗಳಿಬ್ಬರು ಮದುವೆಯಾಗಲು ಸಿದ್ಧರಿದ್ದಾರೆ, ಅದಕ್ಕೆ ಎರಡೂ ಮನೆಯ ಸಂಬಂಧಿಕರು ವಿರೋಧಿಸುತ್ತಾರೆ, ಆದರೆ ನವ ಜೋಡಿಗಳಿಗೆ ನಾಲ್ಕಾರು ಸ್ನೇಹಿತರಿದ್ದಾರೆಯೇ ? ಅಷ್ಟಿದ್ದರೆ ಸಾಕು ಯಾವುದೇ ಅಡೆತಡೆ ಇಲ್ಲದೆ ವಿವಾಹವಾಗುತ್ತದೆ!

    ಹೌದು, ಹೊಳೆನರಸೀಪುರ ತಾಲೂಕು ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಈ ತರಹದ ಮದುವೆಗಳು ನೆರವೇರುತ್ತಿದ್ದು ಯಾರು ಬೇಕಾದರೂ ನವ ಜೀವನಕ್ಕೆ ನಾಂದಿ ಹಾಡಬಹುದು ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಹದಿನೈದು ದಿನಗಳಲ್ಲಿ ಈ ತರಹದ ಆರು ಮದುವೆಗಳು ಇಲ್ಲಿ ನಡೆದಿವೆ. ಗ್ರಾಮದಿಂದ ಐದು ಕಿ.ಮೀ. ದೂರದಲ್ಲಿರುವ ಬೆಟ್ಟಕ್ಕೆ ಸಾರ್ವಜನಿಕರು ಬರುವುದು ಅಪರೂಪ, ಚಿರತೆ ಕಾಟ ಹೆಚ್ಚಿರುವ ಕಾರಣ ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಬರುತ್ತಿಲ್ಲ. ಕದ್ದುಮುಚ್ಚಿ ಆಗುವ ವಿವಾಹಗಳಿಗೆ ಸ್ಥಳ ಪ್ರಶಸ್ತ ಎನ್ನುವಂತಾಗಿದೆ.

    ಮುಜರಾಯಿ ಇಲಾಖೆಗೆ ಸೇರಿರುವ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಮದುವೆಗಳು ಹೆಚ್ಚಾಗಿ ನೆರವೇರುತ್ತವೆ. ದೇಗುಲದ ಪ್ರಧಾನ ಅರ್ಚಕರು ಪ್ರತಿ ಜೋಡಿಯ ಸಂಪೂರ್ಣ ವಿವರ ದಾಖಲಿಸಿಕೊಂಡು ವಿವಾಹಕ್ಕೆ ಸಮಯ ನಿಗದಿಪಡಿಸುತ್ತಾರೆ. ಪ್ರೇಮ ಮದುವೆಗಳಿಗೂ ಇಲ್ಲಿ ಅವಕಾಶವಿದ್ದು ಸೂಕ್ತ ದಾಖಲೆ ಹಾಗೂ ಸಂಬಂಧಿಕರನ್ನು ಕರೆತರುವುದು ಕಡ್ಡಾಯವಾಗಿದೆ. ಆದರೆ ಇದ್ಯಾವುದು ಇಲ್ಲದ ಅದೆಷ್ಟೋ ಜೋಡಿಗಳು ಅರ್ಚಕರ ಕಣ್ತಪ್ಪಿಸಿ ಬೆಟ್ಟದ ಯಾವುದೋ ಜಾಗದಲ್ಲಿ ನಿಂತು ಮಾಂಗಲ್ಯ ಧಾರಣೆಯಂತಹ ಶಾಸ್ತ್ರ ನೆರವೇರಿಸಿಕೊಳ್ಳುತ್ತಾರೆ. ಪ್ರೇಮಿಗಳನ್ನು ಒಂದು ಮಾಡಿದ ಖುಷಿಯಲ್ಲಿ ಸ್ನೇಹಿತರು ಮಾಡುವ ಮೋಜು ಮಸ್ತಿಗೆ ಬೆಟ್ಟ ಸಾಕ್ಷಿ ಎಂಬಂತಾಗಿದೆ.

    ಪ್ರೇಮ ವಿವಾಹಕ್ಕೆ ಸ್ನೇಹಿತರ ಸಾಥ್:
    ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವಾಗ ಉಂಟಾಗುವ ಸ್ನೇಹ ಪ್ರೇಮಕ್ಕೆ ತಿರುಗಿ ಮದುವೆಗೆ ತಿರುಗಿದಾಕ್ಷಣ ಯುವಕ ಹಾಗೂ ಯುವತಿಯರಿಗೆ ನೆನಪಾಗುವುದು ಸ್ನೇಹಿತರು. ರಾಜ್ಯದ ಯಾವುದೋ ಜಿಲ್ಲೆಯ ಹುಡುಗ ಮತ್ತ್ಯಾವುದೋ ಜಿಲ್ಲೆಯ ಹುಡುಗಿಯನ್ನು ವರಿಸುವುದು ಎಂದರೆ ಕಷ್ಟದ ಕೆಲಸ. ಇದಕ್ಕೆ ಜಾತಿ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಅಡ್ಡಬರುವುದರಿಂದ ಅವರು ಕುಟುಂಬಸ್ಥರ ಒಪ್ಪಿಗೆ ಪಡೆಯದೆ ಮದುವೆಗೆ ಮುಂದಾಗುತ್ತಾರೆ. ಅದಕ್ಕೆ ಒಂದಷ್ಟು ಸ್ನೇಹಿತರು ಸಾಥ್ ನೀಡುತ್ತಾರೆ. ಎರಡು ತಿಂಗಳ ಹಿಂದೆ ರಂಗನಾಥಸ್ವಾಮಿ ಬೆಟ್ಟದಲ್ಲಿ ಆಗಿರುವ ಮದುವೆಯೇ ಇದಕ್ಕೆ ತಾಜಾ ನಿದರ್ಶನವಾಗಿದೆ. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರೇಮಿಗಳು ಮದುವೆಯಾಗಿ ಈಗ ಸಂಸಾರ ನಡೆಸಲಾಗದೆ ತೊಂದರೆಗೆ ಸಿಲುಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts