More

    ತಂತ್ರಜ್ಞಾನ ಬಳಕೆಯಿಂದ ಪರಿಸರಕ್ಕೆ ಹಾನಿ: ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಕಾಳೇಗೌಡ ನಾಗವಾರ ವಿಷಾದ

    ಮೈಸೂರು: ಪ್ರಪಂಚದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ಇದರ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ಹಾನಿ ಕುರಿತು ಒಬ್ಬರು ಯೋಚಿಸುತ್ತಿಲ್ಲ ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಕಾಳೇಗೌಡ ನಾಗವಾರ ವಿಷಾದ ವ್ಯಕ್ತಪಡಿಸಿದರು.
    ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯಿಂದ ಆಯೋಜಿಸಿರುವ ರಂಗ ಮತ್ತು ನೃತ್ಯ ತರಬೇತಿ ಶಿಬಿರಕ್ಕೆ ರಂಗಾಯಣದ ಶ್ರೀರಂಗಮಂದಿರದಲ್ಲಿ ಬುಧವಾರ ಕಂಸಾಳೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
    ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವೇ ಹೆಚ್ಚು ಬಳಕೆ ಆಗುತ್ತಿದೆ. ಆದರೆ ಅತಿಯಾದ ತಂತ್ರಜ್ಞಾನ ಬಳಕೆಯಿಂದ ಪರಿಸರದ ಮೇಲೆ ಉಂಟಾಗಬಹುದಾದ ಹಾನಿ ಕುರಿತು ಯಾರೂ ಚಿಂತಿಸುತ್ತಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲು ಹಾಳಾಗುತ್ತಿರುವ ಪರಿಸರನ್ನು ಉಳಿಸುವ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ನೀಡಿದರು.
    ಈ ಮನಸ್ಥಿತಿ ಹೀಗೆ ಮುಂದುವರಿದರೆ ನಗರ ಪ್ರದೇಶದಲ್ಲಿ ಹಸಿರು ವಲಯ ದಿನ ಕಳೆದಂತೆ ಕಡಿಮೆಯಾಗುತ್ತದೆ. ಇದರಿಂದ ಪ್ರಾಣಿ-ಪಕ್ಷಿಗಳ ನೆಲೆಗಳು ನಾಶವಾಗುತ್ತವೆ. ಇದಕ್ಕೆ ಉದಾಹರಣೆ ಎನ್ನುವಂತೆ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಇತರೆ ಅನೇಕ ಸಮಸ್ಯೆಗಳು ಉಲ್ಬಣಗೊಳ್ಳುತ್ತಿರುವುದೇ ಸಾಕ್ಷಿ ಎಂದರು.
    ಮಹಾನಗರಿ ಮುಂಬೈನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಯುವ ಸಮೂಹ ಚರ್ಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅನೇಕ ಸಮಸ್ಯೆಗಳನ್ನು ತಂದೊಡ್ಡುವ ಸ್ಥಳವಾಗಿ ಪರಿವರ್ತಿತವಾಗುತ್ತವೆ. ಈ ಸಾಲಿಗೆ ಬೆಂಗಳೂರಿನ ಪರಿಸ್ಥಿತಿಯೂ ವಿಭಿನ್ನವಾಗಿಲ್ಲ ಎಂದು ಎಚ್ಚರಿಸಿದರು.
    ಕುವೆಂಪು ಮೈಸೂರು ವಿವಿ ಕುಲಪತಿಗಳಾಗಿದ್ದಾಗ ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರು ಹಳ್ಳಿಗೆ ಹೋಗಿ ಅಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದು ನಿಶ್ಚಯ ಮಾಡುತ್ತಾರೆ. ಆದರೆ ನಾವು-ನೀವಾಗಿದ್ದರೆ ನಗರ ಪ್ರದೇಶದಲ್ಲೇ ಶಿಕ್ಷಕ ವೃತ್ತಿ ಪಡೆದು ಉಳಿಯಲು ಪ್ರಯತ್ನಪಡುತ್ತಿದ್ದೆವು ಎಂದರು.
    ಯುವ ಜನಾಂಗ ವಿದ್ಯಾಭ್ಯಾಸ ಮುಗಿದ ತಕ್ಷಣ ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸಬೇಕು. ಕುವೆಂಪು ರಚಿತ ಬೆರಳ್‌ಗೆ-ಕೊರಳ್ ನಾಟಕದಲ್ಲಿ ಏಕಲವ್ಯ ಹಾಗೂ ದ್ರೋಣಾಚಾರ್ಯರು ನಡುವಿನ ಗುರು-ಶಿಷ್ಯರ ಸಂಬಂಧವನ್ನು ಎಳೆಎಳೆಯಾಗಿ ಬಿಡಿಸಿದ್ದಾರೆ. ಇಂತಹ ಸಂಬಂಧಗಳ ಕುರಿತು ಶಿಬಿರದಲ್ಲಿ ತಿಳಿಸಬೇಕು ಎಂದು ಸಲಹೆ ನೀಡಿದರು.
    ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ, ಮಹಾರಾಜ ಕಾಲೇಜು ಜನಪದ ವಿಭಾಗದ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ ಮನಾಪುರ, ಮಹಾರಾಣಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ನಂಜುಂಡಯ್ಯ, ಕನ್ನಡ ಪ್ರಾಧ್ಯಾಪಕ ಡಾ.ಕೆ.ಇ.ಗೋವಿಂದೇಗೌಡ, ದೇಸಿರಂಗದ ಕೃಷ್ಣ ಜನಮನ, ಉಪನ್ಯಾಸಕಿ ದಿನಮಣಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts