More

    ಹರಪನಹಳ್ಳಿಯಲ್ಲಿ ತಂಪು ಪಾನೀಯ ಹಣ್ಣುಗಳಿಗೆ ಮೊರೆ

    ಬಿ.ವೈ. ದುರುಗೇಶ್

    ಹರಪನಹಳ್ಳಿ: ದಿನ ಕಳೆದಂತೆ ಏರುತ್ತಿರುವ ತಾಪಮಾನದಿಂದ ಜನರು ತತ್ತರಿಸುತ್ತಿದ್ದಾರೆ. ಹೀಗಾಗಿ ತಂಪು ಪಾನೀಯ, ಐಸ್‌ಕ್ರೀಂ ಹಾಗೂ ಕಲ್ಲಂಗಡಿ, ಕರಬೂಜು, ಎಳನೀರಿಗೆ ಮೊರೆ ಹೋಗಿದ್ದಾರೆ.

    ತಾಲೂಕಿನಲ್ಲಿ ಎರಡ್ಮೂರು ವರ್ಷಗಳಿಂದ ನಿರೀಕ್ಷಿತ ಮಳೆಯಾಗದೆ ಬರ ಆವರಿಸಿದೆ. ಈ ಬಾರಿ ಉಷ್ಣಾಂಶದ ಪ್ರಮಾಣ ಹೆಚ್ಚಿದ್ದು, 40 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ. ಇದರಿಂದ ಜನರು ಆಘಾತಕ್ಕೆ ಒಳಗಾಗುವಂತಾಗಿದೆ.

    ಅನಿವಾರ್ಯ ಕಾರಣಗಳಿಗೆ ಹೊರಬರುವ ಜನರು ಕೆಂಡದಂತಿರುವ ಬಿಸಿಲಿಗೆ ಬೇಸತ್ತು, ತಂಪು ಪಾನೀಯಗಳ ಸೇವಿಸಿ ದಣಿವು ನಿವಾರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಕಲ್ಲಂಗಡಿಗೆ ಭಾರಿ ಬೇಡಿಕೆ ಬಂದಿದ್ದು, ಪಟ್ಟಣದಲ್ಲಿ ಪ್ರತಿ ನಿತ್ಯ 180 ರಿಂದ 200ರವರೆಗೆ ಕಲ್ಲಂಗಡಿಗಳನ್ನು ಮಾರಾಟವಾಗುತ್ತಿದೆ. ತೂಕದ ಮೇಲೆ ದರ ನಿಗದಿಪಡಿಸುತ್ತಿದ್ದು, ಒಂದು ಕಲ್ಲಂಗಡಿಗೆ 100 ರಿಂದ 150 ರೂ. ಆಗಲಿದೆ.

    ತಳ್ಳುವಗಾಡಿ ಹಾಗೂ ರಸ್ತೆ ಬದಿಯಲ್ಲಿ ಕರಬೂಜ ಹಣ್ಣಿನ ವ್ಯಾಪಾರವೂ ಚೆನ್ನಾಗಿದೆ. ಕೆಜಿಯ ಲೆಕ್ಕದಲ್ಲಿ 30 ರಿಂದ 70 ರೂ.ವರೆಗೆ ಮಾರಾಟವಾಗುತ್ತಿದೆ. ಹಾಗೆಯೇ ಅನಾನಸು, ಮೂಸಂಬಿ ಸೇರಿ ಇತರ ಹಣ್ಣುಗಳಿಗೂ ಬೇಡಿಕೆ ಹೆಚ್ಚಿದೆ. ವಿಪರೀತ ಉಷ್ಣಾಂಶದಿಂದ ಜನರಲ್ಲಿ ಅನಾರೋಗ್ಯವೂ ಕಾಡುತ್ತಿದೆ. ಕಾಲರಾ, ಜ್ವರ, ವಾಂತಿ-ಭೇದಿ ಪ್ರಕರಣಗಳು ಕಾಣಿಸುತ್ತಿವೆ. ಅಧಿಕ ತಾಪಮಾನದಿಂದ ಜ್ವರ, ನೆಗಡಿ, ಕೆಮ್ಮು, ಸುಸ್ತು ಆಗುವುದು ಸಹಜ. ಜನರು ಶುದ್ಧ ನೀರು ಕುಡಿಯಬೇಕು. ಬೇಸಿಗೆ ಮುಗಿಯುವವರೆಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳಿತು ಎನ್ನುತ್ತಾರೆ ಔಷಧ ಅಂಗಡಿ ವ್ಯಾಪಾರಿ ಪಟಗಿ ವಿಶ್ವನಾಥ.

    ಬೆಳಗ್ಗೆ 9 ರಿಂದ ಸಂಜೆ 5.30 ರವರೆಗೆ ಬಿಸಿಲು ವಿಪರೀತವಾಗಿರುತ್ತದೆ. ಕಾಲರಾ ಹಾಗೂ ಚರ್ಮ ಕಾಯಿಲೆ, ಜ್ವರ ಬರುತ್ತದೆ. ನಿಯಂತ್ರಣಕ್ಕೆ ಸಾಧ್ಯವಾದಷ್ಟು ಜನರು ಹೊರಗೆ ಬಾರದೆ ಮನೆಯಲ್ಲಿ ಇರುವುದು ಒಳ್ಳೆಯದು.
    ನಾಗೇಶ್ ಭಟ್ ವೈದ್ಯ, ಹರಪನಹಳ್ಳಿ

    ಬಿಸಿಲಿನಿಂದ ಬಾಯಾರಿಕೆ ನೀಗಿಸಿಕೊಳ್ಳಲು ಜನ ಎಳನೀರಿಗೆ ಮೊರೆ ಹೋಗಿದ್ದಾರೆ. ದಿನಕ್ಕೆ 80 ರಿಂದ 120 ಎಳನೀರನ್ನು ಮಾರಾಟ ಮಾಡಲಾಗುತ್ತಿದೆ. ಒಂದಕ್ಕೆ 35 ರಿಂದ 40 ರೂ. ಬೆಲೆ ಇದೆ. ತಾಲೂಕಿನ ಯಾವುದೇ ಹಳ್ಳಿಗಳಲ್ಲಿ ಎಳನೀರು ಸಿಗುತ್ತಿಲ್ಲ. ದಾವಣಗೆರೆ ಜಿಲ್ಲೆಯಿಂದ ತರಿಸಿ ಮಾರಾಟ ಮಾಡುತ್ತಿದ್ದೇನೆ.
    ಕೆ.ಮಹಮ್ಮದ್ ಅಲಿ ಎಳನೀರು ವ್ಯಾಪಾರಿ, ಹರಪನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts